ನವದೆಹಲಿ: ದೆಹಲಿ ಮದ್ಯ ನೀತಿ ಪ್ರಕರಣಕ್ಕೆ ಸಂಬಂಧಿಸಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನ್ಯಾಯಾಂಗ ಬಂಧನವನ್ನು ಏಪ್ರಿಲ್ 15 ರವರೆಗೆ ವಿಸ್ತರಿಸಲಾಗಿದ್ದು ಜೊತೆಗೆ ಅವರನ್ನು ತಿಹಾರ್ ಜೈಲಿಗೆ ಕಳುಹಿಸಲಾಗಿದೆ.
ಇದರ ನಡುವೆ ದೆಹಲಿಯ ಸಚಿವೆ ಅತಿಶಿ ಅವರು ಇಂದು (ಮಂಗಳವಾರ) ಪತ್ರಿಕಾಗೋಷ್ಠಿ ನಡೆಸಿ ಸ್ಪೋಟಕ ಮಾಹಿತಿಯೊಂದನ್ನು ಹಂಚಿಕೊಂಡಿದ್ದು ಅದರಂತೆ ನನ್ನನ್ನು ಬಿಜೆಪಿಗೆ ಸೆಳೆಯುವ ಯತ್ನ ನಡೆಯುತ್ತಿರುವುದಾಗಿ ಹೇಳಿಕೊಂಡಿದ್ದಾರೆ, ನನಗೆ ಅತ್ಯಂತ ಆತ್ಮೀಯ ವ್ಯಕ್ತಿಯ ಮೂಲಕ ಬಿಜೆಪಿ ಸೇರಲು ಬಿಜೆಪಿ ನನ್ನನ್ನು ಸಂಪರ್ಕಿಸಿದೆ, ಒಂದೋ ಬಿಜೆಪಿ ಸೇರುವ ಮೂಲಕ ನನ್ನ ರಾಜಕೀಯ ಬದುಕನ್ನು ಉಳಿಸಿಕೊಳ್ಳಿ ಇಲ್ಲವೇ ಮುಂದಿನ 1 ತಿಂಗಳಲ್ಲಿ ಇಡಿಯಿಂದ ನಿಮ್ಮನ್ನು ಬಂಧಿಸಲಾಗುತ್ತದೆ ಎಂದು ಅತಿಶಿ ಹೇಳಿಕೊಂಡಿದ್ದಾರೆ. ಇದರೊಂದಿಗೆ ಆಮ್ ಆದ್ಮಿ ಪಕ್ಷದ ಎಲ್ಲರನ್ನು ಮುಗಿಸಲು ಬಿಜೆಪಿ ಯತ್ನಿಸುತ್ತಿದೆ ಎಂದು ಅವರು ಹೇಳಿಕೊಂಡಿದ್ದಾರೆ.
ಆಮ್ ಆದ್ಮಿ ಪಕ್ಷದ ಉನ್ನತ ನಾಯಕರಾದ ಸತ್ಯೇಂದ್ರ ಜೈನ್, ಮನೀಶ್ ಸಿಸೋಡಿಯಾ, ಸಂಜಯ್ ಸಿಂಗ್ ಮತ್ತು ಅರವಿಂದ್ ಕೇಜ್ರಿವಾಲ್ ಅವರನ್ನು ಈಗಾಗಲೇ ಬಂಧಿಸಲಾಗಿದೆ. ಇನ್ನು ಎರಡು ತಿಂಗಳಲ್ಲಿ ನನ್ನನ್ನೂ ಸೇರಿಸಿ ಆಮ್ ಆದ್ಮಿ ಪಕ್ಷದ ನಾಲ್ವರು ನಾಯಕರನ್ನು (ಸೌರಭ್ ಭಾರದ್ವಾಜ್, ದುರ್ಗೇಶ್ ಪಾಠಕ್ ಮತ್ತು ರಾಘವ್ ಚಡ್ಡಾ) ಬಂಧಿಸಲು ಬಿಜೆಪಿ ಉದ್ದೇಶಿಸಿದೆ ಎಂದು ನಾಯಕಿ ಪತ್ರಿಕಾ ಗೋಷ್ಠಿಯಲ್ಲಿ ಹೇಳಿದ್ದಾರೆ.
ಅಷ್ಟು ಮಾತ್ರವಲ್ಲದೆ ಮುಂದಿನ ದಿನಗಳಲ್ಲಿ ನನ್ನ ಮನೆ ಹಾಗೂ ಆಪ್ತರ ನಿವಾಸಗಳ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಲು ತಯಾರಿ ನಡೆಸುತ್ತಿದ್ದಾರೆ ಎಂದು ಹೇಳಿಕೊಂಡಿದ್ದಾರೆ ಇದೆಲ್ಲವೂ ಬಿಜೆಪಿ ನಡೆಸುತ್ತಿರುವ ಪೂರ್ವ ನಿಯೋಜಿತ ಕಾರ್ಯತಂತ್ರ ಎಂದು ಹೇಳಿಕೊಂಡಿದ್ದಾರೆ.