ವಾಷಿಂಗ್ಟನ್: ಕಳೆದ 15 ವರ್ಷಗಳ ಕಾಲ ಪಾಕಿಸ್ತಾನದಲ್ಲಿ ಯಶಸ್ವಿಯಾಗಿ ಆಡಳಿತ ನಡೆಸಿದ ಯಾವ ಸರ್ಕಾರವೂ ಅಮೆರಿಕಕ್ಕೆ ಉಗ್ರರಿಗೆ ಸಂಬಂಧಿಸಿದ ಸತ್ಯವನ್ನೇ ಹೇಳಿರಲಿಲ್ಲವಾಗಿತ್ತು ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದು, ಪ್ರಸ್ತುತ ಪಾಕಿಸ್ತಾನದಲ್ಲಿ 40 ವಿವಿಧ ಭಯೋತ್ಪಾದಕ ಸಂಘಟನೆಗಳಿವೆ ಎಂಬುದಾಗಿ ಒಪ್ಪಿಕೊಂಡಿದ್ದಾರೆ!
ಭಯೋತ್ಪಾದನೆ ವಿರುದ್ಧದ ಅಮೆರಿಕದ ಹೋರಾಟದ ಜತೆಗೆ ನಾವಿದ್ದೇವೆ. 9/11 ದಾಳಿಗೆ ಸಂಬಂಧಿಸಿದಂತೆಯೂ ಪಾಕಿಸ್ತಾನ ಏನೂ ಕ್ರಮ ಕೈಗೊಂಡಿಲ್ಲವಾಗಿತ್ತು. ಅಲ್ ಖೈದಾ ಅಫ್ಘಾನಿಸ್ತಾನದಲ್ಲಿ ಕಾರ್ಯಾಚರಿಸುತ್ತಿದೆ. ಪಾಕಿಸ್ತಾನದಲ್ಲಿ ತಾಲಿಬಾನ್ ಉಗ್ರರು ಇಲ್ಲ ಎಂದು ಖಾನ್ ವಿವರಿಸಿದ್ದಾರೆ.
ಆದರೆ ನಾವು ಅಮೆರಿಕದ ಹೋರಾಟದಲ್ಲಿ ನಾವು ಕೈಜೋಡಿಸುತ್ತೇವೆ. ದುರದೃಷ್ಟ ಎಂಬಂತೆ ಭಯೋತ್ಪಾದನೆ ವಿಚಾರದಲ್ಲಿ ತಪ್ಪು ಸಂದೇಶ ರವಾನೆಯಾಗುವಂತಾಗಿದೆ. ನನ್ನ ನೇತೃತ್ವದ ಸರ್ಕಾರಕ್ಕೂ ಕಳಂಕವಾಗಿದೆ. ನಾವು ಭಯೋತ್ಪಾದಕರ ಕುರಿತ ಸತ್ಯವನ್ನು ನಿಖರವಾಗಿ ಅಮೆರಿಕಕ್ಕೆ ತಿಳಿಸಲೇ ಇಲ್ಲ ಎಂಬುದಾಗಿ ಹೇಳಿದ್ದಾರೆ.
ಅಮೆರಿಕ ಸೆನೆಟ್ ನ ಶೈಲಾ ಜಾಕ್ಸನ್ ಲೀ ಕ್ಯಾಪಿಟೋಲ್ ಹಿಲ್ ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಖಾನ್ ಮೊತ್ತ ಮೊದಲ ಬಾರಿಗೆ ಪಾಕಿಸ್ತಾನದಲ್ಲಿ ಕಾರ್ಯಾಚರಿಸುತ್ತಿರುವ ಉಗ್ರರ ಸಂಘಟನೆ ಬಗ್ಗೆ ಬಹಿರಂಗವಾಗಿ ತಿಳಿಸುವ ಮೂಲಕ ಒಪ್ಪಿಕೊಂಡಿದ್ದಾರೆ.
ಪಾಕಿಸ್ತಾನದೊಳಗೆ 40 ವಿವಿಧ ಭಯೋತ್ಪಾದಕ ಸಂಘಟನೆಗಳು ಕಾರ್ಯಾಚರಿಸುತ್ತಿವೆ. ಒಟ್ಟು 40 ಸಾವಿರ ಉಗ್ರರಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಜನರು ಕೂಡಾ ಅದರ ಸೆಳೆತಕ್ಕೆ ಒಳಗಾಗುತ್ತಿರುವುದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ. ಹೀಗಾಗಿ ಭಯೋತ್ಪಾದಕರ ವಿರುದ್ಧದ ಹೋರಾಟಕ್ಕೆ ನೆರವು ನೀಡುವ ಮೂಲಕ ಗೆಲುವು ಸಾಧಿಸಲು ಕೈಜೋಡಿಸಬೇಕಾಗಿದೆ ಎಂದು ಖಾನ್ ತಿಳಿಸಿದ್ದಾರೆ.
ಶಾಂತಿ ಸ್ಥಾಪನೆ, ಶಾಂತಿ ಮಾತುಕತೆ ಮೂಲಕ ಉಗ್ರರನ್ನು ಶರಣಾಗತಗೊಳಿಸುವುದು ತುಂಬಾ ಸರಳವಾದ ಕೆಲಸವಲ್ಲ. ಅಫ್ಘಾನಿಸ್ತಾನದಲ್ಲಿನ ಪರಿಸ್ಥಿತಿ ತುಂಬಾ ಕ್ಲಿಷ್ಟಕರವಾಗಿದೆ. ಆದರೆ ಉಳಿದಂತೆ ನಾವು ನಮ್ಮ ಕೈಯಲ್ಲಾದ ಕ್ರಮಕೈಗೊಳ್ಳುತ್ತೇವೆ. ಇಡೀ ದೇಶವೇ ನನ್ನ ಬೆನ್ನಿಗೆ ನಿಂತಿದೆ, ಪಾಕಿಸ್ತಾನದ ಮಿಲಿಟರಿ, ಭದ್ರತಾ ಪಡೆಗಳು ಕೂಡಾ ನನ್ನ ಬೆಂಬಲಕ್ಕಿವೆ. ನಮ್ಮೆಲ್ಲರದ್ದೂ ಒಂದೇ ಗುರಿಯಾಗಿದೆ, ಅದು ಅಮೆರಿಕದ್ದು ಕೂಡಾ ಹೌದು. ಆ ನಿಟ್ಟಿನಲ್ಲಿ ಅಪ್ಘಾನಿಸ್ತಾನದಲ್ಲಿ ನಾವು ಆದಷ್ಟು ಶೀಘ್ರವಾಗಿ ಶಾಂತಿಯುತವಾಗಿ ಸಮಸ್ಯೆಯನ್ನು ಬಗೆಹರಿಸಬೇಕಾಗಿದೆ ಎಂದು ಖಾನ್ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.