Advertisement
ಜಿಲ್ಲೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆ ಹಳ್ಳ ಹಿಡಿದಿದೆ. ರಿಪೇರಿ ಬಂದು ತಿಂಗಳುಗಟ್ಟಲೇ ಆದರೂ ದುರಸ್ತಿಗೊಳ್ಳುತ್ತಿಲ್ಲ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಜಿಲ್ಲೆಗೆ ಮಂಜೂರಾದ ಶುದ್ಧ ನೀರಿನ ಘಟಕಗಳೆಷ್ಟು? ಎಷ್ಟು ಕಾರ್ಯಾರಂಭ ಮಾಡುತ್ತಿವೆ. ಎಷ್ಟು ಘಟಕಗಳಿಗೆ ನೀರಿನ ಸಮಸ್ಯೆ ಇದೆ ಎಂಬುದರ ಸಮಗ್ರ ವರದಿಯ ಒಂದು ನೋಟ.
Related Articles
Advertisement
ದುಸ್ಥಿತಿಯಿಂದ ಕೂಡಿವೆ ಎಂಬ ಆರೋಪ: ಜಿಲ್ಲೆಯಲ್ಲಿ 730 ಶುದ್ಧ ಕುಡಿಯುವ ನೀರಿನ ಘಟಕಗಳ ಪೈಕಿ 520 ಟೆಂಡರ್ ಮೂಲಕ, 176 ಕ್ರೆಡಿಲ್ ಮೂಲಕ ಹಾಗೂ 75 ಘಟಕಗಳನ್ನು ಸಹಕಾರ ಸಂಘಗಳ ಮೂಲಕ ಸ್ಥಾಪಿಸಲಾಗುತ್ತಿದೆ. ಈ ಪೈಕಿ ಟೆಂಡರ್ ಹಾಗೂ ಸಹಕಾರ ಸಂಘಗಳ ಮೂಲಕ ಸ್ಥಾಪಿತವಾದ ಶುದ್ಧ ಕುಡಿಯುವ ನೀರಿನ ಘಟಕಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸಿದರೂ ಕ್ರೆಡಿಲ್ ಮೂಲಕ ಸ್ಥಾಪನೆಯಾದ ಘಟಕಗಳು ಸಾಕಷ್ಟು ದುಸ್ಥಿತಿಯಿಂದ ಕೂಡಿವೆ ಎಂಬ ಆರೋಪದ ಜೊತೆಗೆ ಅವರಿಗೆ ಸ್ಥಾಪನೆಗೆ ಕೊಟ್ಟಿರುವ ಗುರಿಯನ್ನು ಪೂರ್ಣಗೊಳಿಸದೇ ಸುಮಾರು ಘಟಕಗಳು ನೆನಗುದಿಗೆ ಬಿದ್ದಿರುವುದು ಕಂಡು ಬಂದಿದೆ.
ಬಾಗೇಪಲ್ಲಿ, ಗುಡಿಬಂಡೆಯಲ್ಲಿ ಬಾಕಿ: ಜಿಲ್ಲೆಯ ಇತರೆ ತಾಲೂಕುಗಳಿಗೆ ಹೋಲಿಸಿದರೆ ಜಿಲ್ಲೆಯ ಗುಡಿಬಂಡೆ ಹಾಗೂ ಬಾಗೇಪಲ್ಲಿ ತಾಲೂಕಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ರಿಪೇರಿಗೆ ಬಂದಿರುವುದರ ಜೊತೆಗೆ ಮಂಜೂರಾದರೂ ನಿರ್ಮಾಣ ಆಗದೇ ಬಾಕಿ ಇವೆ. ಬಾಗೇಪಲ್ಲಿ ತಾಲೂಕಿನಲ್ಲಿ ಒಟ್ಟು 15 ಘಟಕಗಳು ದುರಸ್ತಿಗೊಳ್ಳಬೇಕಿದ್ದು, ತಾಲೂಕಿನಲ್ಲಿ ಸುಮಾರು 28 ಘಟಕಗಳು ಇನ್ನೂ ಪೂರ್ಣಗೊಂಡಿಲ್ಲ. ಅದೇ ರೀತಿ ಗುಡಿಬಂಡೆಯಲ್ಲಿ 6 ಘಟಕಗಳು ದುರಸ್ತಿಗೊಳ್ಳಬೇಕಿದ್ದು, 15 ಘಟಕಗಳ ಕಾಮಗಾರಿ ಪೂರ್ಣಗೊಳ್ಳಬೇಕಿದೆ. ಈ ಬಗ್ಗೆ ಪ್ರತಿ ಜಿಪಂನ ಕೆಡಿಪಿ ಸಭೆಗಳಲ್ಲಿ ಚರ್ಚೆಯಾಗಿ ಕಾಮಗಾರಿ ನಿರ್ವಹಿಸುತ್ತಿರುವ ಏಜೆನ್ಸಿಗಳಿಗೆ ಸೂಚಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.
ಸಮರ್ಪಕ ನಿರ್ವಹಣೆ ಇಲ್ಲ: ಜಿಲ್ಲೆಯಲ್ಲಿ ಗುಡಿಬಂಡೆ ಹಾಗೂ ಬಾಗೇಪಲ್ಲಿ ತಾಲೂಕುಗಳಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ನೀರಿನಲ್ಲಿ ಫ್ಲೋರೈಡ್ ಅಂಶ ಇರುವುದು ಪ್ರತಿಯೊಬ್ಬರಿಗೂ ಗೊತ್ತಿರುವ ವಿಚಾರ. ಆದರೆ ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆಯಲ್ಲಿ ಸ್ಥಳೀಯ ಗ್ರಾಪಂಗಳ ಜೊತೆಗೆ ಕಾಮಗಾರಿ ಉಸ್ತುವಾರಿ ವಹಿಸಿಕೊಂಡಿರುವ ಏಜೆನ್ಸಿಗಳು ಜವಾಬ್ದಾರಿಯುತವಾಗಿ ಕೆಲಸ ಮಾಡದ ಪರಿಣಾಮ ಜಿಲ್ಲೆಯಲ್ಲಿ ಶುದ್ಧ ನೀರಿನ ಘಟಕಗಳು ನಿರ್ವಹಣೆ ಅರಣ್ಯರೋದನವಾಗಿವೆ. ಕೆಲವು ಗ್ರಾಪಂಗಳಲ್ಲಿ ಅಧಿಕಾರಿಗಳೇ ಹೆಚ್ಚು ಕಾಳಜಿ ವಹಿಸಿ ಘಟಕಗಳನ್ನು ನಿರ್ವಹಿಸುತ್ತಿದ್ದು, ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ.
5 ರೂ.ಗೆ 20 ಲೀ.: ಜಿಲ್ಲೆಯಲ್ಲಿ ಕ್ರೆಡಿಲ್, ಸಹಕಾರ ಸಂಘಗಳ ಹಾಗೂ ಟೆಂಡರ್ ಮೂಲಕ ಸ್ಥಾಪಿಸಲಾಗುತ್ತಿರುವ ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ಆಯಾ ಗ್ರಾಪಂಗಳಿಂದ ಉಚಿತವಾಗಿ ನೀರು ಸರಬರಾಜು ಮಾಡಬೇಕಿದ್ದು, ಶುದ್ಧೀಕರಣ ಬಳಿಕ ಘಟಕದಿಂದ ಪ್ರತಿ 20 ಲೀ. ಶುದ್ಧ ನೀರಿಗೆ ಗ್ರಾಹಕರು 5 ರೂ. ಶುಲ್ಕ ಪಾವತಿಸಬೇಕಿದೆ. ಇದಕ್ಕಾಗಿ ಏಜೆನ್ಸಿಗಳು ಗ್ರಾಹಕರಿಗೆ ಕೆಲವು ಕಡೆ ಕಾಯಿನ್ ಬಾಕ್ಸ್ ಅಳವಡಿಸಿದ್ದರೆ ಮತ್ತೆ ಕೆಲವೆಡೆ ಎಟಿಎಂ ಕಾರ್ಡ್‌ಗಳನ್ನು ವಿತರಿಸಲಾಗಿದೆ.
ಜಿಪಂ ಸಿಇಒ ಹೇಳಿದ್ದೇನು?: ಜಿಲ್ಲೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳ ಬಗ್ಗೆ ಸಮಗ್ರ ಕ್ರಿಯಾ ಯೋಜನೆ ಸಿದ್ಧಪಡಿಸುತ್ತಿದ್ದೇವೆ. ಅದಕ್ಕಾಗಿ ಕ್ರೆಡಿಲ್ ಹಾಗೂ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ವತಿಯಿಂದ ಪಟ್ಟಿ ಸಿದ್ಧಪಡಿಸಲಾಗುತ್ತಿದೆ. ಕೆಲವು ಕಡೆ ಚೆನ್ನಾಗಿ ಘಟಕಗಳು ಕಾರ್ಯ ನಿರ್ವಹಿಸುತ್ತಿವೆ. ಕೆಲವು ಕಡೆ ಘಟಕಗಳಿಗೆ ಮೆಮೋರಿ ಕಾರ್ಡ್ ಹಾಗೂ ಕಾಯಿನ್ ಬಾಕ್ಸ್ ಸಮಸ್ಯೆ ಇದೆ ಎಂದು ಜಿಪಂ ಸಿಇಒ ಬಿ.ಫೌಝೀಯಾ ತರುನ್ನುಮ್ ತಿಳಿಸಿದ್ದಾರೆ.
ರಿಪೇರಿ ಮಾಡಬೇಕಾದ ಘಟಕಗಳನ್ನು ಪಟ್ಟಿ ಮಾಡಿ ಕೊಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಗ್ರಾಮೀಣ ಭಾಗದ ಶುದ್ಧ ಕುಡಿಯುವ ನೀರಿನ ಘಟಕಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸಬೇಕೆಂಬ ವಿಚಾರದಲ್ಲಿ ಸಾಕಷ್ಟು ಕಾಳಜಿ ಇದೆ. ಈ ಬಗ್ಗೆ ಅಧಿಕಾರಿಗಳಿಗೆ ಸಮಗ್ರ ವರದಿ ಕೇಳಿದ್ದೇನೆ. ಏನೇ ದುರಸ್ತಿ ಕಾರ್ಯ ಇದ್ದರೂ ತಿಂಗಳೊಳಗೆ ಸರಿಪಡಿಸುತ್ತೇವೆ ಎಂದು ಉದಯವಾಣಿಗೆ ತಿಳಿಸಿದರು.
ಕ್ರೆಡಿಲ್ ಘಟಕಗಳದೇ ಹೆಚ್ಚು ಕಿರಿಕಿರಿ..: ಜಿಲ್ಲೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆ ಹೊತ್ತಿರುವ ಏಜೆನ್ಸಿಗಳ ಪೈಕಿ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದದಿಂದ ಸ್ಥಾಪಿಸುತ್ತಿರುವ ಘಟಕಗಳೇ ಹೆಚ್ಚು ರಿಪೇರಿ ಜೊತೆಗೆ ಸಮರ್ಪಕವಾಗಿ ನಿರ್ವಹಣೆ ಆಗುತ್ತಿಲ್ಲ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಸಾಮಾನ್ಯವಾಗಿದೆ. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ನೀಡಿರುವ ಮಾಹಿತಿಯಲ್ಲಿ ಕ್ರೆಡಿಲ್‌ನ ಬರೋಬ್ಬರಿ 28 ಘಟಕಗಳು ರಿಪೇರಿಗೆ ಎದುರು ನೋಡುತ್ತಿವೆ.
ಜಿಲ್ಲೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆ ಹೆಸರಿಗಷೇ ಇವೆ. ಬಹಳಷ್ಟು ಕಡೆ ಸಮರ್ಪಕವಾಗಿ ನಿರ್ವಹಣೆ ಮಾಡುತ್ತಿಲ್ಲ. ಕೆಲವು ಗ್ರಾಮಗಳಲ್ಲಿ ಶುದ್ಧ ನೀರಿನ ಘಟಕಗಳಿದ್ದರೂ ಅವುಗಳಿಗೆ ನೀರು ಸರಬರಾಜು ಮಾಡುತ್ತಿಲ್ಲ. ಜಿಲ್ಲೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳ ಬಗ್ಗೆ ಜಿಲ್ಲೆಯ ಹಿರಿಯ ಅಧಿಕಾರಿಗಳು ಹೆಚ್ಚು ಗಮನ ಕೊಡಬೇಕಿದೆ.-ಎಂ.ಪಿ.ಮುನಿವೆಂಕಟಪ್ಪ, ಕೃಷಿ ಕೂಲಿಕಾರ ಸಂಘ ಅಗಲಗುರ್ಕಿ ಗ್ರಾಪಂ ವ್ಯಾಪ್ತಿಯಲ್ಲಿ ಆರು ಶುದ್ಧ ಕುಡಿಯುವ ನೀರಿನ ಘಟಕಗಳಿದ್ದು, ಆರು ಚೆನ್ನಾಗಿ ಕೆಲಸ ಮಾಡುತ್ತಿವೆ. ಪ್ರತಿ 20 ಲೀ.ನೀರಿಗೆ ತಲಾ 5 ರೂ. ನಂತೆ ಗ್ರಾಹಕರಿಂದ ವಸೂಲಿ ಮಾಡಲಾಗುತ್ತಿದೆ. ಗ್ರಾಹಕರು ಕಾಯಿನ್ ಬಾಕ್ಸ್ ಬಳಸಿಕೊಂಡು ಘಟಕದಿಂದ ಕುಡಿಯುವ ನೀರು ಪಡೆಯಬಹುದು. ಗ್ರಾಪಂ ವತಿಯಿಂದ ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ನೀರು ಪೂರೈಸಲಾಗುತ್ತಿದೆ. ಘಟಕಗಳನ್ನು ಸರ್ಕಾರ ನಿಗದಿಪಡಿಸಿರುವ ಏಜೆÕನ್ಸಿಗಳು ಉಸ್ತುವಾರಿ ನೋಡಿಕೊಳ್ಳುತ್ತಿವೆ.
-ಮೋಹನ್ ಕುಮಾರ್, ಅಭಿವೃದ್ಧಿ ಅಧಿಕಾರಿ, ಅಗಲಗುರ್ಕಿ ಗ್ರಾಪಂ ಯಲ್ಲಂಪಲ್ಲಿ ಗ್ರಾಪಂ ಕೇಂದ್ರ ಸ್ಥಾನದಲ್ಲಿಯೇ ಕಳೆದ ಆರು ತಿಂಗಳಿಂದ ಶುದ್ಧ ಕುಡಿಯುವ ನೀರಿನ ಘಟಕ ಬಂದ್ ಆಗಿದೆ. ನಾಲ್ಕೈದು ದಿನಗಳ ಹಿಂದೆ ಅಧಿಕಾರಿಗಳು ಬಂದು ನೋಡಿಕೊಂಡು ಹೋದರೂ ರಿಪೇರಿ ಆಗಿಲ್ಲ. ಮೆಮೋರಿ ಕಾರ್ಡ್ ಜೊತೆಗೆ ಸಣ್ಣಪುಟ್ಟ ಕೆಲಸಗಳು ಆಗಬೇಕಿರುವುದರಿಂದ ಘಟಕಕ್ಕೆ ಬೀಗ ಹಾಕಲಾಗಿದೆ. ಸಂಬಂಧಪಟ್ಟವರ ಗಮನ ಸೆಳೆದರೂ ಏನು ಪ್ರಯೋಜನವಾಗಿಲ್ಲ. ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿಲ್ಲದೇ ಗ್ರಾಮಸ್ಥರಿಗೆ ತೀವ್ರ ಸಮಸ್ಯೆ ಉಂಟಾಗಿದೆ.
-ಆನಂದ್, ಯಲ್ಲಂಪಲ್ಲಿ ಗ್ರಾಪಂ ಅಧ್ಯಕ್ಷರು ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವ 64 ಗ್ರಾಮಗಳ ಪೈಕಿ 40 ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ನೀರು ಸರಬರಾಜು ಇಲ್ಲದೇ ಸ್ಥಗಿತಗೊಂಡಿವೆ. ಜಿಲ್ಲೆಯಲ್ಲಿ ಒಟ್ಟು 730 ಶುದ್ಧ ಕುಡಿಯುವ ನೀರಿನ ಘಟಕಗಳಿದ್ದು, ಸುಮಾರು 56 ಕ್ಕೂ ಹೆಚ್ಚು ಘಟಕಗಳು ಸ್ಥಾಪನೆ ಆಗಬೇಕಿವೆ. 20 ಘಟಕಗಳ ಕಾಮಗಾರಿ ವಿವಿಧ ಹಂತದಲ್ಲಿದೆ. ರಿಪೇರಿಗೆ ಬಂದಿರುವ ಶುದ್ಧ ನೀರಿನ ಘಟಕಗಳನ್ನು ತ್ವರಿತವಾಗಿ ಸರಿಪಡಿಸುವಂತೆ ನೋಡಲ್ ಏಜೆನ್ಸಿಗಳಿಗೆ ಸೂಚಿಸಲಾಗಿದೆ.
-ಶಿವಕುಮಾರ್ ಲೋಕೋರ್, ಇಇ, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಜಿಲ್ಲೆಯಲ್ಲಿ ತಾಲೂಕುವಾರು ಶುದ್ಧ ಕುಡಿಯುವ ನೀರಿನ ಘಟಕಗಳು
ತಾಲೂಕು ಮಂಜೂರಾದ ಘಟಕ ಚಾಲ್ತಿಯಲ್ಲಿರುವ ಘಟಕ ಸ್ಥಗಿತವಾದ ಘಟಕಗಳು
ಬಾಗೇಪಲ್ಲಿ 153 108 15
ಚಿಕ್ಕಬಳ್ಳಾಪುರ 83 68 5
ಚಿಂತಾಮಣಿ 136 129 4
ಗೌರಿಬಿದನೂರು 160 153 7
ಗುಡಿಬಂಡೆ 77 56 6
ಶಿಡ್ಲಘಟ್ಟ 121 111 3 * ಕಾಗತಿ ನಾಗರಾಜಪ್ಪ