Advertisement

ರೆಡ್ಡಿಗೆ ಜಾಮೀನು ನೀಡಲು 40 ಕೋಟಿ ಆಫ‌ರ್‌ ಬಂದಿತ್ತು!

11:21 PM Aug 27, 2019 | Lakshmi GovindaRaj |

ಹೈದರಾಬಾದ್‌: ಕರ್ನಾಟಕದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಯನ್ನು ಬಿಡುಗಡೆ ಮಾಡಿದರೆ 40 ಕೋಟಿ ರೂ. ಲಂಚ ನೀಡುವ ಆಫ‌ರ್‌ ನೀಡಲಾಗಿತ್ತು ಎಂದು ಸಿಬಿಐ ವಿಶೇಷ ಕೋರ್ಟ್‌ನ ನಿವೃತ್ತ ನ್ಯಾಯಾಧೀಶ ಬಿ.ನಾಗಮಾರುತಿ ಶರ್ಮಾ ಹೇಳಿದ್ದಾರೆ. ಸೋಮವಾರ ಹೈದರಾಬಾದ್‌ನ ಭ್ರಷ್ಟಾಚಾರ ನಿಗ್ರಹ ದಳದ ಕೋರ್ಟ್‌ನಲ್ಲಿ ನಡೆದ ವಿಚಾರಣೆ ವೇಳೆ ಸ್ವತಃ ಶರ್ಮಾ ಅವರೇ ಖುದ್ದಾಗಿ ಹಾಜರಾಗಿ ಸಾಕ್ಷ್ಯ ನುಡಿದಿದ್ದಾರೆ.

Advertisement

“ನಾನು ಈ ಕೊಡುಗೆಯನ್ನು ಸಾರಾಸಗಟಾಗಿ ತಿರಸ್ಕರಿಸಿ, ರಿಜಿಸ್ಟ್ರಾರ್‌ ಮನೆಯಿಂದ ಹೊರ ನಡೆದಿದ್ದೆ’ ಎಂದು ಅವರು ಹೇಳಿದ್ದಾರೆ. 2012ರ ಏಪ್ರಿಲ್‌ ಮೂರನೇ ವಾರದಲ್ಲಿ ಆಗಿನ ರಿಜಿಸ್ಟ್ರಾರ್‌ ಆಗಿದ್ದ ಕೆ.ಲಕ್ಷ್ಮೀ ನರಸಿಂಹ ರಾವ್‌ ತಮಗೆ ಫೋನ್‌ ಮಾಡಿ ಮನೆಗೆ ಬರುವುದಾಗಿ ಹೇಳಿದ್ದರು. ರಾವ್‌ ತಮಗಿಂತ ಹಿರಿಯರು ಮತ್ತು ಉನ್ನತ ಹುದ್ದೆಯಲ್ಲಿರುವ ಕಾರಣ ತಾವೇ ಅವರ ನಿವಾಸಕ್ಕೆ ಭೇಟಿ ನೀಡುವುದಾಗಿ ಹೇಳಿದೆ.

ಅದರಂತೆ 2012ರ ಏ.18ರಂದು ಅವರ ನಿವಾಸಕ್ಕೆ ಭೇಟಿ ನೀಡಿದೆ. ಈ ಸಂದರ್ಭದಲ್ಲಿ ಗಾಲಿ ಜನಾರ್ದನ ರೆಡ್ಡಿಗೆ ಜಾಮೀನು ನೀಡುವುದಕ್ಕೆ ಪ್ರತಿಯಾಗಿ 40 ಕೋಟಿ ರೂ. ಆಫ‌ರ್‌ ವಿಚಾರ ಪ್ರಸ್ತಾಪಿಸಿದರು. ಅದನ್ನು ನಾನು ತಿರಸ್ಕರಿಸಿ, ನ್ಯಾಯಯುತವಲ್ಲದ ಮಾರ್ಗ ನನಗೆ ಸಾವಿಗೆ ಸಮಾನ ಎಂಬ ಅಂಶ ವಿವರಿಸಿ, ಕೂಡಲೇ ಅಲ್ಲಿಂದ ಹೊರಟೆ ಎಂದು ಕೋರ್ಟ್‌ಗೆ ಶರ್ಮಾ ತಿಳಿಸಿದ್ದಾರೆ.

ಹೈಕೋರ್ಟ್‌ ರಿಜಿಸ್ಟ್ರಾರ್‌ ಆಗಿದ್ದ ಹಿನ್ನೆಲೆಯಲ್ಲಿ ಮತ್ತು ಅವರಿಗೆ ನನ್ನಿಂದ ಏನಾದರೂ ಮಾಹಿತಿ ಬೇಕಾಗಿರಬಹುದು ಎಂಬ ಕಾರಣಕ್ಕೆ ನಾನು ಅವರ ಮನೆಗೆ ತೆರಳಿದ್ದೆ ಎಂದು ಹೇಳಿದ್ದಾರೆ. ಒಬಳಾಪುರಂ ಮೈನಿಂಗ್‌ ಕಂಪನಿ ಗಣಿ ಅಕ್ರಮ ನಡೆಸಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ 2011 ಸೆಪ್ಟೆಂಬರ್‌ನಲ್ಲಿ ಸಿಬಿಐ ಗಾಲಿ ಜನಾರ್ದನ ರೆಡ್ಡಿಯನ್ನು ಬಂಧಿಸಿ ಹೈದಾರಾಬಾದ್‌ಗೆ ಕರೆದೊಯ್ದು ಚಂಚಲಗುಡ ಜೈಲಿನಲ್ಲಿ ಇರಿಸಿತ್ತು.

2012 ಏಪ್ರಿಲ್‌ನಲ್ಲಿ ಆಂಧ್ರಪ್ರದೇಶ ಹೈಕೋರ್ಟ್‌ನ ತನಿಖೆಗಳ ವಿಭಾಗದ ರಿಜಿಸ್ಟ್ರಾರ್‌ ಆಗಿದ್ದ ಕೆ.ಲಕ್ಷ್ಮೀ ನರಸಿಂಹ ರಾವ್‌ ಎಂಬುವರು ಈ ಆಫ‌ರ್‌ ಮಾಡಿದ್ದರು ಎಂದು ಆರೋಪಿಸಲಾಗಿತ್ತು. ಇದಾದ ಬಳಿಕ ರೆಡ್ಡಿಗೆ ಶರ್ಮಾ ಜಾಮೀನು ನಿರಾಕರಿಸಿದ್ದರು. ನಂತರ ಅವರ ಸ್ಥಾನಕ್ಕೇ ನೇಮಕಗೊಂಡಿದ್ದ ನ್ಯಾಯಾಧೀಶ ಪಟ್ಟಾಭಿರಾಮ ರಾವ್‌ ಜಾಮೀನು ನೀಡಿದ್ದರು.

Advertisement

ಸೆ.13ಕ್ಕೆ ವಿಚಾರಣೆ: ಪ್ರಕರಣದ ಮುಂದಿನ ವಿಚಾರಣೆ ಸೆ.13ರಂದು ನಡೆಯಲಿದೆ. ಈ ಸಂದರ್ಭದಲ್ಲಿ ಗಾಲಿ ಜನಾರ್ದನ ರೆಡ್ಡಿ ಪರ ವಕೀಲರು ನಿವೃತ್ತ ನ್ಯಾಯಾಧೀಶರನ್ನು ಪಾಟಿ ಸವಾಲಿಗೆ ಒಳಪಡಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next