Advertisement

4 ಲಕ್ಷ ನಕಲಿ ಫಲಾನುಭವಿಗಳ ಸವಲತ್ತು ವಾಪಸ್‌

12:47 PM Feb 21, 2021 | Team Udayavani |

ದೊಡ್ಡಬಳ್ಳಾಪುರ: ಕಂದಾಯ ಇಲಾಖೆಯಿಂದ ವಿವಿಧ ಮಾಸಾಶನಗಳಿಗೆ 7.5 ಸಾವಿರ ಕೋಟಿ ರೂ. ಖರ್ಚು ಮಾಡಲಾಗುತ್ತಿದೆ. ರಾಜ್ಯದಲ್ಲಿ 4 ಲಕ್ಷ ನಕಲಿ ಫಲಾನುಭವಿಗಳ ಸವಲತ್ತು ಹಿಂಪಡೆದುದರಿಂದ 504 ಕೋಟಿ ರೂ. ಉಳಿತಾಯವಾಗಿದೆ ಎಂದು ಬೆಂ.ಗ್ರಾ. ಜಿಲ್ಲಾ ಉಸ್ತುವಾರಿ ಸಚಿವ ಆರ್‌.ಅಶೋಕ್‌ ಹೇಳಿದರು.

Advertisement

ದೊಡ್ಡಬಳ್ಳಾಪುರ ತಾಲೂಕಿನ ಸಾಸಲು ಹೋಬಳಿ ಹೊಸಹಳ್ಳಿ ಗ್ರಾಮದಲ್ಲಿ ಕಂದಾಯ ಇಲಾಖೆಯಿಂದ ನಡೆದ “ಜಿಲ್ಲಾಧಿಕಾರಿ ನಡೆ-ಹಳ್ಳಿಗಳ ಕಡೆ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ವಿವಿಧ ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ಯೋಜನೆಯಡಿಯಲ್ಲಿ ಫಲಾನುಭವಿಗಳು ಪಿಂಚಣಿ ಮಂಜೂರಾತಿ, ಪೌತಿ ಖಾತೆ ಸವಲತ್ತು ಪಡೆಯಲು ಜನರು ಕಚೇರಿಗಳಿಗೆ ಅಲೆಯುವುದು ತಪ್ಪಬೇಕು. ಇನ್ನು ಮುಂದೆ ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್‌ ಗಳು ಗ್ರಾಮಗಳಲ್ಲಿ ವಾಸ್ತವ್ಯ ಮಾಡಲಿದ್ದು, ಜನರ ಅಹವಾಲು ಸ್ವೀಕರಿಸಿ ಪರಿಹಾರ ನೀಡಲಿದ್ದಾರೆ. ಕಂದಾಯ ಇಲಾಖೆಗೆ ಆಧಾರ್‌ ಕಾರ್ಡ್‌-ಬಿಪಿಎಲ್‌ ಕಾರ್ಡ್‌ಗೆ ಸಂಬಂಧಿಸಿದ ಹೊಸ ತಂತ್ರಾಂಶ ರೂಪಿಸಿದ್ದು, ಅಧಿಕಾರಿಗಳಿಗೆ ತರಬೇತಿ ನೀಡಲಾಗುತ್ತಿದೆ ಎಂದರು.

ಯೋಜನೆ ಹಣ ಖಾತೆಗೆ ನೇರ ಜಮಾ: ಆಧಾರ್‌ ಕಾರ್ಡ್‌ನಲ್ಲಿನ ವಯೋಮಿತಿ 60 ವರ್ಷದ ಆಧಾರದ ಮೇಲೆ ವೃದ್ಧಾಪ್ಯ ವೇತನದ ಮಂಜೂರಾತಿ ಆದೇಶ ಪತ್ರ ಅರ್ಹ ಫಲಾನುಭವಿಗಳ ಮನೆ ಬಾಗಿಲಿಗೆ ತಲುಪಿಸಲಾಗುವುದು. ಮಧ್ಯವರ್ತಿಗಳ ಹಾವಳಿ ತಪ್ಪಿಸಿ, ಎಲ್ಲ ಅರ್ಹ ಫಲಾನುಭವಿಗಳಿಗೂ ಯೋಜನೆಯ ಹಣ ಬ್ಯಾಂಕ್‌ ಖಾತೆಗೆ ನೇರವಾಗಿ ಜಮಾ ಆಗಲಿದೆ ಎಂದರು.

ಗ್ರಾಮದಲ್ಲಿ ಸಚಿವರ ಕಾರ್ಯಕ್ರಮಗಳು: ಕಾರ್ಯಕ್ರಮದ ಅಂಗವಾಗಿ,ಗ್ರಾಮದಲ್ಲಿನ ವೇದಿಕೆ ಬಳಿ ವಿವಿಧ ಇಲಾಖೆಗಳಿಂದ ವಸ್ತು ಪ್ರದರ್ಶನ ಮಳಿಗೆಗಳನ್ನು ಆಯೋಜಿಸಲಾಗಿತ್ತು. ಸಚಿವ ಅಶೋಕ್‌ ಅವರು ಭೇಟಿ ನೀಡಿ, ಸರ್ಕಾರದ ವಿವಿಧ ಯೋಜನೆಗಳ ಮಾಹಿತಿಯುಳ್ಳ ಫಲಕ, ಕರಪತ್ರ, ಬ್ಯಾನರ್‌ ಅವಲೋಕಿಸಿದರು. ಹೊಸಹಳ್ಳಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಹಿಂಭಾಗ ಗಿಡ ನೆಟ್ಟು, ನೀರುಣಿಸಿದರು. ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಶಾಸಕರೊಂದಿಗೆ ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ಸಮಾಜ ಕಲ್ಯಾಣ ಇಲಾಖೆ ವಿದ್ಯಾರ್ಥಿ ನಿಲಯದಲ್ಲಿ ಮಧ್ಯಾಹ್ನದ ಊಟ ಸವಿದರು.

ದೊಡ್ಡಬಳ್ಳಾಪುರ ಶಾಸಕ ಟಿ.ವೆಂಕಟರಮಣಯ್ಯ, ತಾಪಂ ಅಧ್ಯಕ್ಷ ನಾರಾಯಣ ಗೌಡ, ಜಿಲ್ಲಾ ಪಂಚಾಯಿತಿ ಸದಸ್ಯೆ ಜಯಮ್ಮ, ದೊಡ್ಡಬಳ್ಳಾಪುರ ತಾಲೂಕು ಯೋಜನಾ ಪ್ರಾಧಿಕಾರದ ಅಧ್ಯಕ್ಷ ದಿಬ್ಬೂರು ಜಯಣ್ಣ, ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತ ನವೀನ್‌ ರಾಜ್‌ ಸಿಂಗ್‌, ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್‌, ಅಪರ ಜಿಲ್ಲಾಧಿಕಾರಿ ಜಗದೀಶ್‌.ಕೆ.ನಾಯಕ್‌, ಜಿಪಂ ಸಿಇ ಒ ಎಂ.ಆರ್‌. ರವಿಕುಮಾರ್‌, ಜಿಲ್ಲಾ ಪೊಲೀಸ್‌ ಅಧೀಕ್ಷಕ ರವಿ.ಡಿ.ಚನ್ನಣ್ಣನವರ್‌, ಹೆಚ್ಚುವರಿ ಪೊಲೀಸ್‌ ಅಧೀಕ್ಷಕ ಲಕ್ಷ್ಮೀ ಗಣೇಶ್‌, ಉಪ ವಿಭಾಗಾಧಿಕಾರಿ ಅರುಳ್‌ ಕುಮಾರ್‌, ತಹಶೀಲ್ದಾರ್‌ ಟಿ.ಎಸ್‌. ಶಿವರಾಜ್ ಇದ್ದರು.

Advertisement

ಸ್ಮಶಾನವಿಲ್ಲದೇ ಹೆಣ  ಹೂಳಲು ತೊಂದರೆ :

ಹೊಸಹಳ್ಳಿ ಗ್ರಾಮದಲ್ಲಿ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಬೇಕು ಎಂದು ಮಹಿಳೆಯರು ಸಚಿ ವರ ಮುಂದೆ ತಮ್ಮಅಳಲು ತೋಡಿಕೊಂಡರು. ಕಾಲೋನಿಯ ನಿವಾಸಿಗಳು ಮಾತನಾಡಿ, ಸ್ಮಶಾನವಿಲ್ಲದೇ ಹೆಣ ಹೂಳಲು ತೊಂದರೆಯಾಗುತ್ತಿದೆ. ಸ್ಮಶಾನ ಒತ್ತುವರಿಯಾಗಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ದೂರಿದರು. ಗ್ರಾಮಕ್ಕೆ ನೆಮ್ಮದಿ ಕೇಂದ್ರ ಬೇಕು. ಮಾರಮ್ಮ ದೇವಾಲಯ ದುರಸ್ಥಿಯಾಗಬೇಕು. ವಿದ್ಯಾರ್ಥಿಗಳಿಗೆ ಕಾಲೇಜಿಗೆ ತೆರಳಲು ಬಸ್‌ ವ್ಯವಸ್ಥೆ ಇಲ್ಲದೇ ತೊಂದರೆಯಾಗಿದೆ. ಗ್ರಾಮದ ವಸತಿ ಹೀನರಿಗೆ ಮನೆಗಳನ್ನು ನಿರ್ಮಿಸಿಕೊಡಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದರು.

ಸ್ಮಶಾನ ಒತ್ತುವರಿ ತೆರವಿಗೆ ಗಡುವು :

ನಿವೇಶನ ರಹಿತರಿಗೆ ಆದ್ಯತೆ ಮೇರೆಗೆ ನಿವೇಶನ ನೀಡಲಾಗುವುದು ಹೊಸಹಳ್ಳಿ ಗ್ರಾಮದ ಸರ್ವೆ ನಂ.55ರಲ್ಲಿ 5 ಎಕರೆ ಭೂಮಿಯನ್ನು 20×30 ಅಳತೆಯಲ್ಲಿ 400 ಮಂದಿಗೆ ವಸತಿ ನಿರ್ಮಾಣಕ್ಕೆ ಮಂಜೂರು ಮಾಡಲು ಕಂದಾಯ ಇಲಾಖೆಯಿಂದ ಜಿಲ್ಲಾಧಿಕಾರಿಗಳಿಗೆ ಹಸ್ತಾಂತರ ಮಾಡಲಾಗಿದೆ. ಗ್ರಾಮದಲ್ಲಿನ ಅಕ್ರಮ ಮದ್ಯ ಮಾರಾಟ ಕಡಿವಾಣಕ್ಕೆ ಮಹಿಳೆಯರು ಮಾಡಿಕೊಂಡ ಮನವಿಗೆ ಉತ್ತರಿಸಿದ ಕಂದಾಯ ಸಚಿವರು, ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಲಾಗುವುದು. ಆದರೆ, ಸರ್ಕಾರದಿಂದ ಅನುಮತಿ ಪಡೆದು ತೆರೆಯಲಾಗಿರುವ ಬಾರ್‌ ಮುಚ್ಚಿಸುವುದು ಕಷ್ಟವಾಗಲಿದೆ. ವಿದ್ಯಾರ್ಥಿಗಳಿಗೆ ಹೆಚ್ಚುವರಿ ಬಸ್‌ಗಳ ವ್ಯವಸ್ಥೆ ಮಾಡಲಾಗುವುದು. ಸಭೆ ನಂತರ ಸ್ಮಶಾನ ಒತ್ತುವರಿಯನ್ನು ಖುದ್ದು ಪರಿಶೀಲಿಸಿದ ಸಚಿವರು ದಾಖಲೆಗಳನ್ನು ಪರಿಶೀಲಿಸಿ, ಇನ್ನು ಮೂರು ಗಂಟೆಗಳಲ್ಲಿ ಸಮಸ್ಯೆ ಇತ್ಯರ್ಥವಾಗಿ, ಒತ್ತುವರಿ ತೆರವು ಮಾಡಲು ಗಡುವು ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next