Advertisement

ಅಂಗನವಾಡಿ ಮಕ್ಕಳಿಗೆ 4 ವರ್ಷ ಹಳೆಯ ಆಹಾರ ಪ್ಯಾಕೆಟ್‌!

01:42 PM Jun 13, 2017 | Harsha Rao |

ಮಂಗಳೂರು: ಮಕ್ಕಳಲ್ಲಿ ಪೌಷ್ಟಿಕಾಂಶ ಹೆಚ್ಚಿಸುವ ಉದ್ದೇಶದಿಂದ ಅಂಗನವಾಡಿಗಳಿಗೆ ರಾಜ್ಯ ಸರಕಾರ ಹಾಲು, ಮೊಟ್ಟೆ, ಧಾನ್ಯ ಸಹಿತ ನಾನಾ ಬಗೆಯ ಆಹಾರ ಪದಾರ್ಥ ಉಣಬಡಿಸುತ್ತಿದೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಅಂಗನವಾಡಿ ಕೇಂದ್ರವೊಂದರಲ್ಲಿ  ನಾಲ್ಕು ವರ್ಷ ಹಳೆಯ, ಅವಧಿ ಮುಗಿದ, ತಿನ್ನಲು ಅಯೋಗ್ಯವಾದ ಬೆಲ್ಲದ ಪ್ಯಾಕೆಟನ್ನು ವಿತರಣೆ ಮಾಡಿರುವುದು ಪೋಷಕರನ್ನು ಆತಂಕಕ್ಕೆ ಎಡೆಮಾಡಿದೆ.

Advertisement

ಇದರಿಂದ ಅಂಗನವಾಡಿಗಳಲ್ಲಿ ಮಕ್ಕಳಿಗೆ ನೀಡುವ ಪೋಷಕಾಂಶದ ಗುಣಮಟ್ಟದ ಬಗ್ಗೆಯೇ ಈಗ ಸಂಶಯ ಶುರುವಾಗಿದೆ. ಇಂಥದೊಂದು ಕಳಪೆ ಮಟ್ಟದ ಆಹಾರ ಸಾಮಗ್ರಿ ವಿತರಣೆಗೆ ಸಾಕ್ಷಿಯಾಗಿದ್ದು, ಬಂಟ್ವಾಳ ತಾಲೂಕಿನ ಅಲ್ಲಿಪಾದೆ ಅಂಗನವಾಡಿ ಕೇಂದ್ರ !

ಮಕ್ಕಳ ಪೌಷ್ಟಿಕಾಂಶವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸರಕಾರ ಸಾಕಷ್ಟು ಅನುದಾನ ನೀಡಿ ಅವರಿಗೆ ವಿವಿಧ ಬಗೆಯ ಆಹಾರ ವಸ್ತುಗಳನ್ನು ಪೂರೈಸಲು ಕ್ರಮಕೈಗೊಳ್ಳುತ್ತಿದೆ. ಆದರೆ ಈ ಕುರಿತು ಗಮನ ಹರಿಸಬೇಕಾದ ಅಧಿಕಾರಿಗಳು ದಿವ್ಯ ನಿರ್ಲಕ್ಷÂ ವಹಿಸಿರುವುದು ಸ್ಪಷ್ಟವಾಗಿದೆ. ಈ ರೀತಿಯ ಬೆಲ್ಲದ ಪ್ಯಾಕೆಟ್‌ ಸ್ಥಳೀಯರೊಬ್ಬರ ಕೈಗೆ ಸಿಕ್ಕಿದ ಕಾರಣ ಇದು ಅವಧಿ ಮುಗಿದ ಬೆಲ್ಲ ಎಂದು ತಿಳಿದಿದೆ. 

ಪ್ರತಿ ಜಿಲ್ಲೆಯ ಅಂಗನವಾಡಿ ಕೇಂದ್ರಗಳಿಗೆ ಆಯಾ ಜಿಲ್ಲೆಗಳ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೂಲಕ ಆಹಾರ ವಸ್ತುಗಳನ್ನು ಪೂರೈಕೆ ಮಾಡಲಾಗುತ್ತದೆ. ಬಂಟ್ವಾಳ ತಾಲೂಕಿನ ಅಲ್ಲಿಪಾದೆ ಅಂಗನವಾಡಿ ಕೇಂದ್ರಕ್ಕೆ ಪೂರೈಕೆ ಮಾಡಿದ ಆಹಾರ ವಸ್ತುಗಳಲ್ಲಿ ಅವಧಿ ಮುಗಿದ ಬೆಲ್ಲದ ಪ್ಯಾಕೆಟ್‌ ಕಂಡುಬಂದಿದೆ. ಒಂದು ಪ್ಯಾಕೆಟ್‌ನಲ್ಲಿ ಮಾತ್ರ ಉತ್ಪಾದನಾ ದಿನಾಂಕ ನಮೂದಾಗಿದ್ದು, ಅಂಗನವಾಡಿಯಲ್ಲಿರುವ ಉಳಿದ ಪ್ಯಾಕೆಟ್‌ಗಳಲ್ಲಿ ಉತ್ಪಾದನಾ ದಿನಾಂಕವೇ ಇಲ್ಲ!

ಸಾಂಬಾರ್‌ ಪೌಡರ್‌ ಪ್ಯಾಕೆಟ್‌!
ಈ ಬೆಲ್ಲದ ಪ್ಯಾಕೆಟ್‌ನ ಹೊರಗಡೆ ಮಲ್ಟಿ ಡಾಲ್‌ ಸಾಂಬಾರ್‌ ಪೌಡರ್‌ ಎಂದು ಬರೆಯಲಾಗಿದೆ. ಆದರೆ ಪ್ಯಾಕೆಟ್‌ ಒಡೆದು ನೋಡಿದರೆ ಅದರೊಳಗೆ ಬೆಲ್ಲವಿತ್ತು. ಜತೆಗೆ ಉತ್ಪಾದನಾ ದಿನಾಂಕ 12-02-13 ಎಂದು ನಮೂದಿಸಲಾಗಿದೆ. ಕೆಳಗೆ ಬೆಸ್ಟ್‌ ಬಿಫೋರ್‌ 6 ಮಂಥ್ಸ್ (6 ತಿಂಗಳ ಅವಧಿ) ಎಂದು ಹಾಕಲಾಗಿದೆ. ಜತೆಗೆ ಅಂಗನವಾಡಿ ಕೇಂದ್ರದ ಉಪಯೋಗಕ್ಕೆ, ಮಾರಾಟಕ್ಕಲ್ಲ ಎಂಬುದನ್ನೂ ನಮೂದಿಸಲಾಗಿದೆ.

Advertisement

ಸಾಮಾನ್ಯವಾಗಿ ಅಂಗನವಾಡಿ ಕೇಂದ್ರಗಳಿಗೆ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಮಕ್ಕಳೇ ತೆರಳುತ್ತಾರೆ. ಅಧಿಕಾರಿಗಳು ಸಹಿತ ಸ್ಥಿತಿವಂತರು ತಮ್ಮ ಮಕ್ಕಳನ್ನು ಸಾವಿರಾರು ರೂಪಾಯಿ ಶುಲ್ಕ ಪಾವತಿಸಿ ಖಾಸಗಿ ವಿದ್ಯಾಸಂಸ್ಥೆಗಳಿಗೆ ಸೇರಿಸುತ್ತಾರೆ. ಈ ಕಾರಣಕ್ಕಾಗಿಯೇ ಇಂತಹ ಕೇಂದ್ರಗಳಿಗೆ ಈ ರೀತಿಯ ಅವಧಿ ಮೀರಿದ ಆಹಾರಗಳನ್ನು ಪೂರೈಕೆ ಮಾಡಲಾಗುತ್ತದೆ ಎಂದು ಸ್ಥಳೀಯರೊಬ್ಬರು ಆರೋಪಿಸಿದ್ದಾರೆ. 

ನಾವು ಮನೆಗೆ ನೀಡಲ್ಲ!
ಸರಕಾರವು ಮಕ್ಕಳಿಗಾಗಿ ಹಾಲು, ಮೊಟ್ಟೆ, ಹೆಸರು ಕಾಳು, ಗಂಜಿ, ಅನ್ನ ಸಾರು, ನೆಲಗಡಲೆ ಚಿಕ್ಕಿ ಮೊದಲಾದ ಆಹಾರ ವಸ್ತುಗಳನ್ನು ನೀಡುತ್ತದೆ. ಇಲಾಖೆಯ ಅಧಿಕಾರಿಗಳು ಹೇಳುವಂತೆ ನಾವು ಯಾವುದೇ ಆಹಾರ ವಸ್ತುಗಳನ್ನು ಮಕ್ಕಳಿಗೆ ಮನೆಗೆ ಕೊಂಡು ಹೋಗಲು ಕೊಡುವುದಿಲ್ಲ. 

ಆದರೆ ಈ ಅಂಗನವಾಡಿ ಕೇಂದ್ರದಿಂದ ಮಗುವಿನ ಮನೆಗೆ ಬೆಲ್ಲದ ಪ್ಯಾಕೆಟ್‌ ನೀಡಿದ ಕಾರಣ ಇದು ಅವಧಿ ಮುಗಿದ ವಸ್ತು ಎಂದು ತಿಳಿದುಬಂದಿದೆ. ಅಂಗನವಾಡಿಯಲ್ಲೇ ತಯಾರಿಸುವ ಆಹಾರಗಳಲ್ಲಿ ಇಂತಹ ಎಷ್ಟು ಅವಧಿ ಮುಗಿದ ಆಹಾರವನ್ನು ಉಪ ಯೋಗಿಸಲಾಗುತ್ತದೆ ಎಂದು ದೇವರೇ ಬಲ್ಲ!

ಅಲ್ಲಿನ ವ್ಯಕ್ತಿಯೊಬ್ಬರು ಹೇಳುವಂತೆ ನಮಗೆ ಗೋಧಿ, ಅಕ್ಕಿ, ಹೆಸರು ಈ ರೀತಿಯ ಬೇರೆ ಬೇರೆ ಆಹಾರ ವಸ್ತುಗಳನ್ನು ನೀಡುತ್ತಾರೆ. ಆದರೆ ಅಂಗಡಿಗಳಲ್ಲಿ ದೊರೆಯುವ ಉತ್ಪನ್ನಗಳಿಗೆ ಹೋಲಿಸಿದರೆ ಅಂಗನವಾಡಿಯ ಆಹಾರ ಕಳಪೆಯಾಗಿರುತ್ತದೆ. ಹೀಗಾಗಿ ನಾವು ಮನೆಗೆ ತಂದರೂ ಅದನ್ನು ಉಪಯೋಗಿಸುವುದು ಕಡಿಮೆ ಎನ್ನುತ್ತಾರೆ.

ಹಳೆಯ ಆಹಾರ ಕೊಡಲು ಸಾಧ್ಯವಿಲ್ಲ
ನಾವು ಬೆಲ್ಲ ಅಥವಾ ಸಾಂಬಾರ್‌ ಪೌಡರನ್ನು ಮಕ್ಕಳಿಗೆ ಕೊಡುವ ಪ್ರಮೇಯವೇ ಇಲ್ಲ. ಮೇ ತಿಂಗಳಲ್ಲಿ 15 ದಿನ ಬೇಸಗೆ ರಜೆ ಇದ್ದ ಸಂದರ್ಭದಲ್ಲಿ ಮನೆಗೆ ಆಹಾರ ಕೊಟ್ಟಿರಬಹುದು. ನಮ್ಮ ಇಲಾಖೆಯಿಂದ ಅಷ್ಟು ಹಳೆಯ ಆಹಾರ ಕೊಡಲು ಸಾಧ್ಯವೇ ಇಲ್ಲ. ಪ್ರತಿ ತಿಂಗಳು ಹೊಸ ಆಹಾರವನ್ನೇ ನೀಡುತ್ತೇವೆ. ಈ ಕುರಿತು ತತ್‌ಕ್ಷಣ ವಿಚಾರಿಸುತ್ತೇನೆ.

– ಸುಂದರ ಪೂಜಾರಿ ಉಪನಿರ್ದೇಶಕರು,  ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ದ.ಕ.

– ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next