Advertisement

ಸೇತುವೆಗಳ ಸುಸ್ಥಿತಿಗೆ 40 ಕೋಟಿ

10:33 AM Dec 09, 2019 | Team Udayavani |

ಬೆಂಗಳೂರು: ನಗರದ 24 ಪ್ರಮುಖ ಮೇಲ್ಸೇತುವೆ, ಅಂಡರ್‌ ಪಾಸ್‌ ಮತ್ತು ತೂಗು ಸೇತುವೆಗಳಲ್ಲಿನ ಲೋಪ ಸರಿಪಡಿಸಲು ಬಿಬಿಎಂಪಿ 40 ಕೋಟಿ ರೂ. ಮೀಸಲಿರಿಸಿದ್ದು, ಟೆಂಡರ್‌ ಕರೆಯಲು ಸಿದ್ಧತೆ ನಡೆಸುತ್ತಿದೆ.

Advertisement

ಇತ್ತೀಚೆಗೆ ಸುಮನಹಳ್ಳಿ ಮೇಲ್ಸೇತುವೆಯಲ್ಲಿ ಗುಂಡಿ ಸೃಷ್ಟಿಯಾಗಿದ್ದು ಆತಂಕಕ್ಕೆ ಕಾರಣವಾಗಿತ್ತು. ಇದರಿಂದ ನಗರದ ಉಳಿದ ಮೇಲ್ಸೇತುವೆಗಳು, ಅಂಡರ್‌ಪಾಸ್‌ ಹಾಗೂ ತೂಗು ಸೇತುವೆಗಳು ಸುರಕ್ಷಿತವೇ ಎನ್ನುವ ಪ್ರಶ್ನೆಯೂ ಉದ್ಭವವಾಗಿತ್ತು.

ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಬಿಬಿಎಂಪಿ, ಇವುಗಳ ಬಗ್ಗೆ ಅಧ್ಯಯನ ಮಾಡುವುದಕ್ಕೆ 5 ಕೋಟಿ ರೂ. ವೆಚ್ಚದಲ್ಲಿ ನುರಿತ ತಜ್ಞರ ಮೂಲಕ ಗುಣಮಟ್ಟ ಪರೀಕ್ಷೆ (ಸ್ಟ್ರಕ್ಟರ್‌ ಆಡಿಟ್‌) ನಡೆಸಲು ಮುಂದಾಗಿತ್ತು. ಈಗ ಇನ್ನು ಒಂದು ಹೆಜ್ಜೆ ಮುಂದೆಹೋಗಿ ಪ್ರಮುಖ ಮೇಲ್ಸೇತುವೆಗಳಲ್ಲಿನ ಪ್ರಾಥಮಿಕ ಹಂತದ ಲೋಷದೋಷಗಳನ್ನು ಸರಿಪಡಿಸಲು ಕ್ರಮ ತೆಗೆದುಕೊಂಡಿದೆ. ನಗರದ ಪ್ರಮುಖ ಮೇಲ್ಸೇತುವೆ, ಅಂಡರ್‌ಪಾಸ್‌ ಹಾಗೂ ತೂಗು ಸೇತುವೆಗಳನ್ನು ಗುರುತಿಸಿದ್ದು, ಇವುಗಳಲ್ಲಿ ಸೂಚನಾ ಫ‌ಲಕ, ಮಾರ್ಗಸೂಚಿ, ಡಾಂಬರೀಕರಣ, ಬುಷ್‌ ಹಾಗೂ ಕೊಂಡಿಗಳ ಗುಣಮಟ್ಟಗಳನ್ನು ಸರಿಪಡಿಸುವುದು ಹಾಗೂ ಇವುಗಳಿಗೆ ಬಣ್ಣ ಬಳಿಯುವುದು, ಮೇಲ್ಸೇತುವೆಗಳಿಂದ ಮಳೆ ನೀರು ಸೋರುತ್ತಿದ್ದರೆ, ಅದನ್ನು ತಡೆಯುವುದಕ್ಕೂ ಬಿಬಿಎಂಪಿ ಯೋಜನೆ ರೂಪಿಸಿಕೊಂಡಿದೆ.

ಪ್ರಮುಖ ರಸ್ತೆಗಳಿಗೆ 2 ಕೋಟಿ: ನಗರದ ಪ್ರಮುಖ ರಸ್ತೆಗಳಲ್ಲಿನ ಸಮಸ್ಯೆಗಳ ಬಗ್ಗೆ ಸಾರ್ವಜನಿಕ ವಲಯದಿಂದ ಬಿಬಿಎಂಪಿಯ ಕೇಂದ್ರ ಕಚೇರಿಯ ಸಹಾಯವಾಣಿಯ ಮೂಲಕ ದಾಖಲಾಗಿರುವ ದೂರುಗಳನ್ನು ಸರಿಪಡಿಸಲು ಬಿಬಿಎಂಪಿ ಅಧಿಕಾರಿಗಳು ಮುಂದಾಗಿದ್ದಾರೆ. ದೂರು ದಾಖಲಾದ ರಸ್ತೆಗಳ ವಾರ್ಷಿಕ ನಿರ್ವಹಣೆಗೆಂದು 2 ಕೋಟಿ ರೂ.ಗಳನ್ನು ಪ್ರತ್ಯೇಕವಾಗಿ ಮೀಸಲಿರಿಸಿದೆ. ಈ ಮೊತ್ತದಲ್ಲಿ ಸಾರ್ವಜನಿಕ ವಲಯದಿಂದ ದೂರುಗಳು ಕೇಳಿಬರುತ್ತಿರುವ ರಸ್ತೆಗಳನ್ನು ಆದ್ಯತೆಯ ಮೇರೆಗೆ ಅಭಿವೃದ್ಧಿ ಮಾಡಲು ನಿರ್ಧರಿಸಲಾಗಿದೆ.

ಸ್ಟ್ರಕ್ಟರ್‌ ಆಡಿಟ್‌ಗೆ 5 ಕೋಟಿ ರೂ. ಮೀಸಲು: ಸುಮನಹಳ್ಳಿ ಮೇಲ್ಸೇತುವೆಯಲ್ಲಿ ಗುಂಡಿ ಸೃಷ್ಟಿಯಾಗಿದ್ದು ಸಾರ್ವಜನಿಕ ವಲಯದಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿ ನುರಿತ ತಜ್ಞರ ಮೂಲಕ ನಗರದಲ್ಲಿನ ಎಲ್ಲ ಮೇಲ್ಸೇತುವೆ ಹಾಗೂ ಅಂಡರ್‌ಪಾಸ್‌ಗಳ ಸ್ಟ್ರಕ್ಚರ್‌ ಆಡಿಟ್‌ ಮಾಡಿಸಲು ಬಿಬಿಎಂಪಿ ನಿರ್ಧರಿಸಿತ್ತು. ಇದಕ್ಕೆ ಸಂಬಂಧಿಸಿದ ಟೆಂಡರ್‌ ಸಹ ಇದೇ ವಾರದಲ್ಲಿ ಅಂತಿಮವಾಗುವ ಸಾಧ್ಯತೆ ಇದೆ. ನುರಿತ ತಜ್ಞರ ತಂಡವು ನಗರದ ಎಲ್ಲ ಮೇಲ್ಸೇತುವೆ ಗ್ರೇಡ್‌ ಸಪರೇಟರ್‌, ಅಂಡರ್‌ಪಾಸ್‌ ಹಾಗೂ ತೂಗು ಸೇತುವೆಗಳು, ಮ್ಯಾಜಿಕ್‌ ಬಾಕ್ಸ್‌ಗಳ ಸುರಕ್ಷತೆ, ಮೇಲ್ಸೇತುವೆಗಳ ಡಾಂಬರೀಕರಣ, ಬುಷ್‌ ಹಾಗೂ ಕೊಂಡಿಗಳ ಗುಣಮಟ್ಟ, ಕಂಬಗಳ ಸ್ಥಿತಿ ಪರಿಶೀಲನೆ ನಡೆಸಲಿದೆ. ಇದರಲ್ಲಿ ಲೋಪಗಳು ಕಂಡುಬಂದರೆ ಅವುಗಳನ್ನು ಸರಿಪಡಿಸುವುದಕ್ಕೂ ತಜ್ಞರು ಮಾರ್ಗಸೂಚಿ ನೀಡಲಿದ್ದಾರೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

Advertisement

 

-ಹಿತೇಶ್‌ ವೈ

Advertisement

Udayavani is now on Telegram. Click here to join our channel and stay updated with the latest news.

Next