Advertisement
ಹಿಂದಿನ ಐಜಿಪಿ ಹರಿಶೇಖರನ್ ಅವರು ನೂತನ ಐಜಿಪಿ ಹೇಮಂತ್ ನಿಂಬಾಳ್ಕರ್ ಅವರಿಗೆ ಅಧಿಕಾರ ಹಸ್ತಾಂತರ ಮಾಡಿದ ಆ. 17ರಂದು ಮಧ್ಯಾಹ್ನ ಸುಮಾರು 12 ಗಂಟೆಗೆ ಸಾಧಾರಣ ಗಾತ್ರದ ಶ್ರೀಗಂಧದ ಮರವೊಂದು ಬಂಗ್ಲೆ ಆವರಣದಿಂದ ಬುಡ ಸಮೇತ ಕಳವಾಗಿರುವ ಬಗ್ಗೆ “ಉದಯವಾಣಿ’ ತನಿಖಾ ವರದಿಯನ್ನು ಸೋಮವಾರ ಪ್ರಕಟಿಸಿತ್ತು.
ಪತ್ರಿಕೆ ವರದಿಯು ಅರಣ್ಯ ಇಲಾಖೆ ಹಾಗೂ ಪೊಲೀಸ್ ವಲಯದಲ್ಲಿ ಗಂಭೀರ ಚರ್ಚೆಗೆ ಎಡೆಮಾಡಿದೆ. ಅರಣ್ಯ ಇಲಾಖೆ ಉನ್ನತ ಅಧಿಕಾರಿಗಳು ಬಂಗ್ಲೆಗೆ ದೌಡಾಯಿಸಿ ಸ್ಥಳ ಪರಿಶೀಲನೆ ಹಾಗೂ ಮಹಜರು ನಡೆಸಿದ್ದಾರೆ. ಮತ್ತೂಂದೆಡೆ ಪೊಲೀಸ್ ಇಲಾಖೆ ಕೂಡ ಶ್ರೀಗಂಧದ ಮರ ಕಳವಾಗಿರುವುದು ನಿಜ ಎಂಬುದನ್ನು ದೃಢಪಡಿಸಿದೆ. ಆದರೆ ಅದು ಆ. 17ರ ಬದಲು ಜುಲೈ 28ರಂದು ಎಂದು ಸ್ಪಷ್ಟಪಡಿಸಿದೆ. ಆ ಮೂಲಕ ಆ. 17ರಂದು ಶ್ರೀಗಂಧ ಕಳವು ಆಗಿರುವ ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನ ಕೂಡ ನಡೆಯುತ್ತಿರುವುದು ಗಮನಾರ್ಹ. ಇದರೊಂದಿಗೆ ಕಳೆದ 20 ದಿನದಲ್ಲಿ ಒಟ್ಟು ಐದು ಶೀಗಂಧದ ಮರ ಐಜಿಪಿ ಬಂಗ್ಲೆ ಆವರಣದಿಂದ ಕಳವಾಗಿವೆ. ಗೌಪ್ಯವಾಗಿಟ್ಟ ಪೊಲೀಸರು
ಐಜಿಪಿ ಸರಕಾರಿ ಬಂಗ್ಲೆ ಆವರಣದಿಂದ ಶ್ರೀಗಂಧದ ಮರ ಕಳವು ಆಗಿರುವುದು ಇದೇ ಮೊದಲಲ್ಲ ಎಂದು ‘ಉದಯವಾಣಿ’ ಸೋಮವಾರವಷ್ಟೇ ವರದಿ ಮಾಡಿತ್ತು. ಅದಕ್ಕೆ ಪೂರಕ ದಾಖಲೆ ಎಂಬಂತೆ ಅದೇ ಐಜಿಪಿ ಬಂಗ್ಲೆಯಿಂದ ಜು. 28ರಂದು ಮಧ್ಯರಾತ್ರಿ 2 ಗಂಟೆಗೆ 4 ಶ್ರೀಗಂಧದ ಮರಗಳನ್ನು ದುಷ್ಕರ್ಮಿಗಳು ಕಡಿದು ಕಳ್ಳಸಾಗಾಟ ಮಾಡಿರುವ ಆತಂಕಕಾರಿ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ನಾಲ್ಕು ಗಂಧದ ಮರ ಕಳವು ಆಗಿರುವ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ಪ್ರಗತಿಯಲ್ಲಿದೆ ಎಂಬುದಾಗಿ ಮಂಗಳೂರು ಉಪ ಪೊಲೀಸ್ ಆಯುಕ್ತರು ಸೋಮವಾರವಷ್ಟೇ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ. ಇದುವರೆಗೆ ಈ ವಿಷಯವನ್ನೂ ಗೌಪ್ಯವಾಗಿಡಲಾಗಿತ್ತು.
Related Articles
ಮೂಲಗಳ ಪ್ರಕಾರ ಐಜಿಪಿ ಬಂಗ್ಲೆಯಿಂದ ಜು. 28ರಂದು ಒಟ್ಟು ನಾಲ್ಕು ಶ್ರೀಗಂಧ ಮರ ಕದ್ದು ಹೋಗಿರುವ ಬಗ್ಗೆ ಪ್ರಕರಣ ದಾಖಲಿಸಿಕೊಂಡು, ಅನಂತರ ಅಂದರೆ ಜು. 30 ರಂದು ಅರಣ್ಯ ಇಲಾಖೆಗೂ ಆ ಬಗ್ಗೆ ಪೊಲೀಸರು ಮಾಹಿತಿ ರವಾನಿಸಿದ್ದಾರೆ. ಗಮನಾರ್ಹ ಅಂದರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೂರು ವಾರ ಕಳೆದಿದ್ದರೂ ಇಲ್ಲಿವರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮರ ಕಡಿದಿರುವ ಕುರಿತಂತೆ ಮಹಜರು ನಡೆಸಿರಲಿಲ್ಲ. ವಿಶೇಷ ಅಂದರೆ ಸೋಮವಾರ ಅರಣ್ಯ ಇಲಾಖೆ ವಲಯ ಅಧಿಕಾರಿಗಳನ್ನು ಒಳಗೊಂಡ ತಂಡವು ಐಜಿಪಿ ಬಂಗ್ಲೆಗೆ ಭೇಟಿ ನೀಡಿ, ನಾಲ್ಕು ಮರಗಳ ಕಾಂಡವನ್ನು ತಪಾಸಣೆ ನಡೆಸಿ ಮಹಜರು ಮಾಡಿದ್ದಾರೆ. ಇಷ್ಟು ತಡವಾಗಿ ಸ್ಥಳ ಪರಿಶೀಲನೆ ಹಾಗೂ ಮಹಜರು ಮಾಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿದೆ.
Advertisement
ಪೊಲೀಸರೇ ಪತ್ತೆ ಮಾಡಬೇಕು: ಶ್ರೀಧರ್ಈ ಬಗ್ಗೆ “ಉದಯವಾಣಿ’ಗೆ ಪ್ರತಿಕ್ರಿಯಿಸಿದ ಮಂಗಳೂರು ವಲಯ ಅರಣ್ಯಾಧಿಕಾರಿ ಶ್ರೀಧರ್, “ಜು. 28ರಂದು ಐಜಿಪಿ ಆವರಣದಿಂದ ಕಳವು ಆಗಿರುವ ಶ್ರೀಗಂಧದ ಪ್ರಕರಣದ ಬಗ್ಗೆ ಸೋಮವಾರ ಮಹಜರು ನಡೆಸಲಾಗಿದೆ. ಐಜಿಪಿ ಬಂಗ್ಲೆಯು ಸುಮಾರು ಐದು ಎಕರೆ ಜಾಗ ಹೊಂದಿದ್ದು, ಅಲ್ಲಿ ಶ್ರೀಗಂಧ ಸೇರಿದಂತೆ ಕೆಲವು ಬೆಳೆ ಬಾಳುವ ಮರಗಳು ಇವೆ. ಅವುಗಳ ಪೈಕಿ ಬಂಗ್ಲೆ ಗಾರ್ಡನ್‌ನಲ್ಲಿದ್ದ ಒಟ್ಟು ಮೂರು ಮರ ಹಾಗೂ ಕಾಂಪೌಂಡ್‌ಗೆ ಹೊಂದಿಕೊಂಡಿದ್ದ ಒಂದು ದೊಡ್ಡ ಗಾತ್ರದ ಮರವನ್ನು ಕದ್ದುಕೊಂಡು ಹೋಗಿದ್ದಾರೆ. ಈ ನಾಲ್ಕು ಮರಗಳನ್ನು ಬುಡದಿಂದ ಕಡಿದುಕೊಂಡು ಹೋಗಿದ್ದು, ಕಾಂಡ ಅಲ್ಲೇ ಇದೆ. ಈ ಮರಗಳ ಸುತ್ತಳತೆ ಸುಮಾರು 30ರಿಂದ 50 ಸೆಂ.ಮೀ. ಇದೆ. ಒಂದು ಮರ ಮಾತ್ರ ದೊಡ್ಡ ಗಾತ್ರದ್ದಾಗಿದ್ದು, ಉಳಿದ ಮೂರು ಸಾಮಾನ್ಯ ಗಾತ್ರದವು. ಈ ಸಂಬಂಧ ಕಾವೂರು ಪೊಲೀಸರು ತನಿಖೆ ನಡೆಸಿದ್ದಾರೆ. ನಮ್ಮ ಇಲಾಖೆ ಕೂಡ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಈ ಶ್ರೀಗಂಧ ಮರಗಳ ಕಳ್ಳತನ ಪ್ರಕರಣದ ಹಿಂದೆ ಯಾರ ಕೈವಾಡವಿದೆ ಎಂಬುದನ್ನು ಪೊಲೀಸರೇ ಪತ್ತೆ ಮಾಡಬೇಕಿದೆ’ ಎನ್ನುತ್ತಾರೆ. ‘ಇನ್ನು ಆ. 17ರಂದು ಮತ್ತೆ ಐಜಿಪಿ ಆವರಣದಿಂದ ಶ್ರೀಗಂಧದ ಮರ ಕಳವು ಆಗಿರುವ ಬಗ್ಗೆ ಇನ್ನೂ ನಮಗೆ ಮಾಹಿತಿ ಬಂದಿಲ್ಲ. ಒಂದು ವೇಳೆ, ಪೊಲೀಸರು ಐಜಿಪಿ ಆವರಣದಲ್ಲಿ ಅಳವಡಿಸಿರುವ ಸಿಸಿಟಿವಿ ಪರಿಶೀಲಿಸಿದರೆ, ಈ ಪ್ರಕರಣ ಕೂಡ ಬೆಳಕಿಗೆ ಬರಲು ಅನುಕೂಲವಾಗುತ್ತದೆ. ಈ ಸರಕಾರಿ ಬಂಗ್ಲೆಯಲ್ಲಿ ಒಟ್ಟು ಎಷ್ಟು ಶ್ರೀಗಂಧ ಅಥವಾ ಬೇರೆ ಬೆಳೆಬಾಳುವ ಮರಗಳನ್ನು ನೆಟ್ಟು ಬೆಳೆಸಲಾಗಿದೆ ಎಂಬ ದಾಖಲೆ ಕೂಡ ಅರಣ್ಯ ಇಲಾಖೆ ಬಳಿಯಿಲ್ಲ. ಈ ಐಜಿಪಿ ಬಂಗ್ಲೆ ಆವರಣದಿಂದ ರಾಜಾರೋಷವಾಗಿ ದುಷ್ಕರ್ಮಿಗಳು ಶ್ರೀಗಂಧದ ಮರ ಕೊಳ್ಳೆ ಹೊಡೆಯುತ್ತಿದ್ದಾರೆ ಎಂದರೆ ಅದು ಸಾಮಾನ್ಯ ವಿಷಯವಲ್ಲ. ಪದೇಪದೇ ಇಲ್ಲಿ ಇಂಥಹ ಪ್ರಕರಣ ಆಗುತ್ತಿರುವುದು ನೋಡಿದರೆ ಅಲ್ಲಿನವರ ಕೈವಾಡವಿರುವ ಬಗ್ಗೆಯೂ ಅನುಮಾನ ಮೂಡುವುದು ಸಹಜ. ಆದರೆ ಇದು ಐಜಿಪಿಯಂಥಹ ಉನ್ನತ ದರ್ಜೆ ಪೊಲೀಸ್ ಅಧಿಕಾರಿ ನೆಲೆಸಿರುವ ಬಂಗ್ಲೆ ಆಗಿರುವುದರಿಂದ ನಾವು ತನಿಖೆ ನಡೆಸುವುದಕ್ಕೆ ಸಾಧ್ಯವಿಲ್ಲ. ಖುದ್ದು ಐಜಿಪಿಗಳೇ ಉನ್ನತ ಮಟ್ಟದ ತನಿಖೆಗೆ ಆದೇಶಿಸುವುದು ಉತ್ತಮ. ಈ ನಡುವೆ ನಮ್ಮ ಅಧಿಕಾರಿಗಳು ಮತ್ತೆ ಅಲ್ಲಿಗೆ ಭೇಟಿ ನೀಡಿ ಇನ್ನೂ ಎಷ್ಟು ಶ್ರೀಗಂಧದ ಮರಗಳು ಹಾಗೂ ಇತರ ಜಾತಿಯ ಬೆಳೆಬಾಳುವ ಮರಗಳಿವೆ ಎಂಬುದನ್ನು ಪತ್ತೆ ಮಾಡಿ ಅದನ್ನು ದಾಖಲು ಮಾಡಿಟ್ಟುಕೊಳ್ಳಲಾಗುವುದು’ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ನನಗೇನೂ ಗೊತ್ತಿಲ್ಲ : ಹರಿಶೇಖರನ್
ಐಜಿಪಿ ಬಂಗ್ಲೆಯಿಂದ ಶ್ರೀಗಂಧದ ಮರಗಳ ಸರಣಿ ಕಳವು ಪ್ರಕರಣದ ಬಗ್ಗೆ ನಿಕಟಪೂರ್ವ ಪಶ್ಚಿಮ ವಲಯ ಐಜಿಪಿ ಹರಿಶೇಖರನ್ ಅವರನ್ನು ಸಂಪರ್ಕಿಸಿದಾಗ, “ನಾನು ಅಲ್ಲಿಂದ ವರ್ಗಾವಣೆಗೊಂಡು ಒಂದು ವಾರ ಕಳೆದಿದೆ. ಹೀಗಿರುವಾಗ ನನಗೆ ಶ್ರೀಗಂಧ ಕಳವು ಆಗಿರುವ ವಿಚಾರದ ಬಗ್ಗೆ ಏನೂ ಗೊತ್ತಿಲ್ಲ. ಏನಿದ್ದರೂ ಹೊಸ ಐಜಿಪಿ ಬಂದಿದ್ದು, ಅವರನ್ನೇ ಕೇಳಿ’ ಎನ್ನುವ ಹಾರಿಕೆಯ ಉತ್ತರವನ್ನು ಕೊಟ್ಟಿದ್ದಾರೆ. ಗಮನಾರ್ಹ ವಿಚಾರವೆಂದರೆ, ಜು. 28ರಂದು ಒಂದೇ ರಾತ್ರಿಗೆ ನಾಲ್ಕು ಶ್ರೀಗಂಧದ ಮರಗಳ ಕಳ್ಳತನವಾಗಿರಬೇಕಾದರೆ ಹರಿಶೇಖರನ್ ಅವರೇ ಐಜಿಪಿ ಆಗಿದ್ದು, ಅದೇ ಸರಕಾರಿ ಬಂಗ್ಲೆಯಲ್ಲಿ ನೆಲೆಸಿದ್ದರು. ಮೂಲಗಳ ಪ್ರಕಾರ ಮರಗಳು ಕಳ್ಳತನವಾಗುವ ದಿನ ಅವರು ಬಂಗ್ಲೆಯಲ್ಲಿ ಇರಲಿಲ್ಲ. ಕಾರ್ಯನಿಮಿತ್ತ ಬೆಂಗಳೂರಿಗೆ ತೆರಳಿದ್ದರು. ಬಹುಶಃ ಅದೇ ಸಂದರ್ಭವನ್ನು ಬಳಸಿಕೊಂಡು ಶ್ರೀಗಂಧದ ಮರಗಳನ್ನು ಕಡಿದುರುಳಿಸಿ ಕಳ್ಳಸಾಗಾಟ ಮಾಡಿದ್ದಾರೆ. ಆದರೆ ಈ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರಬೇಕಾದರೆ ಹರಿಶೇಖರನ್ ಅವರ ಗಮನಕ್ಕೂ ಈ ವಿಚಾರ ಬಂದಿರುವ ಸಾಧ್ಯತೆ ಜಾಸ್ತಿಯಿದೆ. ಹೆಚ್ಚಿನ ತನಿಖೆಗೆ ಕೋರಿದ್ದೇನೆ
ನಾನು ಈಗಷ್ಟೇ ಅಧಿಕಾರ ವಹಿಸಿಕೊಂಡಿದ್ದು, ಈ ಬಂಗ್ಲೆಯಲ್ಲಿ ಒಂದು ರಾತ್ರಿಯಷ್ಟೇ ತಂಗಿದ್ದೇನೆ. ಐಜಿಪಿ ಬಂಗ್ಲೆ ಆವರಣದಲ್ಲಿ ಎಷ್ಟು ಗಂಧದ ಮರಗಳಿವೆ ಅಥವಾ ಎಷ್ಟು ಕಳ್ಳತನವಾಗಿದೆ ಎಂಬಿತ್ಯಾದಿ ಬಗ್ಗೆ ಯಾವ ಮಾಹಿತಿಯೂ ನನಗೆ ಗೊತ್ತಿಲ್ಲ. ಆದರೆ, “ಉದಯವಾಣಿ’ಯಲ್ಲಿ ವರದಿ ಬಂದ ಅನಂತರ ಈ ವಿಚಾರ ನನ್ನ ಗಮನಕ್ಕೆ ಬಂದಿದೆ. ಕೂಡಲೇ ಈ ಪ್ರಕರಣದ ಬಗ್ಗೆ ಮಂಗಳೂರು ನಗರ ಪೊಲೀಸ್ ಆಯುಕ್ತರ ಜತೆಗೆ ಮಾತನಾಡಿದ್ದೇನೆ. ನಾನು ಐಜಿಪಿ ಆಗಿದ್ದರೂ ನಾನು ವಾಸಿಸುವ ಬಂಗ್ಲೆ ವ್ಯಾಪ್ತಿ ಕಮಿಷನರೆಟ್‌ನಲ್ಲಿರುವ ಕಾರಣ ಈ ಪ್ರಕರಣದ ಬಗ್ಗೆ ಆಯುಕ್ತರೇ ತನಿಖೆ ನಡೆಸಬೇಕಾಗುತ್ತದೆ. ಈ ಕಾರಣಕ್ಕೆ ಶ್ರೀಗಂಧ ಕಳವು ಬಗ್ಗೆ ಸೂಕ್ತ ತನಿಖೆ ಕೈಗೊಳ್ಳಬೇಕೆಂದು ಆಯುಕ್ತರಲ್ಲಿ ಮನವಿ ಮಾಡಿದ್ದೇನೆ. ಇನ್ನು ನಾನು ವಾಸವಿರುವ ಬಂಗ್ಲೆಯಲ್ಲೇ ಇಂಥ ಕಳವು ಪ್ರಕರಣ ಆಗಿರುವುದರಿಂದ ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಬಂಗ್ಲೆಯಲ್ಲಿ ಶ್ರೀಗಂಧದ ಮರ ಸೇರಿದಂತೆ ಏನೆಲ್ಲ ಬೆಲೆಬಾಳುವ ಮರ ಅಥವಾ ವಸ್ತುಗಳಿವೆ ಎಂಬ ಬಗ್ಗೆ ಪಟ್ಟಿ ಮಾಡಲು ಸಂಬಂಧಪಟ್ಟವರಿಗೆ ನಿರ್ದೇಶಿಸುತ್ತೇನೆ.
– ಹೇಮಂತ್ ನಿಂಬಾಳ್ಕರ್, ಪಶ್ಚಿಮ ವಲಯ ನೂತನ ಐಜಿಪಿ ಶ್ರೀಗಂಧ ಕಳವು: ಪರಿಶೀಲಿಸುವೆ
ಐಜಿಪಿ ಬಂಗ್ಲೆಯಿಂದ ಶ್ರೀಗಂಧದ ಮರ ಕಳವು ಆಗಿರುವ ವಿಚಾರ ಉದಯವಾಣಿ ವರದಿಯಿಂದ ಈಗಾಗಲೇ ನನ್ನ ಗಮನಕ್ಕೆ ಬಂದಿದೆ. ಆದರೆ ಈ ಬಗ್ಗೆ ಪೊಲೀಸರೊಂದಿಗೆ ಇನ್ನೂ ಚರ್ಚೆ ನಡೆಸಿಲ್ಲ. ಐಜಿಪಿ ನಿವಾಸದ ಆವರಣದಿಂದಲೇ ಈ ರೀತಿ ಬೆಳೆಬಾಳುವ ಶ್ರೀಗಂಧದ ಮರ ಕಳ್ಳತನವಾಗಿದ್ದರೆ ಅದೊಂದು ಗಂಭೀರ ಪ್ರಕರಣವೇ ಸರಿ. ಈ ಬಗ್ಗೆ ನಮ್ಮ ಇಲಾಖೆ ಅಧಿಕಾರಿಗಳೊಂದಿಗೆ ಪರಿಶೀಲಿಸಿ ಅಗತ್ಯ ಕ್ರಮ ತೆಗೆದುಕೊಳ್ಳ ಲಾಗುವುದು. ಸದ್ಯಕ್ಕೆ ಈ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇಲ್ಲ.
– ರಮಾನಾಥ ರೈ, ಅರಣ್ಯ ಸಚಿವ – ಸುರೇಶ್ ಪುದುವೆಟ್ಟು Also Read This…:
►►ಐಜಿಪಿ ಬಂಗ್ಲೆ ಆವರಣದಿಂದಲೇ ಶ್ರೀಗಂಧದ ಮರ ಕಳವು: //bit.ly/2uXfz3I