ಚಂಡೀಗಢ್: ಹರ್ಯಾಣದ ಟೋಲ್ ಪ್ಲಾಝಾ ಬಳಿ ನಾಲ್ವರು ಶಂಕಿತ ಖಲಿಸ್ತಾನಿ ಭಯೋತ್ಪಾದಕರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಬಂಧಿತರಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತ ಉಗ್ರರು ಮಹಾರಾಷ್ಟ್ರದ ನಾಂದೇಡ್ ಮತ್ತು ತೆಲಂಗಾಣದ ಅದಿಲಾಬಾದ್ ಗೆ ಸ್ಫೋಟಕಗಳನ್ನು ಡ್ರೋನ್ ಮೂಲಕ ಸರಬರಾಜು ಮಾಡಲು ಸಿದ್ಧತೆ ನಡೆಸಿದ್ದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿರುವುದಾಗಿ ವರದಿಯಾಗಿದೆ.
ಬಂಧಿತರನ್ನು ಗುರ್ ಪ್ರೀತ್, ಅಮಾನ್ ದೀಪ್, ಪರ್ಮಿಂದರ್ ಹಾಗೂ ಭೂಮಿಂದರ್ ಎಂದು ಗುರುತಿಸಲಾಗಿದ್ದು, ಇವರೆಲ್ಲ ಪಂಜಾಬ್ ನವರು ಎನ್ನಲಾಗಿದೆ. ಪಿಸ್ತೂಲ್, 31 ಸಜೀವ ಗುಂಡುಗಳು, 3 ಐಇಡಿಗಳು, 6 ಮೊಬೈಲ್ ಫೋನ್ ಗಳು ಹಾಗೂ 1.3 ಲಕ್ಷ ರೂಪಾಯಿಯಷ್ಟು ನಗದನ್ನು ವಶಪಡಿಸಿಕೊಂಡಿರುವುದಾಗಿ ವರದಿ ವಿವರಿಸಿದೆ.
ಪ್ರಮುಖ ಆರೋಪಿ ಗುರ್ ಪ್ರೀತ್ ಈ ಹಿಂದೆ ಜೈಲುಶಿಕ್ಷೆ ಅನುಭವಿಸಿರುವುದಾಗಿ ವರದಿ ತಿಳಿಸಿದೆ. ನಾಲ್ವರಿಗೂ ಪಾಕಿಸ್ತಾನದ ಐಎಸ್ ಐ ಜೊತೆ ನಿಕಟ ಸಂಪರ್ಕ ಇದ್ದಿರುವುದಾಗಿ ವರದಿ ಹೇಳಿದೆ. ಇಂದು ಮುಂಜಾನೆ 4ಗಂಟೆಗೆ ಕರ್ನಲ್ ನ ಬಸ್ತಾರಾ ಟೋಲ್ ಪ್ಲಾಝಾದಿಂದ ದೆಹಲಿಗೆ (ಟೋಯೊಟಾ ಇನ್ನೋವಾ) ತೆರಳುತ್ತಿದ್ದ ಸಂದರ್ಭದಲ್ಲಿ ಬಂಧಿಸಲಾಗಿತ್ತು.
ಪಾಕಿಸ್ತಾನದಿಂದ ಕಾರ್ಯಾಚರಿಸುತ್ತಿರುವ ಹರ್ವಿಂದರ್ ಸಿಂಗ್ ಎಂಬ ಮತ್ತೊಬ್ಬ ಉಗ್ರನ ಮೂಲಕ ಈ ನಾಲ್ವರಿಗೆ ಸಂದೇಶ ರವಾನೆಯಾಗುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈಗಾಗಲೇ ಎರಡು ಸ್ಥಳಗಳಿಗೆ ಐಇಡಿ ಸರಬರಾಜು ಮಾಡುವಲ್ಲಿ ಶಂಕಿತ ಉಗ್ರರು ಯಶಸ್ವಿಯಾಗಿದ್ದಾರೆಂಬ ಮಾಹಿತಿ ತಿಳಿದುಬಂದಿರುವುದಾಗಿ ವರದಿ ಹೇಳಿದೆ.