ಇಸ್ಲಾಮಾಬಾದ್: ಪಾಕಿಸ್ತಾನ್ ಶೇರು ಮಾರುಕಟ್ಟೆಗೆ ಸೋಮವಾರ ಬೆಳಗ್ಗೆ ಗ್ರೆನೇಡ್ ಎಸೆದು ದಾಳಿ ನಡೆಸಿದ್ದ ಐವರು ನಾಗರಿಕರು ಸಾವನ್ನಪ್ಪಿದ್ದು, ನಾಲ್ವರು ಉಗ್ರರನ್ನು ಹೊಡೆದುರುಳಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯಲ್ಲಿ ಒಟ್ಟು ಒಂಬತ್ತು ಮಂದಿ ಸಾವನ್ನಪ್ಪಿದ್ದಾರೆ.
ಕರಾಚಿಯಲ್ಲಿರುವ ಬಿಗಿ ಭದ್ರತೆ ಪ್ರದೇಶದಲ್ಲಿದ್ದ ಸ್ಟಾಕ್ ಎಕ್ಸ್ ಚೇಂಜ್ ಕಟ್ಟಡದೊಳಕ್ಕೆ ಗ್ರೆನೇಡ್ ಎಸೆದು ದಾಳಿ ನಡೆಸಿದ್ದ ಉಗ್ರರು, ನಂತರ ಏಕಾಏಕಿ ಗುಂಡಿನ ದಾಳಿ ನಡೆಸಿದ್ದರು. ಘಟನೆಯಲ್ಲಿ ಕರ್ತವ್ಯದಲ್ಲಿದ್ದ ಸಬ್ ಇನ್ಸ್ ಪೆಕ್ಟರ್ ಹಾಗೂ ನಾಲ್ವರು ಭದ್ರತಾ ಸಿಬ್ಬಂದಿ ಸಾವನ್ನಪ್ಪಿರುವುದಾಗಿ ವರದಿಯೊಂದು ವಿವರಿಸಿದೆ.
ವರದಿಯ ಪ್ರಕಾರ, ನಾಲ್ವರು ಉಗ್ರರು ದಾಳಿ ನಡೆಸಿದ್ದು, ಭದ್ರತಾ ಪಡೆಗಳು ನಾಲ್ವರು ಉಗ್ರರನ್ನು ಹತ್ಯೆಗೈದಿರುವುದಾಗಿ ತಿಳಿಸಿದೆ. ಸದ್ಯ ಭದ್ರತಾ ಪಡೆಗಳು ಪ್ರದೇಶವನ್ನು ಹತೋಟಿಗೆ ತೆಗೆದುಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ವರದಿ ಹೇಳಿದೆ.
ಉಗ್ರರು ಪೊಲೀಸ್ ಸಮವಸ್ತ್ರದಲ್ಲಿ ಆಗಮಿಸಿ ದಾಳಿ ನಡೆಸಿದ್ದರು ಎಂದು ಮೂಲಗಳು ತಿಳಿಸಿವೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಾಗಿದೆ ಎಂದು ವರದಿ ತಿಳಿಸಿದೆ.
ಪಾಕಿಸ್ತಾನದ ಮಾಧ್ಯಮಗಳ ವರದಿ ಪ್ರಕಾರ, ಪಾಕ್ ಸ್ಟಾಕ್ ಎಕ್ಸ್ ಚೇಂಜ್ ಮೇಲಿನ ದಾಳಿಯ ಹೊಣೆಯನ್ನು ಬಲೂಚ್ ಲಿಬರೇಷನ್ ಆರ್ಮಿ ಹೊತ್ತುಕೊಂಡಿರುವುದಾಗಿ ವಿವರಿಸಿದೆ.