Advertisement

ದಟ್ಟಣೆ ಪರಿಹಾರಕ್ಕೆ 4 ಸುರಂಗ ಮಾರ್ಗ

11:23 AM May 13, 2017 | Team Udayavani |

ಬೆಂಗಳೂರು: ನಗರದಲ್ಲಿನ ಸಂಚಾರ ದಟ್ಟಣೆಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ನಗರದ ನಾಲ್ಕು ಕಡೆ ಸುರಂಗ ರಸ್ತೆ ಮಾರ್ಗ ನಿರ್ಮಿಸುವ ಕುರಿತಂತೆ ಸಾಧಕ-ಬಾಧಕಗಳ ಬಗ್ಗೆ ಪರಿಶೀಲನೆ ನಡೆಯುತ್ತಿದೆ ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌ ತಿಳಿಸಿದ್ದಾರೆ. ಹೆಬ್ಟಾಳ, ಯಶವಂತಪುರ, ಕೆ.ಆರ್‌.ಪುರ ಹಾಗೂ ಸಿಲ್ಕ್ ಬೋರ್ಡ್‌ ಜಂಕ್ಷನ್‌ಗಳಲ್ಲಿ ಸುರಂಗ ನಿರ್ಮಿಸುವ ಚಿಂತನೆ ನಡೆದಿದೆ ಎಂದು ಅವರು ಹೇಳಿದ್ದಾರೆ.

Advertisement

ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಗೃಹ ಕಚೇರಿ ಕೃಷ್ಣಾದಲ್ಲಿ ಬಿಡಿಎ ಯೋಜನೆಗಳ ಕುರಿತಂತೆ ನಡೆದ ಸಭೆ ನಂತರ ಸುದ್ದಿಗಾರರೊಂದಿಗೆ ಮಾತ­ನಾಡಿದ ಅವರು, “ನಗರದಲ್ಲಿನ ಸಂಚಾರ ದಟ್ಟಣೆ ನಿವಾರಣೆಗೆ ಸರ್ಕಾರ ಕೈಗೆತ್ತಿಕೊಂಡಿರುವ ಹಲವು ಯೋಜನೆಗಳ ಪೈಕಿ ಸುರಂಗ ಮಾರ್ಗ ನಿರ್ಮಾ­ಣವೂ ಒಂದು. ಬಲ್ಗೇರಿಯಾ ಮೂಲದ ಕಂಪೆನಿಯೊಂದು ಯೋಜನೆಗೆ ಪ್ರಾಥಮಿಕ ವರದಿ ಸಲ್ಲಿಕೆ ಮಾಡಿದ್ದು, ಸಾಧ್ಯಾಸಾಧ್ಯಾತೆ ವರದಿ ನೀಡು­ವಂತೆ ಸಂಸ್ಥೆಗೆ ತಿಳಿಸಲಾಗಿದೆ,’ ಎಂದು ತಿಳಿಸಿದರು.

ನಗರದಿಂದ ವೈಟ್‌ಫೀಲ್ಡ್‌ ಭಾಗಕ್ಕೆ “ಪರ್ಸನಲ್‌ ರ್ಯಾಪಿಡ್‌ ಟ್ರಾನ್ಸಿಟ್‌ ಸಿಸ್ಟಂ (ಪಿಆರ್‌ಟಿಎಸ್‌)’ ಸೇವೆ ನೀಡುವ ಯೋಜನೆಯನ್ನು ಹಲವರು ವಿಮರ್ಶೆ ಮಾಡುತ್ತಿದ್ದಾರೆ. ಆದರೆ ವೈಟ್‌ಫೀಲ್ಡ್‌ ಭಾಗಕ್ಕೆ ಪ್ರಾಯೋಗಿಕವಾಗಿ ಸೇವೆಯನ್ನು ಆರಂಭಿಸ­ಲಾಗುವುದು. ಯಶಸ್ವಿಯಾದರೆ ಮಾತ್ರ ಉಳಿದ ಭಾಗಗಳಿಗೆ ಸೇವೆ ವಿಸ್ತರಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

ನಗರದ ಕೇಂದ್ರ ಭಾಗದಿಂದ ಹೊರ­ವಲಯದ ಹೆದ್ದಾರಿಗಳನ್ನು ಸಂಪರ್ಕಿಸುವ ಎಲಿವೇಟೆಡ್‌ ಕಾರಿಡಾರ್‌ ನಿರ್ಮಾಣದ ಸಮಗ್ರ ಯೋಜನಾ ವರದಿ (ಡಿಪಿಆರ್‌) ಸಿದ್ಧವಾಗಿದ್ದು, ವಿದೇಶಗಳಿಂದ ಆರ್ಥಿಕ ನೆರವು ಕೋರಲಾಗಿದೆ. ವಿದೇಶಿ ಸಂಸ್ಥೆಗಳಿಂದ ಹಣಕಾಸು ನೆರವಿನ ಭರವಸೆ ದೊರೆತರೆ ಯೋಜನೆಯನ್ನು ಆರಂಭಿಸಲು ನಿರ್ಧರಿಸಲಾಗಿದೆ ಎಂದರು. 

ನಗರದ ನಡುವೆ ಟೋಲ್‌?
ಸುರಂಗ ಮಾರ್ಗ ನಿರ್ಮಾಣವಾದರೆ ಟೋಲ್‌ ಸಂಗ್ರಹಿಸುವ ಪ್ರಸ್ತಾವವೂ ಇದೆ. ಚತುಷ್ಪಥದ ಜತೆಗೆ ಎರಡೂ ಕಡೆ ಸರ್ವಿಸಸ್‌ ರಸ್ತೆ ನಿರ್ಮಾಣವಾಗಲಿದೆ. ಪ್ರತಿ ಕಿ.ಮೀ.ಗೆ 500 ಕೋಟಿ ರೂ. ವೆಚ್ಚವಾಗುವ ಅಂದಾಜು ಇದೆ. ಒಟ್ಟಾರೆ 3,500 ಕೋಟಿ ರೂ. ವೆಚ್ಚವಾಗುವ ಸಾಧ್ಯತೆ ಇದೆ. ಇಷ್ಟು ಬೃಹತ್‌ ಮೊತ್ತದ ಬಂಡವಾಳ ಅಗತ್ಯವಿರುವುದರಿಂದ ಟೋಲ್‌ ಸಂಗ್ರಹ ಅನಿವಾರ್ಯ. ಈ ಬಗ್ಗೆಯೂ ಚರ್ಚೆ ನಡೆದಿದೆ. ಸಂಸ್ಥೆ ನೀಡುವ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next