ಪಣಂಬೂರು: ಮೆಡಿಕಲ್ ಆಕ್ಸಿಜನ್ ತುರ್ತು ಆವಶ್ಯಕತೆಯನ್ನು ಪರಿಗಣಿಸಿ ಸಮುದ್ರ ಸೇತು-2 ಕಾರ್ಯಾಚರಣೆ ಮೂಲಕ ನೌಕಾಪಡೆಯ ಐಎನ್‌ಎಸ್ ತಲ್ವಾರ್ ಹಡಗು ಬಹ್ರೈನ್‌ನಿಂದ 40 ಮೆಟ್ರಿಕ್ ಟನ್ ಆಕ್ಸಿಜನ್ ಹೊತ್ತು ಬುಧವಾರ ನವಮಂಗಳೂರು ಬಂದರಿಗೆ ತಲುಪಿತು.
ಬಹ್ರೈನ್‌ನ ಮನಾಮಾ ಬಂದರಿ ನಿಂದ ಹೊರಟ ಹಡಗು ಎರಡು ಕ್ರಯೋಜೆನಿಕ್ ಐಸೋ ಕಂಟೈನರ್‌ಗಳಲ್ಲಿ ಆಕ್ಸಿಜನ್ ಟ್ಯಾಂಕರ್‌ಗಳನ್ನು ಹೇರಿಕೊಂಡು ಅಪರಾಹ್ನ 1.30ರ ವೇಳೆಗೆ ನವಮಂಗಳೂರು ಬಂದರನ್ನು ತಲುಪಿತು. ಟ್ಯಾಂಕರ್‌ಗಳನ್ನು ಬೃಹತ್ ಕ್ರೇನ್‌ಗಳ ಮೂಲಕ ಲಾರಿಗಳಿಗೆ ಲೋಡ್ ಮಾಡಿ ಜಿಲ್ಲಾಡಳಿತಕ್ಕೆ ಹಸ್ತಾಂತರಿಸಲಾಯಿತು.
ಪ್ರಥಮ ಸಮುದ್ರ ಸೇತು ಕಾರ್ಯಾಚರಣೆ :
ಹಡಗು ಬಂದರು ತಲುಪುವವರೆಗೆ ಇತರ ಹಡಗುಗಳ ಬಂದರು ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ಇದು ಮಂಗಳೂರು ಬಂದರು ಮೂಲಕ ಪ್ರಥಮ ಸಮುದ್ರ ಸೇತು ಕಾರ್ಯಾಚರಣೆಯಾಗಿದೆ. ರಾಜ್ಯದ ಬೇಡಿಕೆಗೆ ಅನುಗುಣವಾಗಿ ಇದನ್ನು ಪೂರೈಕೆ ಮಾಡಲು ಉದ್ದೇಶಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದ ನಳಿನ್ ಕುಮಾರ್ ಕಟೀಲು, ಶಾಸಕ ಡಾ| ಭರತ್ ಶೆಟ್ಟಿ ವೈ., ವೇದವ್ಯಾಸ ಕಾಮತ್, ಮೇಯರ್ ಪ್ರೇಮಾನಂದ ಶೆಟ್ಟಿ, ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ., ಎನ್‌ಎಂಪಿಟಿ ಚೇಯರ್‌ಮನ್ ಡಾ| ಎ.ವಿ. ರಮಣ, ರೆಡ್‌ಕ್ರಾಸ್‌ನ ಪ್ರಭಾಕರ ಶರ್ಮ, ಕೋಸ್ಟ್ ಗಾರ್ಡ್‌ನ ಡಿಐಜಿ ವೆಂಕಟೇಶ್ ಮೊದಲಾದವರು ಉಪಸ್ಥಿತರಿದ್ದರು.
ಬೆಂಗಳೂರು, ದ.ಕ., ಉಡುಪಿಗೆ ಹಂಚಿಕೆ :
ಒಟ್ಟು 40 ಮೆ.ಟನ್ ಲಿಕ್ವಿಡ್ ಆಕ್ಸಿಜನ್‌ನಲ್ಲಿ 20 ಮೆ.ಟನ್ ಬೆಂಗಳೂರಿಗೆ ಹಾಗೂ ಉಳಿದ 20 ಮೆ.ಟನ್ ಅನ್ನು ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ತುರ್ತು ಸೇವೆಗೆ ಬಳಸಿಕೊಳ್ಳಲಾಗುತ್ತದೆ.