ಹೆಬ್ರಿ: ಅಪೆಂಡಿಕ್ಸ್-ಇ ಯೋಜನೆಯಡಿಯಲ್ಲಿ ಇಲ್ಲಿನ ಪೇಟೆ ಯಿಂದ ತಾಣ ಅಮೃತಭಾರತಿ ಶಾಲೆಯ ವರೆಗೆ 700 ಮೀ.ಉದ್ದದ 2.5 ಕೋಟಿ ರೂ. ವೆಚ್ಚದ ಚತುಷ್ಪಥ ರಸ್ತೆಯನ್ನು ಶಾಸಕ ವಿ. ಸುನಿಲ್ ಕುಮಾರ್ ಜ. 30ರಂದು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ತಾಲೂಕು ಕೇಂದ್ರವಾದ ಹೆಬ್ರಿಗೆ ಹತ್ತಾರು ಗ್ರಾಮಗಳು ಸಂಪರ್ಕಿಸುವುದರಿಂದ ರಸ್ತೆಯ ಅಭಿವೃದ್ಧಿ ಅನಿವಾರ್ಯವಾಗಿದೆ. ಗೂಡಂಗಡಿಗಳು ಹಾಗೂ ರಸ್ತೆಯ ಬದಿಯಲ್ಲಿ ಮರಗಳು ಇದ್ದ ಕಾರಣ ಹೆಬ್ರಿ ತಾಣ ರಸ್ತೆ ಕಾಮಗಾರಿ ವಿಳಂಬವಾದರೂ ವ್ಯವಸ್ಥಿತವಾಗಿ ಆಗಿದೆ. ರಾಜ್ಯದ 224 ವಿಧಾನ ಸಭಾ ಕ್ಷೇತ್ರಗಳಲ್ಲಿ ಕಾರ್ಕಳವನ್ನು ಅಭಿವೃದ್ಧಿಯಲ್ಲಿ ನಂ.1 ಮಾಡಬೇಕೆಂಬ ಸಂಕಲ್ಪದ ಜತೆಗೆ ಸುವರ್ಣ ಹೆಬ್ರಿಯನ್ನು ಮಾಡಬೇಕೆಂಬ ಹಂಬಲವಿದೆ ಎಂದರು.
ಮಿನಿ ವಿಧಾನ ಸೌದಕ್ಕೆ 10 ಕೋಟಿ ರೂ. ಬಿಡುಗಡೆ
ಹೆಬ್ರಿ ತಾಲೂಕಿಗೆ ಈಗಾಗಲೇ ನೂತನ ತಹಶೀಲ್ದಾರ್ ನೇಮಕಗೊಂಡಿದ್ದು ಶೀಘ್ರದಲ್ಲಿ ಕಾರ್ಯರಂಭವಾಗಲಿದೆ. ಮಿನಿ ವಿಧಾನ ಸೌಧ ನಿರ್ಮಾಣಕ್ಕೆ 10 ಕೋಟಿ ರೂ. ಬಿಡುಗಡೆಗೊಂಡಿದ್ದು ಹೆಬ್ರಿ ಬೀಡು ಮತ್ತು ರಾಜೀವನಗರ ರಸ್ತೆಗಳಿಗೆ ತಲಾ 1 ಕೋಟಿ ರೂ., ಚಾರ ವ್ಯಾಪಿಕಲ್ಲು ರಸ್ತೆ ಮತ್ತು ಬಸದಿ ರಸ್ತೆಗೆ ತಲಾ 50 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯಲಿವೆೆ. ಚಾರ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಕಾಮಗಾರಿ ಶೀಘ್ರದಲ್ಲಿ ಪೂರ್ಣಗೊಂಡು ಜನರ ಸೇವೆಗೆ ಲಭ್ಯವಾಗಲಿದೆ. ಮೋದಿ ಅವರ ಸ್ವಚ್ಚ» ಾರತದ ಕನಸನ್ನು ಹೆಬ್ರಿ ಗ್ರಾ.ಪಂ. ಸಾಕಾರಗೊಳಿಸಿದೆ ಎಂದರು.
ಜಿ.ಪಂ. ಸದಸ್ಯೆ ಜ್ಯೋತಿ ಹರೀಶ್, ಉದ್ಯಮಿ ಸತೀಶ್ ಪೈ, ತಾ.ಪಂ.ಅಧ್ಯಕ್ಷೆ ಮಾಲಿನಿ ಜೆ. ಶೆಟ್ಟಿ, ಸದಸ್ಯರಾದ ಚಂದ್ರ ಶೇಖರ ಶೆಟ್ಟಿ, ರಮೇಶ್ ಕುಮಾರ್, ಲಕ್ಷ್ಮೀ ದಮಾಯನಂದ, ಹೆಬ್ರಿ ಗ್ರಾ.ಪಂ. ಅಧ್ಯಕ್ಷ ಎಚ್.ಕೆ. ಸುಧಾಕರ, ಮಾಜಿ ಅಧ್ಯಕ್ಷ ಸುಧಾಕರ ಹೆಗ್ಡೆ, ಕೀರ್ತನ್ ಕುಮಾರ್ ಉಪಸ್ಥಿತರಿದ್ದರು.
ಗಣಪತಿ ಮುದ್ರಾಡಿ ಸ್ವಾಗತಿಸಿದರು. ಡಿ.ಜಿ. ರಾಘವೇಂದ್ರ ವಂದಿಸಿದರು.