Advertisement

4 ತಾಲೂಕುಗಳಲ್ಲಿ ಅಡಿಕೆ ಕೃಷಿಕರಿಗೆ ಕೊಳೆರೋಗದ ಆತಂಕ

10:35 PM Jul 14, 2019 | Sriram |

ಪುತ್ತೂರು: ಮಳೆಯ ವೈಪರೀತ್ಯದಿಂದಲೋ ಎಂಬಂತೆ ಈ ಬಾರಿಯೂ ಅಡಿಕೆ ತೋಟಗಳಲ್ಲಿ ಕೊಳೆರೋಗ ಆತಂಕ ಕಾಣಿಸಿಕೊಂಡಿದೆ. ಸಮಯಕ್ಕೆ ಸರಿಯಾಗಿ ಹಲವು ಬೆಳೆಗಾರರು ಅಡಿಕೆ ತೋಟಕ್ಕೆ ಔಷಧ ಸಿಂಪಡಣೆ ಮಾಡಿದ್ದರೂ ಕೊಳೆ ರೋಗದ ಲಕ್ಷಣ ಗೋಚರಿಸಿದೆ.

Advertisement

ಈ ಬಾರಿ ಅಡಿಕೆ ನಳ್ಳಿ ಬೆಳೆಯುವ ಸಂದರ್ಭದಲ್ಲಿ ಮಳೆ ಕಡಿಮೆ ಇತ್ತು. ಈ ಕಾರಣದಿಂದ ಬಹುತೇಕ ರೈತರಿಗೆ ಬೋಡೋì ದ್ರಾವಣ ಸಿಂಪಡಿಸಲು ಸಮರ್ಪಕ ಕಾಲಾವಕಾಶವೂ ಲಭಿಸಿದೆ. ಆದರೂ ಸುಳ್ಯ, ಬಂಟ್ವಾಳ, ಪುತ್ತೂರು ಸೇರಿದಂತೆ ನದಿ ಸಮೀಪವಿರುವ ಅಡಿಕೆ ತೋಟಗಳಲ್ಲೇ ಕೊಳೆರೋಗ ಲಕ್ಷಣ ಗೋಚರವಾಗಿದೆ.

ಹನಿ ನೀರಾವರಿ ಪೂರೈಸಿದ ಅಡಿಕೆ ತೋಟ ಹಾಗೂ ಬೇಸಗೆಯಲ್ಲಿ ನೀರಿಲ್ಲದೆ ಬರಡಾಗಿದ್ದ ಅಡಿಕೆ ತೋಟಗಳಿಗೆ ಈ ಬಾಧೆ ತುಸು ಕಡಿಮೆಯಿದೆ. ಆದರೆ ಹೆಚ್ಚಿನ ಪ್ರಮಾಣದಲ್ಲಿ ತೇವಾಂಶ ಉಳಿಸಿಕೊಂಡ ತೋಡು, ಹೊಳೆ ಬದಿಗಳಲ್ಲಿ ಇರುವ ಅಡಿಕೆ ಮರಗಳಿಗೆ ಕೊಳೆರೋಗ ಬಾಧೆ ಕಾಣಿಸಿಕೊಂಡಿದೆ.

ಮಳೆ ಹಾಗೂ ಬಿಸಿಲಿನ ಹೊಯ್ದಾಟವೂ ಇದಕ್ಕೆ ಕಾರಣ ಎನ್ನುವುದು ಬೆಳೆಗಾರರ ಅಭಿಪ್ರಾಯ.

ಕಳೆದ ವರ್ಷ ವಿಪರೀತವಿತ್ತು
ಕಳೆದ ವರ್ಷ ಜಿಲ್ಲೆಯಲ್ಲಿ ಅಡಿಕೆ ಕೊಳೆರೋಗದ ಬಾಧೆ ವಿಪರೀತವಾಗಿ ಕಾಣಿಸಿಕೊಂಡಿತ್ತು. ಕಂದಾಯ ಇಲಾಖೆ ನಡೆಸಿದ ಬೆಳೆ ಸರ್ವೆ ಆಧಾರದಂತೆ ಕಳೆದ ವರ್ಷ ಸುಳ್ಯದಲ್ಲಿ ಅತೀ ಹೆಚ್ಚು 8,762 ಎಕ್ರೆ, ಪುತ್ತೂರಿನ 6,021 ಎಕ್ರೆ ಪ್ರದೇಶ ಕೊಳೆರೋಗ ಬಾಧೆಗೊಳಗಾಗಿ ಶೇ. 60ರಷ್ಟು ಬೆಳೆ ನಾಶವಾಗಿತ್ತು. ಬಂಟ್ವಾಳದಲ್ಲಿ 3,674 ಹಾಗೂ ಬೆಳ್ತಂಗಡಿ 7,642 ಎಕ್ರೆ ಪ್ರದೇಶ ಕೊಳೆರೋಗ ಬಾಧೆಗೊಳಲಾಗಿ ಶೇ. 49ರಷ್ಟು ಬೆಳೆ ನಾಶವಾಗಿತ್ತು. ತೀವ್ರ ಮಳೆಯ ನಡುವೆಯೂ ಬೋಡೋì ದ್ರಾವಣವನ್ನು ಸಿಂಪಡಿಸಿದರೂ ಕೊಳೆ ರೋಗ ನಿಯಂತ್ರಣಕ್ಕೆ ತರಲು ಸಾಧ್ಯವಾಗಿರಲಿಲ್ಲ.

Advertisement

ಉತ್ತಮ ಇಳುವರಿಗೆ ಕೊಳೆರೋಗವೇ ಅಡ್ಡಿ
ಅವಿಭಜಿತ ದ.ಕ. ಜಿಲ್ಲೆಯಲ್ಲಿ ಒಟ್ಟು 51,101 ಹೆಕ್ಟೇರ್‌ ಪ್ರದೇಶದಲ್ಲಿ ಅಡಕೆ ಬೆಳೆಯಿದ್ದು, 66,324 ಮೆಟ್ರಿಕ್‌ ಟನ್‌ ವಾಡಿಕೆಯ ಅಡಿಕೆ ಇಳುವರಿಯಾಗುತ್ತದೆ. ಆದರೆ ಇತ್ತೀಚೆಗೆ ಶೇ. 25ರಿಂದ 30ರಷ್ಟು ಇಳುವರಿ ಕೊಳೆರೋಗಕ್ಕೆ ತುತ್ತಾಗುತ್ತಿದೆ. ಕಳೆದ ಬಾರಿಯಂತೂ ಶೇ. 45ಕ್ಕಿಂತ ಅಧಿಕ ಅಡಿಕೆ ಮರಗಳು ಕೊಳೆರೋಗಕ್ಕೆ ತುತ್ತಾಗಿವೆ. ಪರಿಣಾಮವಾಗಿ 59,033 ಮೆಟ್ರಿಕ್‌ ಟನ್‌ ಅಡಿಕೆ ಉತ್ಪಾದನೆಯಾಗಿದೆ.

ಬೋಡೋì ಸಿಂಪಡಿಸಿ
ಬೇಸಗೆಯಲ್ಲಿ ಹೆಚ್ಚಿನ ಪ್ರಮಾಣದ ನೀರುಣಿಸಿದ ತೋಟಗಳಲ್ಲಿ ಕೊಳೆರೋಗ ಬಾಧೆ ಕಂಡುಬಂದಿದೆ. ಮಳೆಗಾಲದಲ್ಲಿ ಸೂರ್ಯನ ಶಾಖ ಕಡಿಮೆ ಪ್ರಮಾಣದಲ್ಲಿದ್ದು, ತೇವಾಂಶ ಹೆಚ್ಚಾಗಿ ಕೊಳೆರೋಗ ಬಾಧೆ ಅಧಿಕವಾಗುತ್ತದೆ. ಮಳೆಗಾಲದಲ್ಲಿ ಎರಡು ಮೂರು ಬಾರಿ ಅಡಿಕೆ ತೋಟಗಳಿಗೆ ಬೋಡೋì ದ್ರಾವಣ ಸಿಂಪಡಿಸುವುದು ಅಗತ್ಯ..
– ಎಚ್‌.ಆರ್‌. ನಾಯಕ್‌ ತೋಟಗಾರಿಕಾ ಇಲಾಖೆ ಉಪನಿರ್ದೇಶಕರು

ಸತತ ಪ್ರಯತ್ನ
ಕಳೆದ ಬಾರಿ ಅಡಿಕೆ ತೋಟಕ್ಕೆ ಬಾಧಿಸಿದ ಕೊಳೆರೋಗದ ಹೊಡೆತವನ್ನೇ ತಾಳಿಕೊಳ್ಳಲು ಸಾಧ್ಯವಾಗಿಲ್ಲ. ಈ ಬಾರಿಯೂ ಸಣ್ಣ ಪ್ರಮಾಣದಲ್ಲಿ ಕೊಳೆರೋಗ ಕಾಣಿಸಿಕೊಂಡಿದೆ. ಔಷಧ ಸಿಂಪಡಣೆಯ ಮೂಲಕ ರೋಗಬಾಧೆ ನಿಯಂತ್ರಣಕ್ಕೆ ಸತತ ಪ್ರಯತ್ನ ಪಡುತ್ತಿದ್ದೇವೆ.
– ಗಣೇಶ್‌
ಅಡಿಕೆ ಕೃಷಿಕರು, ಈಶ್ವರಮಂಗಲ

-ರಾಜೇಶ್‌ ಪಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next