Advertisement

ಕುಂಭಮೇಳಕ್ಕೆ 4 ದಿನ ಬಾಕಿ, ಭರದ ಸಿದ್ಧತೆ

07:28 AM Feb 13, 2019 | Team Udayavani |

ತಿ.ನರಸೀಪುರ: ಕಾವೇರಿ, ಕಪಿಲ ಹಾಗೂ ಗುಪ್ತಗಾಮಿನಿಯಾಗಿ ಹರಿಯುವ ಸ್ಫಟಿಕ ಸರೋವರಗಳ ತ್ರಿವೇಣಿ ಸಂಗಮವಾದ ತಾಲೂಕಿನ ತಿರುಮಕೂಡಲು ಶ್ರೀಕ್ಷೇತ್ರದಲ್ಲಿ ಫೆ.17ರಿಂದ 3 ದಿನ ನಡೆಯುವ 11ನೇ ಮಹಾ ಕುಂಭಮೇಳಕ್ಕೆ ಭರದ ಸಿದ್ಧತೆ ನಡೆಯುತ್ತಿದ್ದು, ಇನ್ನು 4 ದಿನ ಮಾತ್ರ ಬಾಕಿ ಇದೆ.

Advertisement

ಉತ್ಸವದ ಅಂಗವಾಗಿ ನಡೆಯಲಿರುವ ಧಾರ್ಮಿಕ ಪೂಜಾ ಕಾರ್ಯಕ್ರಮಗಳಿಗೆ ನಿಗದಿತ ಸ್ಥಳದಲ್ಲಿ ಶಾಮಿಯಾನ ಅಳವಡಿಸಲು ಕಾಮಗಾರಿ ನಡೆಯುತ್ತಿದೆ. ಪುಣ್ಯ ಸ್ನಾನದ ನಂತರ ಬಟ್ಟೆ ಬದಲಿಸಲು ತಾತ್ಕಾಲಿಕ ಕೊಠಡಿಗಳನ್ನು ಅಳವಡಿಸಲಾಗುತ್ತಿದೆ.  ಮಠಾಧೀಶರು ಹಾಗೂ ಯತಿ ವರ್ಯರು ಸ್ನಾನ ಮಾಡುವ ನಿಗದಿತ ಸ್ಥಳದ ಸುತ್ತ  ಬ್ಯಾರಿಕೇಡ್‌ ಅಳವಡಿಸಲಾಗುತ್ತಿದೆ.  

ಸಂಗಮದ ಮಧ್ಯಭಾಗದಲ್ಲಿರುವ ನಡುಹೊಳೆ ಬಸವೇಶ್ವರ ಸ್ವಾಮಿ ದರ್ಶನ ಪಡೆಯಲು ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಅದರ ಸುತ್ತಮುತ್ತ ಬ್ಯಾರಿಕೇಡ್‌ ಅಳವಡಿಸಲಾಗುತ್ತಿದೆ. ನದಿಯ ಮೂಲಕ ಹಾದು ಹೋಗಲು ಮರಳಿನ ಮೂಟೆ ಅಳವಡಿಸಿ ತಾತ್ಕಾಲಿಕ ಸೇತುವೆ ನಿರ್ಮಿಸಲಾಗಿದೆ.

ಪೊಲೀಸ್‌ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಅಗತ್ಯವಿರುವ ಪೊಲೀಸರಿಗೆ ವಸತಿ ಸೌಲಭ್ಯ, ಧಾರ್ಮಿಕ ಸಭೆ ನಡೆಸುವ ಸ್ಥಳ ಮತ್ತಿತರ ಕಡೆಗಳಲ್ಲಿ ಅಳವಡಿಸಬೇಕಾದ ಶಾಮಿಯಾನದ ಬಗ್ಗೆ ಸಂಬಂಧಿಸಿದವರ ಜೊತೆ ಚರ್ಚಿಸಿದರು. ಭಕ್ತರಿಗೆ ಪಾರ್ಕಿಂಗ್‌ ವ್ಯವಸ್ಥೆ, ಸಂಚಾರ ವ್ಯವಸ್ಥೆಯ ಬಗ್ಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವ ಬಗ್ಗೆ ಸೂಚಿಸಿದರು.

ಶಾಶ್ವತ ಕಾಮಗಾರಿಗೆ ಆಗ್ರಹ: ಕುಂಭಮೇಳಕ್ಕೆ ಇನ್ನು ನಾಲ್ಕು ದಿನಗಳು ಮಾತ್ರ ಬಾಕಿ ಇದ್ದು, ಪ್ರಚಾರ ಸ್ಥಳೀಯವಾಗಿ ಮಾತ್ರವಲ್ಲದೇ ಹೊರ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಚಾರ ಸಿಗಬೇಕಿದೆ. ಆದರೆ, ಪ್ರತಿ ಬಾರಿ ಕುಂಭಮೇಳ ನಡೆದಾಗಲು ಶಾಶ್ವತ ಕಾಮಗಾರಿಗಳನ್ನು ನಡೆಸುವ ಭರವಸೆ ನಿಡಲಾಗುತ್ತದೆ. ಆದರೆ, ಶಾಶ್ವತ ಕಾಮಗಾರಿ ನಡೆಯುತ್ತಿಲ್ಲ. ಈ ಬಾರಿಯೂ ಕೂಡ ತರಾತುರಿಯಲ್ಲಿ ವ್ಯವಸ್ಥೆ ಮಾಡಲಾಗುತ್ತಿದೆ. ಹೆಚ್ಚಿನ ಪ್ರಚಾರದೊಂದಿಗೆ ಶಾಶ್ವತ ಕಾಮಗಾರಿಗಳನ್ನು ಮಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Advertisement

ಯಾಗಶಾಲೆ: ಈ ಬಾರಿ 11ನೇ ಕುಂಭಮೇಳಕ್ಕೆ ಭರದ ಸಿದ್ಧತೆ ನಡೆದಿದ್ದು, ಫೆ.17ರಂದು ಬೆಳಗ್ಗೆ 6ಗಂಟೆಗೆ ಮಾಘ ಶುದ್ಧ ತ್ರಯೋದಶೀ ಪುಷ್ಯ ನಕ್ಷತ್ರ ಶ್ರೀ ಅಗಸೆöàಶ್ವರ ಸನ್ನಿಧಿಯಲ್ಲಿ ಅನುಜ್ಞೆ, ಪುಣ್ಯಾಹ, ಕಲಶ ಸ್ಥಾಪನೆ, ಗಣಹೋಮ, ಅಭಿಷೇಕ, ದೇವತಾರಾಧನೆ, ರಾಷ್ಟ್ರಾಶೀರ್ವಾದ. ಸಂಜೆ 4ಕ್ಕೆ ಅಗ್ರತೀರ್ಥ ಸಂಗ್ರಹ ಸಮೇತ ಯಾಗಶಾಲಾ ಪ್ರವೇಶ, ಪುಣ್ಯಾಹ, ವಾಸ್ತುಹೋಮಗಳು ನಡೆಯಲಿವೆ.

18ರಂದು ಬೆಳಗ್ಗೆ 6ಕ್ಕೆ ಮಾಘಶುದ್ಧ ಚತುರ್ದಶೀ ಆಶ್ಲೇಷ ನಕ್ಷತ್ರ, ಪುಣ್ಯಾಹ, ನವಗ್ರಹಪೂಜೆ, ಜಪ, ನವಗ್ರಹ ಹೋಮ, ಪೂರ್ಣಾಹುತಿ. ಮಧ್ಯಾಹ್ನ 3.45ಕ್ಕೆ ಸುದರ್ಶನ ಪೂಜೆ, ಹೋಮ, ಪೂರ್ಣಾಹುತಿ ನಡೆಯಲಿದೆ. ಫೆ.19ರ ಮುಂಜಾನೆ 5.30ಕ್ಕೆ ಮಾಘಶುದ್ಧ ವ್ಯಾಸ ಪೂರ್ಣಿಮಾ, ಪುಷ್ಯನಕ್ಷತ್ರ, ಪುಣ್ಯಾಹ, ಸಪ್ತನದೀತೀರ್ಥ ಕಲಶ ಪೂಜೆ,

ಹೋಮ, ಕುಂಭಲಗ್ನದಲ್ಲಿ ಪೂರ್ಣಾಹುತಿ, ತ್ರಿವೇಣಿ ಸಂಗಮದಲ್ಲಿ ಕಲಶತೀರ್ಥ ಸಂಯೋಜನೆ ಮಾಡಲಾಗುವುದು. ಪ್ರಾತಃಕಾಲ 9.35ರಿಂದ 9.50ರ ಮೀನಲಗ್ನ, ಬೆಳಗ್ಗೆ 11.30ರಿಂದ 12ಗಂಟೆಯ ವೃಷಭ ಲಗ್ನ, ಅಭಿಜಿನ್‌ ಮುಹೂರ್ತ, ವಿಧಿ ಮುಹೂರ್ತ ಹಾಗೂ ವೇದ ಮುಹೂರ್ತಗಳಲ್ಲಿ ಮಹೋದಯ ಪುಣ್ಯಸ್ನಾನ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next