ವಾಷಿಂಗ್ಟನ್: ಸರ್ಕಾರ ನಡೆಸುವ ವಲಸಿಗರ ಕೇಂದ್ರದಲ್ಲಿ ಅಗ್ನಿ ದುರಂತ ಸಂಭವಿಸಿ ಕನಿಷ್ಠ 40 ಮಂದಿ ಸಜೀವ ದಹನವಾಗಿರುವ ಘಟನೆ ಮೆಕ್ಸಿಕೋದ ಗಡಿ ನಗರವಾದ ಸಿಯುಡಾಡ್ ಜುವಾರೆಜ್ ಸೋಮವಾರ ರಾತ್ರಿ ಸಂಭವಿಸಿರುವುದು ವರದಿಯಾಗಿದೆ.
ಮೆಕ್ಸಿಕೋದ ರಾಷ್ಟ್ರೀಯ ವಲಸೆ ಸಂಸ್ಥೆಯು ನಡೆಸುವ ವಲಸಿಗರ ಕೇಂದ್ರದಲ್ಲಿ ಈ ದುರಂತ ಸಂಭವಿಸಿದೆ. ಘಟನೆಯಲ್ಲಿ ಕನಿಷ್ಠ 40 ಮೃತಪಟ್ಟು, 28 ಮಂದಿಗೆ ಗಾಯಾಗಳಾಗಿವೆ.
ವಲಸಿಗರು ತಮ್ಮನ್ನು ಗಡೀಪಾರು ಮಾಡಬಹುದೆನ್ನುವ ಭೀತಿಯಿಂದ ಹಾಸಿಗೆಗಳು ಸುಟ್ಟು ಹಾಕಿ ಪ್ರತಿಭಟನೆ ನಡೆಸಿದ್ದಾರೆ ಎಂದು ಮೆಕ್ಸಿಕನ್ ಅಧ್ಯಕ್ಷ ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್ ಹೇಳಿದ್ದಾರೆ.
ಬೆಂಕಿ ಕಾಣಿಸಿಕೊಂಡು ಹೊಗೆ ದಟ್ಟನೆ ಕಂಡರೂ ಭದ್ರತಾ ಸಿಬ್ಬಂದಿ ಸೆಲ್ ಗಳನ್ನು ತೆರೆಯುವ ಬದಲು ದೂರ ಓಡಿಹೋಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ವಲಸಿಗರನ್ನು ಸಣ್ಣ ಸೆಲ್ ನಲ್ಲಿ ಹಾಕಲಾಗಿದೆ. ಇಡೀ ದಿನ ಅವರಿಗೆ ಕುಡಿಯಲು ನೀರು ಸಿಗುತ್ತಿರಲಿಲ್ಲ ಎನ್ನುವ ಕಾರಣದಿಂದ ಅವರು ಪ್ರತಿಭಟನೆ ನಡೆಸಿದ್ದಾರೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ವಲಸಿಗರ ಕೇಂದ್ರದಲ್ಲಿ ಒಟ್ಟು 68 ಪುರುಷರಿದ್ದರು. ಗ್ವಾಟೆಮಾಲಾ, ಹೊಂಡುರಾಸ್, ಎಲ್ ಸಾಲ್ವಡಾರ್, ವೆನೆಜುವೆಲಾ, ಕೊಲಂಬಿಯಾ ಮತ್ತು ಈಕ್ವೆಡಾರ್ ದೇಶದ ಪ್ರಜೆಗಳು ಮೃತ ಹಾಗೂ ಗಾಯಗೊಂಡವರು ಎನ್ನಲಾಗಿದೆ.