ಬೆಂಗಳೂರು: ರಾಜ್ಯದ ಪ್ರತಿ ಇಲಾಖೆಯಲ್ಲೂ 40 ಪರ್ಸೆಂಟ್ ಕಮೀಷನ್ ಹಾವಳಿ ಇದ್ದು ಸಮಾಜ ಕಲ್ಯಾಣ ಇಲಾಖೆ ಸಚಿವರಿಗೂ 40 ಪರ್ಸಂಟೇಜ್ ಕಿಕ್ ಬ್ಯಾಕ್ ಹೋಗಿದೆ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ಗಂಗಾ ಕಲ್ಯಾಣ ಯೋಜನೆಯಲ್ಲಿ 14,537 ಕೊಳವೆ ಬಾವಿ ಮಂಜೂರಾಗಿದ್ದು, 431 ಕೋಟಿ ರೂ. ಯೋಜನೆಯಲ್ಲಿ ಅವ್ಯವಹಾರ ಆಗಿದೆ.ಅರಸು ನಿಗಮದಲ್ಲಿ ಕೊಳವೆ ಬಾವಿ ಕೊರೆಯಲು 93 ಸಾವಿರ ರೂ. ನಿಗದಿ ಮಾಡಿದರೆ, ಅಂಬೇಡ್ಕರ್ ನಿಗಮದಲ್ಲಿ 1.18 ಲಕ್ಷ ರೂ. ನಿಗದಿ ಮಾಡಿದ್ದಾರೆ. ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಪ್ರಮಾಣಿಕರು ಎಂದು ತಿಳಿದಿದ್ದೆ, ಆದರೆ ಅವರ ಆದೇಶ ನೋಡಿದರೆ ಅನುಮಾನ ಬರುತ್ತದೆ ಎಂದು ಹೇಳಿದರು.
ಕಮೀಷನ್ ಪ್ರಕರಣದಲ್ಲಿ ಇನ್ನಿಬ್ಬರು ಸಚಿವರು ಇದ್ದು ಸರಿಯಾಗಿ ತನಿಖೆ ನಡೆದರೆ ಇನ್ನೂ ಎರಡು ವಿಕೆಟ್ ಬೀಳುತ್ತದೆ . 545 ಪಿಎಸ್‌ಐ ಹುದ್ದೆಗೆ ಪರೀಕ್ಷೆಯಲ್ಲೂ ಅವ್ಯವಹಾರ ಆಗಿದೆ. ಈ ಬಗ್ಗೆ ಅಭ್ಯರ್ಥಿಗಳೇ ದೂರು ನೀಡಿದ್ದಾರೆ. ಒಬ್ಬ ಅಭ್ಯರ್ಥಿಯಿಂದ 70 ರಿಂದ 80 ಲಕ್ಷ ರೂ ಲಂಚ ಪಡೆದು ಆಯ್ಕೆ ಮಾಡಿದ್ದಾರೆ. ಅಧಿಕಾರಿಗಳು,ಗೃಹ ಸಚಿವರು ಇದರ ಹಿಂದಿದ್ದಾರೆ ಎಂದು ಆರೋಪಿಸಿದರು.
ಇದನ್ನೂ ಓದಿ:ಮುಂದಿನ 10 ವರ್ಷಗಳಲ್ಲಿ ಭಾರತದಲ್ಲಿ ದಾಖಲೆ ಸಂಖ್ಯೆಯ ವೈದ್ಯರು ಲಭ್ಯ: ಪ್ರಧಾನಿ ಮೋದಿ
ಪಿಎಸ್‌ಐ ಪ್ರಕರಣದಲ್ಲಿ ಪ್ರಶ್ನೆ ಪತ್ರಿಕೆ ಬಿಜೆಪಿಯ ಕಾರ್ಯದರ್ಶಿ ಶಾಲೆಯಲ್ಲಿ ಲೀಕ್ ಆಗಿದೆ. ಆ ಕಾರ್ಯದರ್ಶಿ ಮನೆಗೆ ಗೃಹ ಸಚಿವರು ಹೋಗಿದ್ದರು. ಈ ಎಲ್ಲಾ ದಾಖಲೆಯನ್ನ ಮುಂದಿನ ದಿನಗಳಲ್ಲಿ ಬಿಡುಗಡೆ ಮಾಡಲಿದ್ದೇವೆ ಎಂದು ಹೇಳಿದರು.
ರಾಜ್ಯ ಬಿಜೆಪಿ ಸರ್ಕಾರದ 40 ಪರ್ಸೆಂಟ್ ವಿಚಾರ ಸರಿಯಾಗಿ ತನಿಖೆ ನಡೆಸಿದರೆ ಅರ್ಧ ಸಚಿವ ಸಂಪುಟ ಬಿದ್ದು ಹೋಗುತ್ತದೆ ಎಂದು ಲೇವಡಿ ಮಾಡಿದರು.