ಶಿಮ್ಲಾ: ಭಾರೀ ಹಿಮಪಾತದ ಪರಿಣಾಮ ಸುಮಾರು ನಾಲ್ಕು ಕಿಲೋ ಮೀಟರ್ ವರೆಗೆ ಟ್ರಾಫಿಕ್ ಜಾಮ್ ಆಗಿದ್ದು, ಪ್ರವಾಸಿಗರು ಮತ್ತು ಸ್ಥಳೀಯರು ಪರದಾಡಿದ ಘಟನೆ ಹಿಮಾಚಲ ಪ್ರದೇಶದ ಮನಾಲಿ-ಸೋಲಾಂಗ್ ಮಾರ್ಗದಲ್ಲಿ ನಡೆದಿದೆ ಎಂದು ವರದಿ ತಿಳಿಸಿದೆ.
ರಸ್ತೆಯ ಮೇಲೆಲ್ಲಾ ಹಿಮಗಡ್ಡೆ ದಟ್ಟವಾಗಿ ಬಿದ್ದ ಹಿನ್ನೆಲೆಯಲ್ಲಿ ಲಾಹೌಲ್-ಸ್ಪಿಟಿ ಜಿಲ್ಲೆಯ ಮನಾಲಿ-ಕೇಲಾಂಗ್ ಮಾರ್ಗದಲ್ಲಿ ಸೋಮವಾರ ವಾಹನ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಇದರಿಂದಾಗಿ ನಾಲ್ಕು ಕಿಲೋ ಮೀಟರ್ ವರೆಗೆ ಟ್ರಾಫಿಕ್ ಜಾಮ್ ಆಗಿತ್ತು ಎಂದು ವರದಿ ವಿವರಿಸಿದೆ.
ಮಂಗಳವಾರ ಬೆಳಗ್ಗೆ ಕೇಲಾಂಗ್-ಕುಲು ಮಾರ್ಗದಲ್ಲಿ ರಾಜ್ಯ ಸಾರಿಗೆ ಸಂಸ್ಥೆ ಬಸ್ ಸಂಚಾರವನ್ನು ಪುನರಾರಂಭಿಸಿದೆ. ಪರ್ವತ ಶ್ರೇಣಿಯ ರಮಣೀಯ ಪ್ರದೇಶವಾದ ಕುಲು-ಮನಾಲಿ ಕಣಿವೆ ಪ್ರವಾಸಿಗರ ನೆಚ್ಚಿನ ತಾಣವಾಗಿದೆ.
ಕಳೆದ ಎರಡು ವಾರಗಳ ಹಿಂದೆಯೇ ಮನಾಲಿಯಲ್ಲಿ ದಟ್ಟವಾಗಿ ಹಿಮಪಾತ ಆರಂಭವಾಗಿತ್ತು. ಅಲ್ಲದೇ ಕುಲು-ಮನಾಲಿಗೆ ಅಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ಗುಲಾಬಾ, ಸೋಲಾಂಗ್ ಮತ್ತು ಕೋಠಿ ಪ್ರದೇಶದಲ್ಲಿ ಹಿಮಪಾತ ಕಡಿಮೆಯಾಗಿದೆ. ಕಾಲ್ಪಾ, ಕಿನ್ನೌರ್ ಜಿಲ್ಲೆ ಮತ್ತು ಕೇಲಾಂಗ್, ಲಾಹೌಲ್, ಸ್ಪಿಟಿಯಲ್ಲಿ ದಟ್ಟ ಹಿಮ ಸುರಿಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉತ್ತರ ಭಾರತದಾದ್ಯಂತ ದಟ್ಟ ಶೀತಗಾಳಿ ಮುಂದುವರಿದಿದ್ದು, ಮನಾಲಿಯಲ್ಲಿ ದಾಖಲೆ ಎಂಬಂತೆ ಹವಾಮಾನ ಗರಿಷ್ಠ ಶೇ.10.8 ಡಿಗ್ರಿ ಸೆಲ್ಸಿಯಸ್ ಪ್ರಮಾಣದಲ್ಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.