Advertisement

4 ಬಾರಿಯ ರಾಷ್ಟ್ರೀಯ ಚೆಸ್‌ ಚಾಂಪಿಯನ್‌, ಎಂ.ಎ. ಪದವೀಧರ 

12:32 PM Apr 01, 2017 | Harsha Rao |

ಉಡುಪಿ: ಚೆಸ್‌ ಒಲಿಂಪಿ ಯಾಡ್‌ನ‌ಲ್ಲಿ ಬೆಳ್ಳಿ ಪದಕ, 4 ಬಾರಿಯ ರಾಷ್ಟ್ರೀಯ ಚೆಸ್‌ ಚಾಂಪಿಯನ್‌, ವಿಶ್ವ ಚೆಸ್‌ ಚಾಂಪಿಯನ್‌ ಶಿಪ್‌ನಲ್ಲಿ ಭಾರತದ ಅಗ್ರಸ್ಥಾನಿ, 2011ರಿಂದ ಭಾರತ ತಂಡ ಖಾಯಂ ಸದಸ್ಯ, ಅದಕ್ಕೂ ಮಿಗಿಲಾಗಿ ಎಂ.ಎ. ಎಕಾನಾಮಿಕ್ಸ್‌ನಲ್ಲಿ ವಿಶ್ವವಿದ್ಯಾಲಯಕ್ಕೆ 2ನೇ ಸ್ಥಾನಿ ಇದು ಮಣಿಪಾಲದಲ್ಲಿ ನಡೆದ ಏಶ್ಯ ಪೆಸಿಫಿಕ್‌ ಅಂಧರ ಚೆಸ್‌ ಪಂದ್ಯಾಟದಲ್ಲಿ  ಭಾರತವನ್ನು ಪ್ರತಿನಿಧಿಸಿ ವಿಜೇತರಾದ ಕಿಶನ್‌ ಗಂಗೊಳ್ಳಿ ಅವರ ಸಾಧನೆಯ ಯಶೋಗಾಥೆ. 
ಮೂಲತಃ ಕುಂದಾಪುರದ ಗಂಗೊಳ್ಳಿಯ ವರಾದ ಕಿಶನ್‌ ಅವರ ತಂದೆ ಶಿವಮೊಗ್ಗದಲ್ಲಿ ಕೆನರಾ ಬ್ಯಾಂಕ್‌ ಉದ್ಯೋಗಿಯಾಗಿದ್ದು, ತಾಯಿ ಬ್ಯೂಟಿಶಿಯನ್‌ ಆಗಿದ್ದಾರೆ. 

Advertisement

ಕಿಶನ್‌ ಗಂಗೊಳ್ಳಿ ಅವರು ಎಂ.ಎ. ಎಕಾ ನಾಮಿಕ್ಸ್‌ನಲ್ಲಿ ಕುವೆಂಪು ವಿಶ್ವವಿದ್ಯಾಲಯಕ್ಕೆ 2ನೇ ರ್‍ಯಾಂಕ್‌ ಪಡೆದ ಸಾಧಕರಾಗಿದ್ದಾರೆ. 2011ರಿಂದ ಭಾರತವನ್ನು ಪ್ರತಿನಿಧಿಸು ತ್ತಿರುವ ಕಿಶನ್‌ ಅವರು ಚಿಕ್ಕಂದಿನಿಂದಲೇ ದೃಷ್ಟಿ ಹೀನತೆಯಿಂದ ಬಳಲುತ್ತಿದ್ದಾರೆ. ಬಾವ ಸಂತೋಷ್‌ ಅವರಿಂದ ಅಂಧರ ಚೆಸ್‌ ಬಗ್ಗೆ ಪ್ರಭಾವಿತರಾದ ಅವರು 9ನೇ ತರಗತಿಯಿಂದ ಅಂಧರ ಚೆಸ್‌ ತರಬೇತಿ ಪಡೆಯಲು ಆರಂಭಿಸಿದರು. 

2011ರಲ್ಲಿ ನಡೆದ ವಿಶ್ವ  ಜ್ಯೂನಿಯರ್‌ ಅಂಧರ ಚೆಸ್‌ ಪಂದ್ಯಾವಳಿಗೆ ಆಯ್ಕೆಯಾಗಿದ್ದು, ಇದು ಅವರ ಪ್ರಥಮ ವಿಶ್ವಮಟ್ಟದ ಟೂರ್ನಿಯಾಗಿದೆ. 2012ರಲ್ಲಿ ಚೆಸ್‌ ಒಲಿಂಪಿಯಾಡ್‌ನ‌ಲ್ಲಿ ಬೆಳ್ಳಿ ಪದಕ  ಪಡೆದರೆ, 2013ರಲ್ಲಿ  ಸ್ಪೇನ್‌ನಲ್ಲಿ ನಡೆದ ವಿಶ್ವ ಅಂಧರ ಚೆಸ್‌ ಚಾಂಪಿಯನ್‌ ಶಿಪ್‌ನಲ್ಲಿ ಭಾರತ 8ನೇ ಸ್ಥಾನ ಪಡೆದರೂ ಕಿಶನ್‌ ಮಿಂಚುವಲ್ಲಿ ಯಶಸ್ವಿಯಾಗಿದ್ದರು. 2014ರಲ್ಲಿ ಗ್ರೀಸ್‌ನಲ್ಲಿ ನಡೆದ ಟೂರ್ನಿಯಲ್ಲಿ ಭಾರತ 15ನೇ ಸ್ಥಾನ ಪಡೆದರೂ ಕಿಶನ್‌ ದೇಶದ ಅಗ್ರಸ್ಥಾನಿಯಾಗಿ ಮೂಡಿಬಂದಿದ್ದರು. 

4 ಬಾರಿ ರಾಷ್ಟ್ರೀಯ ಚಾಂಪಿಯನ್‌
2013ರಲ್ಲಿ ಭುವನೇಶ್ವರ, 2014ರಲ್ಲಿ ವಸಾಯಿ, 2016ರಲ್ಲಿ ಮುಂಬಯಿ ಹಾಗೂ 2017ರಲ್ಲಿ ಧಾರಾವಿಯಲ್ಲಿ ನಡೆದ ಅಂಧರ ರಾಷ್ಟ್ರೀಯ ಟೂರ್ನಿಯಲ್ಲಿ ಸತತ 4 ಬಾರಿ ಚಾಂಪಿಯನ್‌ ಆಗಿ ಮೂಡಿ ಬಂದ ಹೆಗ್ಗಳಿಕೆ ಇವರದು. ಮುಂಬರುವ ಜೂನ್‌ನಲ್ಲಿ ಮೆಸಿಡೋನಿಯಾದಲ್ಲಿ  ಚೆಸ್‌ ಒಲಿಂಪಿಯಾಡ್‌ ನಡೆಯುತ್ತಿದ್ದು, ಭಾರತದಿಂದ ಆಯ್ಕೆಯಾಗಿರುವ ಐವರು ಸ್ಪರ್ಧಿ ಗಳಲ್ಲಿ ಕಿಶನ್‌ ಒಬ್ಬರು. ಮಹಾರಾಷ್ಟ್ರದ ಇಬ್ಬರು, ಗುಜರಾತ್‌ ಹಾಗೂ ಒಡಿಸ್ಸಾದ ತಲಾ ಒಬ್ಬರು ಅವಕಾಶ ಪಡೆದಿದ್ದಾರೆ. ಚಿನ್ನದ ಪದಕ ಪಡೆಯುವ ಗುರಿಯೊಂದಿಗೆ ಸತತ ಅಭ್ಯಾಸದಲ್ಲಿ ತೊಡಗಿರುವ ಕಿಶನ್‌ ಈ ಏಶ್ಯಾ ಚೆಸ್‌ ಪಂದ್ಯಾವಳಿಯನ್ನು ಅದರ ಪೂರ್ವಭಾವಿ ಪಂದ್ಯಾಟವೆಂದು ಪರಿಗಣಿಸಿ ಕಣಕ್ಕಿಳಿದಿದ್ದರು.

– ಪ್ರಶಾಂತ್ ಪಾದೆ

Advertisement
Advertisement

Udayavani is now on Telegram. Click here to join our channel and stay updated with the latest news.

Next