Advertisement

ಉದ್ಯೋಗದಲ್ಲಿ ಅಂಗವಿಕಲರಿಗೆ ಶೇ. 4 ಮೀಸಲಾತಿ

09:41 AM Dec 02, 2017 | |

ಕಲಬುರಗಿ: ರಾಜ್ಯ ಸರಕಾರವು ಸರಕಾರಿ ನೌಕರಿಗಳಲ್ಲಿ ಅಂಗವಿಕಲರಿಗೆ ಶೇ. 4ರಷ್ಟು ಮೀಸಲಾತಿ ಕಲ್ಪಿಸಿದೆ. ಇದರ ಲಾಭ ಪಡೆದುಕೊಂಡು ಭದ್ರ ಜೀವನ ನಡೆಸುವ ನಿಟ್ಟಿನಲ್ಲಿ ಅಂಗವಿಕಲರು ಹೆಜ್ಜೆ ಇಡಬೇಕು ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಬನ್ಸಿ ಪವಾರ್‌ ಹೇಳಿದರು.

Advertisement

ಇಲ್ಲಿನ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ವಿವಿಧ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಶ್ವ ವಿಕಲಚೇತನರ ದಿನಾಚರಣೆ ಮತ್ತು ಸಾಂಸ್ಕೃತಿಕ ಹಾಗೂ ಕ್ರೀಡಾ ಸ್ಪರ್ಧೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈ ಮೊದಲು ಇದ್ದ ಶೇ. 3ರಷ್ಟು ಮೀಸಲಾತಿಯನ್ನು ರಾಜ್ಯ ಸರ್ಕಾರವು ಮತ್ತೆ ಶೇಕಡಾ ಒಂದರಷ್ಟು ಮೀಸಲಾತಿ ಹೆಚ್ಚಿಸಿ ಒಟ್ಟು ಶೇಕಡಾ 4ರಷ್ಟು ಮೀಸಲಾತಿ ಕಲ್ಪಿಸಿದೆ ಎಂದರು.

ಕಳೆದ 2016ರ ಕಾಯ್ದೆ ಪ್ರಕಾರ ರಾಜ್ಯ ಸರ್ಕಾರವು ಸುಮಾರು 21 ಪ್ರಕಾರದ ನ್ಯೂನ್ಯತೆಯುಳ್ಳ ಅಂಗವಿಕಲರಿಗೆ ಪೋಷಣಾ ಭತ್ಯೆ ನೀಡುತ್ತಿದೆ. ಅಂಗವಿಕಲರ ಕಲ್ಯಾಣಕ್ಕಾಗಿ ಇಲಾಖೆಯು ಅನೇಕ ಸೌಲಭ್ಯಗಳನ್ನು ಒದಗಿಸುತ್ತಿದೆ. ಗುರುತಿನ ಚೀಟಿಯೊಂದಿಗೆ ಆ ಎಲ್ಲ ಸೌಲಭ್ಯಗಳನ್ನು ಅಂಗವಿಕಲರು ಪಡೆಯಬೇಕು ಎಂದರು.

ಅಂಧರ ಬಾಳಿಗೆ ಬ್ರೇಲ್‌ ಲಿಪಿ ಬೆಳಕಾಗಿದೆ. ಬೇರೆ ಶಾಲೆಗಳಲ್ಲಿ ಅಂಧ ಮಕ್ಕಳು ಓದುವುದಕ್ಕಿಂತ ಅಂಧ ಬಾಲಕರ ಶಾಲೆಯಲ್ಲಿ ಓದಬೇಕು. ಅಂಗವಿಕಲರ ಕಲ್ಯಾಣಕ್ಕಾಗಿ ಜಿಲ್ಲಾ ಪಂಚಾಯಿತಿಯಿಂದ ಕಡಿಮೆ ಅನುದಾನ ದೊರೆಯುತ್ತಿದೆ. ಆದ್ದರಿಂದ ಈಗಿರುವ ಅನುದಾನವು ಕೇವಲ ಶೇಕಡಾ 5ರಷ್ಟು ಇದ್ದು, ಅದನ್ನು ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.

ಇದಕ್ಕೂ ಮುನ್ನ ಕ್ರೀಡಾಕೂಟಗಳನ್ನು ಉದ್ಘಾಟಿಸಿದ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಹಣಮಂತರಾಯ ಮಲಾಜಿ ಮಾತನಾಡಿದರು. ನಿರುದ್ಯೋಗಿ ವಿಕಲಚೇತನರ ಸಂಘದ ರಾಜ್ಯಾಧ್ಯಕ್ಷ ಅಂಬಾಜಿ ಮೇಟಿ, ಕಿವುಡ ಮಕ್ಕಳ ಸರ್ಕಾರಿ ಶಾಲೆಯ ಅಧೀಕ್ಷಕ ವೆಂಕಟೇಶ ದೇಶಪಾಂಡೆ, ಅಂಧ ಮಕ್ಕಳ ಶಾಲೆಯ ದೈಹಿಕ ಶಿಕ್ಷಕ ರಾಜು ಶಖಾಪುರ್‌, ಜಿಲ್ಲಾ ಪುನರ್ವಸತಿ ಕಾರ್ಯಕರ್ತ ಖಾಸಿಂಸಾಬ್‌, ಬಸವರಾಜ್‌, ಹಣಮಂತ್‌ ಹಾಗೂ ಸರ್ಕಾರಿ ಅಂಧ ಬಾಲಕರ ಪ್ರೌಢಶಾಲೆ ಮತ್ತು ಕಿವುಡ ಮಕ್ಕಳ ಸರ್ಕಾರಿ ಶಾಲಾ ಸಿಬ್ಬಂದಿ ಹಾಜರಿದ್ದರು.

Advertisement

ಸ್ಪರ್ಧೆಗಳು: ಅಂಗವಿಕಲರಿಗಾಗಿ ಹಮ್ಮಿಕೊಂಡಿದ್ದ 50 ಮೀಟರ್‌ ಓಟದ ಸ್ಪರ್ಧೆಯಲ್ಲಿ ಖಾಸಿಂಸಾಬ್‌ ಡೊಂಗರಗಾಂವ್‌ ಪ್ರಥಮ, ನಾಗರಾಜ್‌ ಜೀವಣಗಿ ದ್ವಿತೀಯ ಹಾಗೂ ನಾನಾಗೌಡ ತೃತೀಯ ಬಹುಮಾನ ಪಡೆದರು. ಅಂಧರ 50 ಮಿಟರ್‌ ಓಟದ ಸ್ಪರ್ಧೆಯಲ್ಲಿ ಶರಣು ಹಿಪ್ಪರಗಿ ಪ್ರಥಮ, ಜಗದೀಶ ನಾಯಕ್‌ ದ್ವಿತೀಯ, ಶ್ರೀಕಾಂತ ತೃತೀಯ ಸ್ಥಾನ, ಅಂಧ ಮಕ್ಕಳ 50 ಮೀಟರ್‌ ಓಟದ ಸ್ಪರ್ಧೆಯಲ್ಲಿ ನಾಗರಾಜ ಪ್ರಥಮ, ದೇವಿದಾಸ್‌ ದ್ವಿತೀಯ, ಸಂತೋಷ ತೃತೀಯ ಸ್ಥಾನ ಪಡೆದರು. ಸ್ಪರ್ಧಾ ವಿಜೇತರರಿಗೆ ಡಿ. 3ರಂದು ಜರುಗುವ ವಿಶ್ವ ವಿಕಲಚೇತನರ ದಿನಾಚರಣೆ ಸಮಾರಂಭದಲ್ಲಿ ಪದಕ ಮತ್ತು ಪ್ರಶಸ್ತಿ ಪತ್ರ ಪ್ರದಾನ ಮಾಡಲಾಗುವುದು.

Advertisement

Udayavani is now on Telegram. Click here to join our channel and stay updated with the latest news.

Next