Advertisement

ವಿವಿಧ ಸ್ಥಳದಲ್ಲಿ 400 ರಕ್ತದ ಮಾದರಿ ಸಂಗ್ರಹ

06:10 AM May 19, 2020 | Team Udayavani |

ಕಲಬುರಗಿ: ಸಮುದಾಯ ಮಟ್ಟದಲ್ಲಿ ಕೋವಿಡ್ ಸೋಂಕು ಹರಡುವಿಕೆಯನ್ನು ಪತ್ತೆ ಹಚ್ಚಲು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌)ನ ವೈದ್ಯ ತಂಡದಿಂದ ಸೋಮವಾರ ಜಿಲ್ಲೆಯ 10 ಸ್ಥಳಗಳಲ್ಲಿ ಕೋವಿಡ್ ರಾಷ್ಟ್ರೀಯ ಸಿರೋ ಕಣ್ಗಾವಲು ಸಮೀಕ್ಷೆ ನಡೆಸಿ 400 ರಕ್ತದ ಮಾದರಿಗಳನ್ನು ಸಂಗ್ರಹಿಸಲಾಗಿದೆ.

Advertisement

ರಾಷ್ಟ್ರೀಯ ಕ್ಷಯರೋಗ ಸಂಶೋಧನಾ ಸಂಸ್ಥೆ ಮತ್ತು ಸ್ಥಳೀಯ ಆರೋಗ್ಯ ಇಲಾಖೆಯ ಸಹಕಾರದೊಂದಿಗೆ 10 ಸ್ಥಳಗಳ ಪ್ರದೇಶವನ್ನು 4 ಕ್ಲಸ್ಟರ್‌ಗಳನ್ನಾಗಿ ವಿಂಗಡಿಸಿ ಪ್ರತಿ ಕ್ಲಸ್ಟರ್‌ನಿಂದ ರ್‍ಯಾಂಡಮ್‌ ಮಾದರಿ ಸಂಗ್ರಹಿಸಲಾಗಿದೆ. ಆಯ್ದ ಮನೆಗಳಲ್ಲಿ ಆಯ್ದ ವ್ಯಕ್ತಿಯೊಂದಿಗೆ ಆಪ್ತ ಸಮಲೋಚನೆ ನಡೆಸಿ, ಪ್ರಶ್ನಾವಳಿಗಳಿಗೆ ಉತ್ತರ ಪಡೆದು ಅವರಿಂದ ಪರೀಕ್ಷೆ ನಡೆಸುವುದಕ್ಕೆ ಸಮ್ಮತಿ ಪಡೆದು 4-5 ಎಂಎಲ್‌ ರಕ್ತದ ಮಾದರಿ ಪಡೆಯಲಾಯಿತು. ಪ್ರತಿ ಕ್ಲಸ್ಟರ್‌ನಿಂದ 10 ಮಾದರಿಗಳು, ಪ್ರತಿ ಸ್ಥಳದಿಂದ 40 ಮಾದರಿ ಸೇರಿದಂತೆ ಒಟ್ಟು 400 ಮಾದರಿಗಳನ್ನು ಸಂಗ್ರಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಶರತ್‌ ಬಿ. ತಿಳಿಸಿದ್ದಾರೆ.

ಬೆಂಗಳೂರಿನಿಂದ ಆಗಮಿಸಿದ ಐಸಿಎಂಆರ್‌ನ ವಿಜ್ಞಾನಿ ಡಾ.ಶ್ರೀನಿವಾಸ, ವೈದ್ಯರಾದ ಡಾ| ಹಂಸವೇಣಿ, ಡಾ| ಸ್ವಾತಿ, ಡಾ| ಚೇತನಾ, ಡಾ| ಕಿರಣ ಹಾಗೂ ಟೆಕ್ನಿಶಿಯನ್‌, ಆರೋಗ್ಯ ಸಹಾಯಕರನ್ನೊಳಗೊಂಡ 20 ಜನರ ತಂಡ ಸೋಮವಾರ ಜಿಲ್ಲೆಯ 10 ಸ್ಥಳಗಳಿಗೆ ಪ್ರತ್ಯೇಕ ಮನೆ-ಮನೆಗೆ ಭೇಟಿ ನೀಡಿ ರಕ್ತದ ಮಾದರಿ ಪಡೆಯಲಾಗಿದೆ ಎಂದು ಹೇಳಿದ್ದಾರೆ.

ಐಸಿಎಂಆರ್‌ ನಿರ್ದೇಶನದಂತೆ 18 ವರ್ಷ ಮೇಲ್ಪಟ್ಟ ವ್ಯಕ್ತಿಗಳಿಂದ ಮಾತ್ರ ರಕ್ತದ ಮಾದರಿಗಳನ್ನು ಸಂಗ್ರಹಿಸಿದ್ದು, ಕೋವಿಡ್ ವಿರುದ್ಧ ಹೋರಾಡಲು ದೇಹದಲ್ಲಿ ಪ್ರತಿಕಾಯವಾಗಿ ಗುರುತಿಸಿಕೊಂಡಿರುವ ಇಮ್ಮೂನೋಗ್ಲೋಬಿನ್ಸ್‌ ಜಿ. ಎಂಟಿಬಾಡೀಸ್‌ ಪತ್ತೆಗೆ ಇಎಲ್‌ಐಎಸ್‌ಎ ವಿಧಾನದ ಪರೀಕ್ಷೆಗೆ ಮಾದರಿಗಳನ್ನು ಚೆನ್ನೈಗೆ ಕಳುಹಿಸಲಾಗುತ್ತದೆ. ಇಎಲ್‌ಐಎಸ್‌ಎ ವಿಧಾನದ ಪರೀಕ್ಷೆ ನಂತರ ಕೋವಿಡ್ ಸೋಂಕು ವಿರುದ್ಧ ಹೋರಾಡಲು ದೇಹದಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಯಾಗಿರುವ ಬಗ್ಗೆ ಅಂಶಗಳು ಬೆಳಕಿಗೆ ಬರಲಿದೆ ಎಂದರು. ಸಮುದಾಯ ಹರಡುವಿಕೆ ಅವಲೋಕಿಸಲು ಕಲಬುರಗಿ, ಚಿತ್ರದುರ್ಗ ಹಾಗೂ ಬೆಂಗಳೂರು ನಗರ ಜಿಲ್ಲೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next