Advertisement

ರಾಮಮಂದಿರಕ್ಕಾಗಿ 4 ಹಂತದ ಯೋಜನೆ

06:00 AM Nov 25, 2018 | Team Udayavani |

ಹೊಸದಿಲ್ಲಿ: ಕೋಟ್ಯಂತರ ಹಿಂದೂಗಳ ಶತಮಾನಗಳ ಕನಸಾದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಅಧ್ಯಾದೇಶ ತರುವಂತೆ ಕೇಂದ್ರದ ಮೇಲೆ ಒತ್ತಡ ಹೇರಲು ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್‌) ನಿರ್ಧರಿಸಿದ್ದು, ಈ ಆಗ್ರಹವನ್ನು 4 ಹಂತಗಳಲ್ಲಿ ಜಾರಿಗೊಳಿಸಲು ಮಹತ್ತರ ಯೋಜನೆಯೊಂದನ್ನು ರೂಪಿಸಿದೆ. ಇದರ ಜತೆಗೆ, ವಿಶ್ವ ಹಿಂದೂ ಪರಿಷತ್‌ (ವಿಎಚ್‌ಪಿ)  ಈ ಹಿನ್ನೆಲೆಯಲ್ಲಿ ಸಾರ್ವಜನಿಕರಲ್ಲಿ ಮಂದಿರದ ಬಗ್ಗೆ ಅರಿವು ಮೂಡಿಸಿ ಒಂದು ಸ್ಪಷ್ಟ ಜನಾಭಿಪ್ರಾಯ ರೂಪಿಸಲು ಹಾಗೂ ಸಾಧು, ಸಂತರಿಂದ ರಾಮಮಂದಿರದ ಅಧ್ಯಾದೇಶಕ್ಕೆ  ಒಕ್ಕೊರಲಿನ ಬೆಂಬಲವನ್ನೂ ಪಡೆಯಲು ನಿರ್ಧರಿಸಿದೆ. 

Advertisement

ಆಗ್ರಹದ ಹಿಂದಿನ ಉದ್ದೇಶ: ರಾಮಜನ್ಮಭೂಮಿ ವಿಚಾರಕ್ಕೆ ಸಂಬಂಧಿಸಿ 2010ರಲ್ಲಿ ಅಲಹಾಬಾದ್‌ ಹೈಕೋರ್ಟ್‌ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಯ ಮೇಲ್ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ಮುಂದಿನ ವರ್ಷ ಜನವರಿಯಿಂದ ಆರಂಭವಾಗಲಿದೆ. ಆ ತೀರ್ಪು ಹೊರಬೀಳಲು ದಶಕಗಳೇ ಉರುಳುವ ಸಾಧ್ಯತೆ ಇರುವುದರಿಂದ ಕೇಂದ್ರ ಈ ಕೂಡಲೇ ಅಧ್ಯಾದೇಶ ತರಬೇಕು. ಆ ಮೂಲಕ ಮಂದಿರ ನಿರ್ಮಾಣದ ಕನಸು ನನಸಾಗಬೇಕು ಎಂಬುದು ಆರ್‌ಎಸ್‌ಎಸ್‌, ವಿಎಚ್‌ಪಿ ಆಶಯ. ಇದ ಕ್ಕಾಗಿಯೇ ನಾಲ್ಕು ಹಂತಗಳ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಮಂದಿರ ನಿರ್ಮಾಣದ ದಿನಾಂಕ ಘೋಷಿಸಿ
“ಕುಂಭಕರ್ಣ ನಿದ್ದೆಯಿಂದ ಎದ್ದೇಳಿ, ಮಂದಿರವನ್ನು ಯಾವಾಗ ನಿರ್ಮಿಸುತ್ತೀರಿ ಎಂದು ಹೇಳಿ’ ಎಂದು ಶಿವಸೇನೆ ಮುಖ್ಯಸ್ಥ ಉದ್ದವ್‌ ಠಾಕ್ರೆ ಸವಾಲು ಹಾಕಿದ್ದಾರೆ. ಅಯೋಧ್ಯೆಯಲ್ಲಿ ಶನಿವಾರ ಬಿಜೆಪಿ ನೇತೃತ್ವದ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಠಾಕ್ರೆ, ಮಂದಿರ ನಿರ್ಮಾಣಕ್ಕೆ ಕಾನೂನು ತನ್ನಿ ಅಥವಾ ಸುಗ್ರೀವಾಜ್ಞೆ ಹೊರಡಿಸಿ ಎಂದು ಆಗ್ರಹಿಸಿದ್ದಾರೆ. ದಿನಗಳು, ತಿಂಗಳುಗಳು, ವರ್ಷಗಳು ಹಾಗೂ ತಲೆಮಾರುಗಳೇ ಕಳೆದವು. ರಾಮ ಮಂದಿರ ನಿರ್ಮಾಣವಾಗಲೇ ಇಲ್ಲ. ಮಂದಿರವನ್ನು ನಿರ್ಮಿಸುತ್ತೇವೆ ಎಂದು ಹೇಳುತ್ತಲೇ ಇದ್ದೀರಿ. ಆದರೆ ದಿನಾಂಕವನ್ನು ಮಾತ್ರ ನಿಗದಿಗೊಳಿಸು ವುದಿಲ್ಲ. ಮೊದಲು ದಿನಾಂಕ ನಿಗದಿಪಡಿಸಿ. ಇತರ ವಿಷಯಗಳನ್ನು ಆಮೇಲೆ ಚರ್ಚಿಸೋಣ ಎಂದು ಉದ್ಧವ್‌ ಹೇಳಿದ್ದಾರೆ.

ನಾನು ಕುಂಭಕರ್ಣನನ್ನು ನಿದ್ದೆಯಿಂದ ಎಬ್ಬಿಸಲು ಇಲ್ಲಿಗೆ ಬಂದಿದ್ದೇನೆ. ಈಗಿನ ಕುಂಭ ಕರ್ಣ ನಾಲ್ಕು ವರ್ಷಗಳಿಂದ ನಿದ್ದೆ ಮಾಡುತ್ತಿ ದ್ದಾನೆ ಎಂದು ಕೇಂದ್ರದ ಬಿಜೆಪಿ ಸರ್ಕಾರವನ್ನು ಪರೋಕ್ಷವಾಗಿ ಉಲ್ಲೇಖೀಸಿ ತರಾಟೆಗೆ ತೆಗೆದು ಕೊಂಡಿದ್ದಾರೆ. ಈಗ ರಾಜ್ಯದಲ್ಲಿ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದೆ. ಕಾನೂನು ಜಾರಿಗೊಳಿಸುವುದೂ ಸುಲಭ. ಈ ಹಿಂದೆ ಅಟಲ್‌ ಬಿಹಾರಿ ವಾಜಪೇಯಿ ಸರ್ಕಾರ ಸಮ್ಮಿಶ್ರ ಸರ್ಕಾರವಾದ್ದರಿಂದ ಕಾನೂನು ರೂಪಿಸು ವುದು ಸಾಧ್ಯವಿರಲಿಲ್ಲ. ಈಗಿನ ಸರ್ಕಾರ ಹೆಚ್ಚು ಸುಸ್ಥಿರವಾಗಿದೆ. ಹೀಗಾಗಿ ಈಗ ಕಾನೂನು ರಚಿಸಿ. ರಾಮಮಂದಿರ ನಿರ್ಮಾಣ ಮಾಡಿದ್ದಕ್ಕೆ ನಮಗೆ ಹೆಸರು ಬೇಡ. ಯಾರು ಬೇಕಾದರೂ ಹೆಸರು ಗಳಿಸಬಹುದು. ಆದರೆ ನಮಗೆ ಮಂದಿರ ನಿರ್ಮಾಣವಾಗಬೇಕು ಅಷ್ಟೆ ಎಂದು ಠಾಕ್ರೆ ಹೇಳಿದ್ದಾರೆ.

ಅಲ್ಲದೆ ಶಿವಸೇನೆ ಮುಖವಾಣಿ ಸಾಮ್ನಾದಲ್ಲೂ ಈ ಬಗ್ಗೆ ಸಂಪಾದಕೀಯ ಬರೆಯಲಾಗಿದ್ದು, ಅಯೋಧ್ಯೆಯಲ್ಲಿ ರಾಮ ಇನ್ನೂ ವನವಾಸದಲ್ಲೇ ಇದ್ದಾನೆ. ನಿಮ್ಮ ರಾಜಕೀಯ ಅನುಕೂಲಕ್ಕೆ ಆತನನ್ನು ಬಳಸಿಕೊಂಡಿರಿ. ಆದರೆ ಆತ ಇನ್ನೂ ವನವಾಸದಲ್ಲೇ ಇದ್ದಾನೆ. ಈಗ ಅಯೋಧ್ಯೆಯಲ್ಲಿ ಮಹಾಭಾರತ ನಡೆಯುತ್ತದೆ. ರಾಮ ಮಂದಿರಕ್ಕಾಗಿ ನಾವೆಲ್ಲರೂ ಹೋರಾಡಬೇಕಿದೆ. ಅಯೋಧ್ಯೆಯವರೆಗೆ ರಾಮಸೇತುವನ್ನು ಮಹಾರಾಷ್ಟ್ರ ನಿರ್ಮಿಸಿದೆ ಎಂದು ಸಾಮ್ನಾದಲ್ಲಿ ಉಲ್ಲೇಖೀಸಲಾಗಿದೆ.

Advertisement

ಏನಿದು ನಾಲ್ಕು ಹಂತದ ಕಾರ್ಯಕ್ರಮ? 
1ನೇ ಹಂತ: ನ.25(ಇಂದು)ರಂದು ವಿಎಚ್‌ಪಿ ವತಿಯಿಂದ ದೇಶದ 153 ಸ್ಥಳಗಳಲ್ಲಿ ಸಣ್ಣ ಹಾಗೂ ದೊಡ್ಡ ಪ್ರಮಾಣದ ಸಾರ್ವಜನಿಕ ಸಂವಾದ ಕಾರ್ಯಕ್ರಮ ಆಯೋಜನೆ. ಇವುಗಳಲ್ಲಿ ಮೂರು ಮಹಾ ಸಮ್ಮೇಳನಗಳು ಅಯೋಧ್ಯೆ, ನಾಗ್ಪುರ ಮತ್ತು ಬೆಂಗಳೂರಿನಲ್ಲಿ ಆಯೋಜನೆ. ಇತರ 150 ಸ್ಥಳಗಳಲ್ಲಿ ಸಣ್ಣ ಕಾರ್ಯಕ್ರಮ. 

2ನೇ ಹಂತ: ಮಂದಿರ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ತರುವಂತೆ ಒತ್ತಡ ಹೇರುವ ಪ್ರಯತ್ನದ ಒಂದು ಭಾಗವಾಗಿ, ಆರ್‌ಎಸ್‌ಎಸ್‌ ವತಿಯಿಂದ ಸಂಸತ್ತಿನ ಉಭಯ ಸದನಗಳ ಸದಸ್ಯರಿಗೆ ಪ್ರತ್ಯೇಕವಾಗಿ ಮನವಿ ಸಲ್ಲಿಕೆ. ಸುಗ್ರೀವಾಜ್ಞೆ ತರುವ ವಿಚಾರವಾಗಿ, ಆರ್‌ಎಸ್‌ಎಸ್‌ ಹಿರಿಯ ನಾಯಕ ಹಾಗೂ ಹಾಲಿ ಸಂಸದ ಆರ್‌.ಕೆ.ಸಿನ್ಹಾರಿಂದ ಖಾಸಗಿ ಮಸೂದೆಯಡಿ ಸಂಸತ್ತಿನಲ್ಲಿ ಚರ್ಚೆಗೆ ಚಾಲನೆ. 

3ನೇ ಹಂತ: ಆರ್‌ಎಸ್‌ಎಸ್‌, ವಿಎಚ್‌ಪಿ ವತಿಯಿಂದ ಡಿ. 9ರಂದು ನವದೆಹಲಿಯ ರಾಮಲೀಲಾ ಮೈದಾನದಲ್ಲಿ ಬೃಹತ್‌ ಸಾರ್ವಜನಿಕ ಸಮ್ಮೇಳನ. ಸಂಸತ್ತಿನ ಚಳಿಗಾಲದ ಅಧಿವೇಶನಕ್ಕೆ 2 ದಿನ ಬಾಕಿಯಿರುವಾಗ ನಡೆಯಲಿರುವ ಈ ಸಮ್ಮೇಳನದಲ್ಲಿ ಉತ್ತರ ಪ್ರದೇಶ, ಹರ್ಯಾಣದ ಸುಮಾರು 20ಕ್ಕೂ ಹೆಚ್ಚು ಜಿಲ್ಲೆಗಳಿಂದ ಆಗಮಿಸುವ ಕಾರ್ಯಕರ್ತರನ್ನು ಹುರಿಗೊಳಿಸುವ ಕಾರ್ಯಕ್ರಮ.

4ನೇ ಹಂತ: ರಾಮಮಂದಿರ ನಿರ್ಮಾಣದ ಸುಗ್ರೀವಾಜ್ಞೆ ಆಕಾಂಕ್ಷೆ ಈಡೇರಲು ಡಿ. 18ರಿಂದ 27ರವರೆಗೆ ದೇಶದ ಹಲವೆಡೆ ಸಾಮೂಹಿಕ ಪ್ರಾರ್ಥನೆ ಹಾಗೂ ಹೋಮ-ಹವನಗಳ ಆಯೋಜನೆ. 

ಪ್ಲಾನ್‌ ಬಿ: ನಾಲ್ಕು ಹಂತಗಳ ಆಗ್ರಹಕ್ಕೂ ಮೀರಿ, ಕೇಂದ್ರ ಸರ್ಕಾರ ಅಧ್ಯಾದೇಶ ಹೊರಡಿಸುವಲ್ಲಿ ವಿಫ‌ಲವಾದರೆ ಜ.31 ಹಾಗೂ ಫೆ.1ರಂದು ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಧರ್ಮ ಸಂಸತ್‌ ನಡೆಸಲು ತೀರ್ಮಾನ. ಧರ್ಮ ಸಂಸತ್ತಿನಲ್ಲಿ ಮುಂದಿನ ಕಾರ್ಯಸೂಚಿ ಘೋಷಣೆ. ಸುಗ್ರೀವಾಜ್ಞೆ ತಾರದಿದ್ದರೆ 1990ರಲ್ಲಿ ರಾಮ ಮಂದಿರಕ್ಕಾಗಿ ನಡೆದಿದ್ದ ಆಂದೋಲನ ಮಾದರಿಯಲ್ಲೇ ಮತ್ತೂಂದು ಆಂದೋಲನ ಶುರು.

ಅಯೋಧ್ಯೆಯ ಕರ ಸೇವಕಪುರದಲ್ಲಿ ಇಂದು ಧರ್ಮ ಸಂಸತ್‌
3 ಲಕ್ಷ ಜನರು ಧರ್ಮಸಭೆಯಲ್ಲಿ ಸೇರುವ ಸಾಧ್ಯತೆ
3 ಸಾವಿರಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ
160 ಇನ್‌ಸ್ಪೆಕ್ಟರ್‌ಗಳು, 700 ಪೇದೆಗಳು, 5 ಆರ್‌ಎಎಫ್ ತುಕಡಿ, ಎಟಿಎಸ್‌ ಕಮಾಂಡೋಗಳು, 42 ಪಿಎಸಿ ತುಕಡಿ, ಡ್ರೋನ್‌ಗಳ ನಿಯೋಜನೆ
3000ಕ್ಕೂ ಹೆಚ್ಚು ಶಿವಸೇನೆ ಕಾರ್ಯಕರ್ತರು ಅಯೋಧ್ಯೆಗೆ
ಏಕಕಾಲಕ್ಕೆ ಮಹಾರಾಷ್ಟ್ರದಾದ್ಯಂತ ಸಾವಿರಾರು ಶಿವಸೈನಿಕರಿಂದ ಆರತಿ.
ಮುಂಬಯಿಯ ಸಿದ್ದಿವಿನಾಯಕ ದೇಗುಲದಲ್ಲಿ ಆರತಿಗೆ ಉದ್ಧವ್‌ ಠಾಕ್ರೆ ಪತ್ನಿ ರಶ್ಮಿ ನೇತೃತ್ವ

ತಮ್ಮ ವೈಫ‌ಲ್ಯಗಳನ್ನು ಮುಚ್ಚಿಕೊಳ್ಳಲು ಬಿಜೆಪಿ ರಾಮಮಂದಿರ ವಿಷಯ ಪ್ರಸ್ತಾಪಿಸುತ್ತಿದೆ. ಅವರ ಉದ್ದೇಶ ಉತ್ತಮವೇ ಆಗಿದ್ದರೆ ಐದು ವರ್ಷಗಳವರೆಗೆ ಕಾಯಬೇಕಿರಲಿಲ್ಲ. ಇದು ಅವರ ರಾಜಕೀಯ ತಂತ್ರ.
ಮಾಯಾವತಿ, ಬಿಎಸ್‌ಪಿ ಮುಖ್ಯಸ್ಥೆ

ಉತ್ತರ ಪ್ರದೇಶದಲ್ಲಿನ ಪರಿಸ್ಥಿತಿಯ ಗಂಭೀರತೆಯನ್ನು ಸುಪ್ರೀಂ ಕೋರ್ಟ್‌ ಗಮನಿಸಬೇಕು. ಅಗತ್ಯವಿದ್ದರೆ ಸೇನೆಯನ್ನೂ ಕರೆಸಬೇಕು. ಬಿಜೆಪಿ ಹಾಗೂ ಮಿತ್ರಪಕ್ಷಗಳು ಯಾವುದೇ ಅತಿರೇಕಕ್ಕಾದರೂ ಹೋಗುವ ಸಾಧ್ಯತೆಯಿದೆ.
ಅಖೀಲೇಶ್‌ ಯಾದವ್‌, ಸಮಾಜವಾದಿ ಪಕ್ಷದ ಮುಖ್ಯಸ್ಥ

ಅಯೋಧ್ಯೆಯಲ್ಲಿನ ಜನರು ಶಾಂತಿಯಿಂದ ನೆಲೆಸಲು ಅವಕಾಶ ನೀಡಿ. ರಾಮಮಂದಿರ ಕುರಿತಂತೆ ಯಾವುದೇ ಸಮಸ್ಯೆಯಿದ್ದರೆ ದೆಹಲಿಗೆ ಅಥವಾ ಲಕ್ನೋಗೆ ಜನರು ತೆರಳಬೇಕು. ವಿಧಾನಸಭೆ ಅಥವಾ ಸಂಸತ್ತನ್ನು ಅವರು ಮುತ್ತಿಗೆ ಹಾಕಬೇಕು. ಬದಲಿಗೆ ಅಯೋಧ್ಯೆಯಲ್ಲಿ ಒಟ್ಟಾದರೆ ಪ್ರಯೋಜನವಿಲ್ಲ.
ಇಕ್ಬಾಲ್‌ ಅನ್ಸಾರಿ, ರಾಮಜನ್ಮಭೂಮಿ ಪ್ರಕರಣದ ಪ್ರಮುಖ ದೂರುದಾರ
 

Advertisement

Udayavani is now on Telegram. Click here to join our channel and stay updated with the latest news.

Next