Advertisement

ತ.ನಾಡು, ಕೇರಳ, ಪುದುಚೇರಿ, ಅಸ್ಸಾಂ : ನಾಲ್ಕು ರಾಜ್ಯಗಳಲ್ಲಿ ಮತದಾನ ಪೂರ್ಣ; ಇನ್ನೊಂದು ಬಾಕಿ

02:24 AM Apr 07, 2021 | Team Udayavani |

ಹೊಸದಿಲ್ಲಿ: ವಿಧಾನಸಭೆ ಚುನಾವಣೆ ಎದುರಿಸುತ್ತಿರುವ 5 ರಾಜ್ಯಗಳ ಪೈಕಿ ತಮಿಳುನಾಡು, ಕೇರಳ ಮತ್ತು ಪುದುಚೇರಿಯಲ್ಲಿ ಮಂಗಳವಾರ ಒಂದೇ ಹಂತದಲ್ಲಿ ಮತದಾನ ಪೂರ್ಣಗೊಂಡಿದೆ. ಅಸ್ಸಾಂನಲ್ಲಿ ಕೊನೆಯ ಹಂತದ ಹಕ್ಕು ಚಲಾವಣೆ ಶಾಂತಿಯುತವಾಗಿ ನಡೆದರೆ, ಪ.ಬಂಗಾಲದಲ್ಲಿ ನಡೆದ 3ನೇ ಹಂತದಲ್ಲಿಯೂ ಹಿಂಸಾಚಾರ, ಹಲ್ಲೆ, ಇವಿಎಂ ವಿವಾದ ವರದಿಯಾಗಿವೆ. ಈ ಮೂಲಕ ಬಂಗಾಲ ಹೊರತುಪಡಿಸಿ ಉಳಿದೆಲ್ಲ ಕಡೆ ಮತ ಸಮರಕ್ಕೆ ತೆರೆ ಬಿದ್ದಿದೆ.

Advertisement

ತಮಿಳುನಾಡು
ತ.ನಾಡಿನ 234 ಕ್ಷೇತ್ರಗಳಿಗೆ ಮತದಾನ ಶಾಂತಿ ಯುತ ವಾಗಿತ್ತು. ಪಕ್ಷದ ಚಿಹ್ನೆ ಇರುವ ಟಿಶರ್ಟ್‌ ಧರಿಸಿ ಮತ ಹಾಕಿದ ಡಿಎಂಕೆಯ ಉದಯನಿಧಿ ವಿರುದ್ಧ ಎಐಎಡಿಎಂಕೆ ದೂರು ನೀಡಿದೆ. ಕಾರಿನಲ್ಲಿ ಪಕ್ಷದ ಧ್ವಜ ಹಾಕಿದ್ದ ಬಿಜೆಪಿಯ ಖುಷೂº ವಿರುದ್ಧ ಡಿಎಂಕೆ ದೂರು ದಾಖಲಿಸಿದೆ. ಗೆಲುವಿನ ಬಳಿಕ ಹಣ ನೀಡುವುದಾಗಿ ಬಿಜೆಪಿ ಟೋಕನ್‌ ಹಂಚಿದೆ ಎಂದು ಕಮಲ್‌ ಹಾಸನ್‌ ದೂರು ನೀಡಿದ್ದಾರೆ.

ಕೇರಳ
“ಶಬರಿಮಲೆ’ ಪ್ರಸ್ತಾವ ಮತದಾನದ ದಿನವೂ ಕೇಳಿಬಂತು. ಅಯ್ಯಪ್ಪ ಸಹಿತ ಎಲ್ಲ ದೇವರೂ ಎಲ್‌ಡಿಎಫ್ ಪರ ಇದ್ದಾರೆ ಎಂದು ಸಿಎಂ ಪಿಣರಾಯಿ ಹೇಳಿದರೆ, ಎಡರಂಗ ಸರಕಾರ ಅಯ್ಯಪ್ಪನ ಆಕ್ರೋಶಕ್ಕೆ ತುತ್ತಾಗಲಿದೆ ಎಂದು ವಿಪಕ್ಷ ನಾಯಕ ರಮೇಶ್‌ ಚೆನ್ನಿತ್ತಲ ಹೇಳಿದ್ದಾರೆ. ಕಾಸರ ಗೋಡಿನ ಬೆರಿಪದವಿನಲ್ಲಿ ಅವಧಿಗೆ ಮುನ್ನ ಮತದಾನ ಅವಕಾಶ ಕೊನೆಗೊಳಿಸಿದ್ದು ವಿವಾದಕ್ಕೆ ಕಾರಣವಾಗಿದೆ.

ಅಸ್ಸಾಂ
12 ಜಿಲ್ಲೆಗಳ 40 ಕ್ಷೇತ್ರಗಳಲ್ಲಿ ಮತದಾನ ಬಹುತೇಕ ಶಾಂತಿಯುತ ವಾಗಿತ್ತು. ಒಂದೆರಡು ಮತಗಟ್ಟೆಗಳಲ್ಲಿ ಸಣ್ಣಪುಟ್ಟ ಘರ್ಷಣೆ ನಡೆದಿದ್ದು, ಲಾಠಿ ಪ್ರಹಾರ ಮಾಡಿ ಪೊಲೀಸರು ಜನರನ್ನು ಚದುರಿಸಿದ್ದಾರೆ. ಸಂಜೆ 5ರ ವರೆಗೆ ಶೇ. 78.94ರಷ್ಟು ಮತದಾನ ದಾಖಲಾಗಿದೆ. ಪುದುಚೇರಿಯಲ್ಲೂ ಯಾವುದೇ ಅಹಿತಕರ ಘಟನೆಯಿಲ್ಲದೆ ಮತ ಸಮರಕ್ಕೆ ಪೂರ್ಣವಿರಾಮ ಬಿದ್ದಿದೆ.

ಪ. ಬಂಗಾಲ: ಹಿಂಸೆ, ಮಾರಾಮಾರಿ
ಆರಂಬಾಗ್‌ನಲ್ಲಿ ಟಿಎಂಸಿ-ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದೆ. ಟಿಎಂಸಿ ನಾಯಕನ ಮನೆಯಲ್ಲಿ 4 ಇವಿಎಂ ಮತ್ತು ವಿವಿಪ್ಯಾಟ್‌ ಪತ್ತೆ ಯಾಗಿದ್ದು, ಚುನಾವಣ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ. ಬಿಜೆಪಿ ಅಭ್ಯರ್ಥಿಯ ಪೋಲಿಂಗ್‌ ಏಜೆಂಟ್‌ ಮೇಲೆ ಟಿಎಂಸಿ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಈ ನಡುವೆ ಬಂಗಾಲದಲ್ಲಿ ಶೇ. 77.68 ಮತದಾನ ದಾಖಲಾಗಿದೆ.

Advertisement

ಎಲ್ಲಿ ಎಷ್ಟು ಮತದಾನ? (ಶೇಕಡಾವಾರು)
ತಮಿಳುನಾಡು : 63.47
ಕೇರಳ : 69.95
ಪುದುಚೇರಿ ; 77.90
ಅಸ್ಸಾಂ : 76.96

Advertisement

Udayavani is now on Telegram. Click here to join our channel and stay updated with the latest news.

Next