ಬೆಂಗಳೂರು: ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಅನುಕೂಲ ಮತ್ತು ಮೌಲ್ಯಮಾಪಕರ ಸಹಾಯಕ್ಕಾಗಿ ಪಿಯು ಶಿಕ್ಷಣ ಇಲಾಖೆಯು ಪ್ರಸಕ್ತ ಸಾಲಿನಿಂದ 40 ಪುಟಗಳ ಉತ್ತರ ಪತ್ರಿಕೆ ನೀಡಲು ತೀರ್ಮಾನಿಸಿದೆ. ಈ ಹಿಂದಿನ ವರ್ಷಗಳಲ್ಲಿ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಗೆ 24 ಪುಟಗಳ ಉತ್ತರ ಪತ್ರಿಕೆಯನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಗುತಿತ್ತು. 24 ಪುಟಗಳ ಉತ್ತರ ಪತ್ರಿಕೆ ಮುಗಿದ ಬಳಿಕ ವಿದ್ಯಾರ್ಥಿಗಳು ಪಡೆಯುವ ಹೆಚ್ಚುವರಿ ಹಾಳೆಯಲ್ಲಿ ವಿದ್ಯಾರ್ಥಿಗಳು ನೋಂದಣಿ ಸಂಖ್ಯೆ ನಮೂದಿಸಿ ಬಳಿಕ ಮುಖ್ಯ ಉತ್ತರ ಪತ್ರಿಕೆ ಜತೆ ಟ್ಯಾಗ್ ಮಾಡಬೇಕಿತ್ತು.
ಕೊಠಡಿ ಮೇಲ್ವಿಚಾರಕರು ಟ್ಯಾಗ್, ಹಾಳೆ ವಿತರಣೆಯಲ್ಲಿ ಶ್ರಮಿಸಬೇಕಿತ್ತು. ಅಲ್ಲದೆ ಇದು ವಿದ್ಯಾರ್ಥಿಗಳು ಮತ್ತು ಮೌಲ್ಯಮಾಪಕರಿಗೂ ತೊಡಕಾಗಿತ್ತು. ಹೀಗಾಗಿ ವಿದ್ಯಾರ್ಥಿಗಳು, ಮೌಲ್ಯಮಾಪಕರು ಹಾಗೂ ಕೊಠಡಿ ಮೇಲ್ವಿಚಾರಕರ ಹಿತದೃಷ್ಟಿಯಿಂದ ಇಲಾಖೆಯು ಈ ವರ್ಷದಿಂದಲೇ ಮುಖ್ಯ ಉತ್ತರ ಪತ್ರಿಕೆಯ ಪುಟಗಳ ಸಂಖ್ಯೆಯನ್ನೇ ಏರಿಕೆ ಮಾಡಿದೆ ಎಂದು ಪಿಯು ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು
ಉದಯವಾಣಿಗೆ ತಿಳಿಸಿದ್ದಾರೆ.
ವಿದ್ಯಾರ್ಥಿಗಳಿಗೆ ಏನು ಅನುಕೂಲ: ಉತ್ತರ ಪತ್ರಿಕೆಯು 40 ಪುಟಗಳಿಂದ ಕೂಡಿರುವುದರಿಂದ ಪದೇಪದೆ ಹೆಚ್ಚುವರಿ ಹಾಳೆ ಪಡೆಯುವ ಅಗತ್ಯವಿಲ್ಲ. 2-3 ಬಾರಿ ಉತ್ತರ ಪತ್ರಿಕೆಯಲ್ಲಿ ನೋಂದಣಿ ಸಂಖ್ಯೆ ಬರೆಯುವುದು ತಪ್ಪುತ್ತದೆ. ಉತ್ತರ ಪತ್ರಿಕೆ ಟ್ಯಾಗ್ ಮಾಡುವ ಸಮಸ್ಯೆಯಿಲ್ಲ. ಹೆಚ್ಚುವರಿ ಹಾಳೆ ಮುಖ್ಯ ಉತ್ತರ ಪತ್ರಿಕೆಯಿಂದ ಬೇರ್ಪಟ್ಟು ಅಂಕ ಕಡಿಮೆ ಬರಬಹುದೆಂಬ ಆತಂಕವಿಲ್ಲ. ಕೆಲವು ವಿದ್ಯಾರ್ಥಿಗಳ ಹೆಚ್ಚುವರಿ ಹಾಳೆ ಬೇರೆ ವಿದ್ಯಾರ್ಥಿಗಳ ಮುಖ್ಯ ಉತ್ತರ ಪತ್ರಿಕೆಯೊಂದಿಗೆ ಸೇರಬಹುದಾದ ಸಾಧ್ಯತೆ ತಪ್ಪಲಿದೆ. ಇದೆಲ್ಲದರ ಜತೆ ಒಂದೇ ಉತ್ತರ ಪತ್ರಿಕೆಯಲ್ಲಿ ಸರಾಗವಾಗಿ ಉತ್ತರ ಬರೆಯಬಹುದಾಗಿದೆ.
ಮೌಲ್ಯಮಾಪಕರಿಗೆ ಆಗುವ ಅನುಕೂಲ: ಮೌಲ್ಯಮಾಪಕರು ಎಷ್ಟೇ ಜಾಗರೂಕರಾಗಿದ್ದರೂ ಉತ್ತರ ಪತ್ರಿಕೆಯಲ್ಲಿ ಕೆಲವೊಂದು ಸಣ್ಣಪುಟ್ಟ ಲೋಪಗಳು ಆಗುವುದುಂಟು. ವಿದ್ಯಾರ್ಥಿಗಳು ಪಡೆದಿರುವ ಹೆಚ್ಚುವರಿ ಹಾಳೆಯಿಂದಲೇ ಕಣ್‌ತಪ್ಪಾಗುವ ಸಾಧ್ಯತೆ ಹೆಚ್ಚಿರುತ್ತದೆ. ಅಂಕಗಳ ಎಣಿಕೆ ವೇಳೆ ಹೆಚ್ಚುವರಿ ಹಾಳೆಗಳು ಬಿಟ್ಟುಹೋಗುವ ಸಾಧ್ಯತೆ ಇರುತ್ತದೆ. ಅಲ್ಲದೆ, ಫಲಿತಾಂಶದ ನಂತರ ಉತ್ತರ ಪತ್ರಿಕೆ ಸ್ಕ್ಯಾನಿಂಗ್, ಮರುಮೌಲ್ಯಮಾಪನ ಮತ್ತು ಅಂಕಗಳ ಮರುಎಣಿಕೆ ಸಂದರ್ಭದಲ್ಲಿ ಹೆಚ್ಚುವರಿ ಹಾಳೆಗಳನ್ನು ಮುಖ್ಯ ಉತ್ತರ ಪತ್ರಿಕೆಯಿಂದ ಬೇರ್ಪಡಿಸುವ ಸಂದರ್ಭ ಇರುತ್ತದೆ. 40 ಪುಟಗಳ ಉತ್ತರ ಪತ್ರಿಕೆ ನೀಡುವುದರಿಂದ ಮೌಲ್ಯಮಾಪಕರಿಗೂ ಹೆಚ್ಚಿನ ಅನುಕೂಲ ಆಗಲಿದೆ.
ಪ್ರಾಂಶುಪಾಲರಿಗೆ ಸೂಚನೆ: ದ್ವಿತೀಯ ಪಿಯು 2020ರ ವಾರ್ಷಿಕ ಪರೀಕ್ಷೆಯಿಂದ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೊಠಡಿಯಲ್ಲಿ ಹೆಚ್ಚುವರಿ ಹಾಳೆ ನೀಡುವುದನ್ನು ತಪ್ಪಿಸಲು, ವಿದ್ಯಾರ್ಥಿಗಳಿಗೆ ಉಂಟಾಗುವ ತೊಂದರೆ, ಗೊಂದಲ ನಿವಾರಿಸಲು ಇಲಾಖೆ ಕೂಲಂಕಷವಾಗಿ ಪರಿಶೀಲಿಸಿ, 24 ಪುಟಗಳ ಉತ್ತರ ಪತ್ರಿಕೆಗಳ ಬದಲಾಗಿ 40 ಪುಟಗಳ ಉತ್ತರ ಪತ್ರಿಕೆಯನ್ನು ನಿರ್ಧರಿಸಲಾಗಿದೆ. ಈ ಬಗ್ಗೆ ಎಲ್ಲ ಕಾಲೇಜುಗಳ ಪ್ರಾಂಶುಪಾಲರು ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಎ4 ಮಾದರಿಯ 30ಗೆರೆ ಹೊಂದಿರುವ ಒಂದು ಪುಟವನ್ನು ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆ ರೂಪದಲ್ಲಿ ತೋರಿಸಬೇಕು ಎಂದು ಪಿಯು ಶಿಕ್ಷಣ ಇಲಾಖೆಯ ನಿರ್ದೇಶಕರು ಕಾಲೇಜುಗಳ ಪ್ರಾಂಶುಪಾಲರಿಗೆ ಸೂಚಿಸಿದ್ದಾರೆ.