Advertisement

ಬೆಳ್ತಂಗಡಿ: 40 ಶಂಕಿತ ಡೆಂಗ್ಯೂ ಪ್ರಕರಣ

04:15 AM May 29, 2018 | Team Udayavani |

ಬೆಳ್ತಂಗಡಿ: ಇತ್ತೀಚಿನ ದಿನಗಳಲ್ಲಿ ಬೀಳುತ್ತಿರುವ ಮಳೆಯಿಂದ ತಾಲೂಕಿನಲ್ಲಿ ಸಾಂಕ್ರಾಮಿಕ ರೋಗಗಳು ಹೆಚ್ಚಾಗಿವೆ. ಜನತೆ ತೀವ್ರ ತೆರನಾದ ಜ್ವರ ಮೊದಲಾದ ಕಾಯಿಲೆಗಳಿಂದ ಬಳಲುತ್ತಿದ್ದು, ಹಲವೆಡೆ ಶಂಕಿತ ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿವೆ. ಆದರೆ ತಾಲೂಕು ಆಸ್ಪತ್ರೆ ಪ್ರಯೋಗಾಲಯಲ್ಲಿ ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿಲ್ಲ. ಮುಖ್ಯವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಶಂಕಿತ ಪ್ರಕರಣಗಳು ಪತ್ತೆಯಾಗುತ್ತಿದೆ. ರಬ್ಬರ್‌ ತೋಟಗಳಿರುವ ಪ್ರದೇಶಗಳಲ್ಲಿ ಹೆಚ್ಚಾಗಿ ಶಂಕಿತ ಡೆಂಗ್ಯೂ ಪತ್ತೆಯಾಗುತ್ತಿದೆ. ಈಗ ಕಳೆಂಜ ಹಾಗೂ ಕಾಯರ್ತಡ್ಕದಲ್ಲೂ ಡೆಂಗ್ಯೂ ಸಮಸ್ಯೆ ಎದುರಾಗಿದೆ.

Advertisement

ತಾಲೂಕು ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ಹೆಚ್ಚಳ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಆಗಮಿಸುವವರ ಸಂಖ್ಯೆ ಹೆಚ್ಚಾಗಿದೆ. ಎಂದಿಗಿಂತ ಹೆಚ್ಚಿನ ಸರತಿ ಸಾಲು ಇದ್ದು, ಜನತೆ ತಮ್ಮ ಕಾಯಿಲೆಗಳ ಬಗ್ಗೆ ಖಚಿತಪಡಿಸಿಕೊಳ್ಳುತ್ತಿದ್ದಾರೆ. ಪ್ರಯೋಗಾಲಯ ಹಾಗೂ ವಿವಿಧ ವಿಭಾಗಗಳ ಮುಂದೆ ಹೆಚ್ಚಿನ ಜನಸಂದಣಿ ಕಂಡುಬರುತ್ತಿದೆ. ಮಳೆ ಆಗಮಿಸಿ ವಾತಾವರಣ ಬದಲಾಗುತ್ತಿರುವುದರಿಂದ ವಿವಿಧ ರೋಗಗಳು ಬರುತ್ತಿವೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ನಿಯಂತ್ರಣಕ್ಕೆ ಕ್ರಮ
ಸರಕಾರಿ ಆಸ್ಪತ್ರೆ ಅಧಿಕಾರಿಗಳು ರಕ್ತದ ಮಾದರಿಯಲ್ಲಿರುವ ಪ್ಲೇಟ್‌ ಲೆಟ್‌ ಗಳನ್ನು ಪರಿಗಣಿಸುವ ವಿಧಾನ ಖಾಸಗಿ ಆಸ್ಪತ್ರೆಗಳಲ್ಲಿ ಇರುವುದಕ್ಕಿಂತ ಭಿನ್ನವಾಗಿರುವುದರಿಂದ ಪತ್ತೆ ವಿಧಾನದಲ್ಲಿ ವ್ಯತ್ಯಾಸವಿದೆ ಎನ್ನಲಾಗಿದೆ. ಈಗಾಗಲೇ ಮಾದರಿಗಳನ್ನು ಜಿಲ್ಲಾ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ಇದೀಗ ರೋಗಗಳು ಪತ್ತೆಯಾಗಿರುವ ಪ್ರದೇಶಗಳಲ್ಲಿ ವೈದ್ಯಾಧಿಕಾರಿಕಾರಿಗಳು ತುರ್ತು ಕ್ರಮ ಕೈಗೊಳ್ಳುತ್ತಿದ್ದಾರೆ.

ಜಿಲ್ಲಾ ಪ್ರಯೋಗಾಲಯಕ್ಕೆ ಮಾದರಿ
ತಾಲೂಕಿನ ಕಳೆಂಜ ಹಾಗೂ ಕಾಯರ್ತಡ್ಕದಲ್ಲಿ 25, ಬಳಂಜದಲ್ಲಿ 15 ಶಂಕಿತ ಡೆಂಗ್ಯೂ ಪ್ರಕರಣಗಳು ಸೇರಿದಂತೆ ತಾಲೂಕಿನ ವಿವಿಧೆಡೆ ಒಟ್ಟು 40 ಶಂಕಿತ ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿವೆ. ಎಲ್ಲ ಶಂಕಿತ ಪ್ರಕರಣಗಳು ಖಾಸಗಿ ಆಸ್ಪತ್ರೆಗಳಲ್ಲಿ ಪತ್ತೆಯಾಗಿದ್ದು, ದೃಢೀಕರಣಕ್ಕೆ ಜಿಲ್ಲಾ ಪ್ರಯೋಗಾಲಯಕ್ಕೆ ರಕ್ತದ ಮಾದರಿ ರವಾನಿಸಲಾಗಿದೆ. ಕೆಲ ದಿನಗಳಲ್ಲಿ ರೋಗದ ಬಗ್ಗೆ ಸ್ಪಷ್ಟ ಚಿತ್ರಣ ಲಭಿಸಲಿದೆ.

ನೀರು ನಿಲ್ಲದಿರಲಿ
ರಬ್ಬರ್‌ ತೋಟ, ನೀರಿನ ತೊಟ್ಟಿ, ಮೊದಲಾದೆಡೆ ನೀರು ನಿಂತು ಲಾರ್ವಾಗಳು ಉತ್ಪತ್ತಿಯಾಗಿ ಸೊಳ್ಳೆಗಳ ಮೂಲಕ ರೋಗ ಹರಡುತ್ತಿದೆ. ಆದ್ದರಿಂದ ನೀರು ನಿಲ್ಲದಂತೆ ಮಾಡಿದಲ್ಲಿ ರೋಗ ತಡೆಯಲು ಸಾಧ್ಯ ಎಂಬುದು ಆರೋಗ್ಯಾಧಿಕಾರಿಗಳ ಸಲಹೆ. ಸಾರ್ವಜನಿಕರು ಎಲ್ಲೂ ನೀರು ನಿಲ್ಲದಂತೆ ಮಾಡಿದಲ್ಲಿ ರೋಗ ತಡೆಗಟ್ಟಬಹುದು.

Advertisement

ನಿಯಂತ್ರಣ ಕ್ರಮ
ಶಂಕಿತ ಡೆಂಗ್ಯೂ ಪ್ರಕರಣಗಳು ಕಂಡು ಬಂದ ಪ್ರದೇಶಗಳಲ್ಲಿ ಫಾಗಿಂಗ್‌ ಹಾಗೂ ರೋಗನಿಯಂತ್ರಣಕ್ಕೆ ಕ್ರಮಕೈಗೊಳ್ಳಲಾಗಿದೆ. ಈಗಾಗಲೇ ರಕ್ತದ ಮಾದರಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ವರದಿ ಬರಬೇಕಿದೆ. ವೈದ್ಯಾಧಿಕಾರಿಗಳು ಗ್ರಾಮೀಣ ಪ್ರದೇಶಗಳಿಗೆ ತೆರಳಿ ಸಾರ್ವಜನಿಕರಿಗೆ ಅರಿವು ಮೂಡಿಸುತ್ತಿದ್ದಾರೆ. ಸಾರ್ವಜನಿಕಕರು ಮನೆಗಳಲ್ಲಿ ಸೊಳ್ಳೆಪರದೆ ಉಪಯೋಗಿಸಬೇಕು. ಕನಿಷ್ಠ ಕತ್ತಲಾಗುವ ವೇಳೆ ಕಿಟಕಿ ಬಾಗಿಲು ಹಾಕುವುದು ಅಗತ್ಯ. ಆದ ರೀತಿ ನೀರಿನ ಬಳಕೆಯಲ್ಲೂ ಎಚ್ಚರಿಕೆ ವಹಿಸಬೇಕಿದೆ.
– ಡಾ| ಕಲಾಮಧು ಶೆಟ್ಟಿ, ತಾಲೂಕು ಆರೋಗ್ಯಾಧಿಕಾರಿ

ಫಾಗಿಂಗ್‌
ತಾಲೂಕಿನಲ್ಲಿ ಸಾಂಕ್ರಾಮಿಕ ರೋಗ ತಡೆಯಲು ಫಾಗಿಂಗ್‌ ಮಾಡುವಂತೆ ಪಟ್ಟಣ ಪಂಚಾಯತ್‌ ಗೆ ಪತ್ರ ಬರೆಯಲಾಗಿದೆ. ರೋಗಗಳು ಕಂಡು ಬಂದಿರುವ ಗ್ರಾ.ಪಂ. ವ್ಯಾಪ್ತಿಯಲ್ಲಿ ಫಾಗಿಂಗ್‌ ಮಾಡಲು ಪಿಡಿಒಗಳಿಗೆ ಸೂಚನೆ ನೀಡುವ ಮೂಲಕ ರೋಗ ನಿಯಂತ್ರಣಕ್ಕೆ ಕ್ರಮಕೈಗೊಳ್ಳಲಾಗುವುದು.
– ಟಿ.ಸಿ. ಹಾದಿಮನಿ, ತಹಶೀಲ್ದಾರ್‌

— ಹರ್ಷಿತ್‌ ಪಿಂಡಿವನ

Advertisement

Udayavani is now on Telegram. Click here to join our channel and stay updated with the latest news.

Next