Advertisement

ಮುಂಗಾರು ಮಳೆ ಅಬ್ಬರಕ್ಕೆ 4 ಬಲಿ

06:44 AM Jun 24, 2019 | Team Udayavani |

ಬೆಂಗಳೂರು/ಹುಬ್ಬಳ್ಳಿ: ರಾಜ್ಯದಲ್ಲಿ ನೈಋತ್ಯ ಮುಂಗಾರು ಚುರುಕುಗೊಂಡಿದ್ದು, ಭಾನುವಾರದ ಮಳೆಯ ಅನಾಹುತಕ್ಕೆ ಮೂವರು ಬಲಿಯಾಗಿದ್ದಾರೆ. ಉತ್ತರ ಕರ್ನಾಟಕ ಭಾಗದಲ್ಲಿ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದ್ದು, ಹುಬ್ಬಳ್ಳಿಯಲ್ಲಿ ನೀರಿನ ರಭಸಕ್ಕೆ ದ್ವಿಚಕ್ರ ವಾಹನಗಳು ಕೊಚ್ಚಿ ಹೋಗಿವೆ.

Advertisement

ಗದಗ ತಾಲೂಕಿನ ಲಿಂಗದಾಳ ಗ್ರಾಮದಲ್ಲಿ ಹೊಲದಲ್ಲಿ ಕೆಲಸ ಮುಗಿಸಿ ವಾಪಸ್‌ ಬರುತ್ತಿದ್ದ ದೇವಕ್ಕ ದೊಡ್ಡಣ್ಣವರ (55) ಎಂಬುವರು ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಜತೆಯಲ್ಲಿದ್ದ ಮೊಮ್ಮಗ ದೇವರಾಜ್‌(12) ಅದೃಷ್ಟವಶಾತ್‌ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾನೆ.

ಇನ್ನೊಂದೆಡೆ, ಬಸವಕಲ್ಯಾಣ ತಾಲೂಕಿನ ಯಲ್ಲದಗುಂಡಿ ಗ್ರಾಮ ವ್ಯಾಪ್ತಿಯಲ್ಲಿ ಹೊಲದಲ್ಲಿ ಕೆಲಸ ಮುಗಿಸಿಕೊಂಡು ಮರಳುವಾಗ ಹಳ್ಳದಲ್ಲಿ ತಾಯಿ-ಮಗ ಕೊಚ್ಚಿಕೊಂಡು ಹೋಗಿದ್ದಾರೆ. ಭಾಗ್ಯವಂತ ಪರಮೇಶ್‌ (13) ಎಂಬುವರ ಶವ ಪತ್ತೆಯಾಗಿದ್ದು, ಅನೀತಾ ಪರಮೇಶ್‌ (37) ನಾಪತ್ತೆಯಾಗಿದ್ದಾರೆ.

ಹಾರಕೂಡದಿಂದ ಯಲ್ಲದಗುಂಡಿಗೆ ಸೇರುವ ಹಳ್ಳದಲ್ಲಿ ಮೃತನ ಚಿಕ್ಕಮ್ಮ, ಅಣ್ಣ ಸೇರಿ ನಾಲ್ಕು ಜನ ದಾಟುವಾಗ ಈ ದುರ್ಘ‌ಟನೆ ಸಂಭವಿಸಿದೆ. ಅಣ್ಣ ಹಾಗೂ ಚಿಕ್ಕಮ್ಮ ಪಾರಾಗಿ ದಡ ಸೇರಿದ್ದಾರೆ. ಮಹಿಳೆಯ ಶವಕ್ಕಾಗಿ ಶೋಧ ಕಾರ್ಯ ಮುಂದುವರಿದಿದೆ.

ಹುಬ್ಬಳ್ಳಿ-ಧಾರವಾಡದಲ್ಲೂ ಭಾರೀ ಮಳೆಯಾಗಿದ್ದು, ಮಳೆಯ ನೀರಿನ ರಭಸಕ್ಕೆ ರಸ್ತೆ ಪಕ್ಕ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳು ಕೊಚ್ಚಿ ಹೋಗಿವೆ. ಮಂಟೂರು ರಸ್ತೆಯ ಅರಳಿಕಟ್ಟೆ ಓಣಿಯಲ್ಲಿ ಸುಮಾರು 150ಕ್ಕೂ ಹೆಚ್ಚು ಮನೆಗಳಿಗೆ ಮಳೆ ನೀರು ನುಗ್ಗಿ ತೊಂದರೆಯಾಗಿದ್ದರಿಂದ ಮಳೆಯಲ್ಲೇ ಅಲ್ಲಿನ ನಿವಾಸಿಗಳು ಪ್ರತಿಭಟನೆ ನಡೆಸಿದರು.

Advertisement

ಕುಷ್ಟಗಿ ತಾಲೂಕಿನ ಜುಮಲಾಪೂರ ಗ್ರಾಮದಲ್ಲಿ ಹಳ್ಳದಲ್ಲಿ ಆಕಳು ಕೊಚ್ಚಿ ಹೋಗಿದೆ. ಗದಗ ಜಿಲ್ಲೆ ಲಕ್ಷ್ಮೇಶ್ವರ, ಗೊಜನೂರು ಭಾಗದಲ್ಲಿ ಭಾರೀ ಮಳೆಯಾಗಿದ್ದು, ಗೊಜನೂರು ಹಳ್ಳ ತುಂಬಿ ಹರಿದಿದ್ದರಿಂದ ಗದಗ-ಲಕ್ಷ್ಮೇಶ್ವರ ಮಾರ್ಗದಲ್ಲಿ ಕೆಲಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು.

ಅಜ್ಜಿ-ಮೊಮ್ಮಗಳ ರಕ್ಷಣೆ: ಭಾರೀ ಮಳೆಯಿಂದಾಗಿ ಯಲಬುರ್ಗಾ ಪಟ್ಟಣ ಮತ್ತು ಸಂಗನಾಳ ಮಧ್ಯದ ಹಳ್ಳದ ದಡದಲ್ಲಿ ಸಿಲುಕಿದ್ದ ಅಜ್ಜಿ ಹಾಗೂ ಮೊಮ್ಮಗಳನ್ನು ರಕ್ಷಿಸಲಾಗಿದೆ. ಬೇವಿನ ಬೀಜ ಆಯ್ದುಕೊಳ್ಳಲು ಮಲ್ಲಮ್ಮ ಕಟ್ಟೆಪ್ಪನವರ ಹಾಗೂ ಮೊಮ್ಮಗಳು ಗಂಗಮ್ಮ ಹಳ್ಳ ದಾಟಿ ಹೋಗಿದ್ದರು. ಮರಳಿ ಬರುವಷ್ಟರಲ್ಲಿ ಮಳೆಯಾಗಿ ಹಳ್ಳ ತುಂಬಿ ಬಂದಿದೆ. ಆಗ ಅಜ್ಜಿ-ಬಾಲಕಿ ಇಬ್ಬರು ದಾರಿ ಕಾಣದೇ ಕೂಗಾಡಿದ್ದಾರೆ. ರಸ್ತೆಯಲ್ಲಿ ಸಂಚರಿಸುತ್ತಿದ್ದ ಪ್ರಯಾಣಿಕರು ಕೂಗು ಕೇಳಿಸಿಕೊಂಡು ಹಗ್ಗ ಮತ್ತು ಏಣಿ ಸಹಾಯದಿಂದ ರಕ್ಷಣೆ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next