ಸೋಮವಾರದವರೆಗೆ ಸರಣಿ ರಜೆಯಂತಾಗಿದೆ. ಆಯುಧ ಪೂಜೆ, ವಿಜಯ ದಶಮಿ, ಭಾನುವಾರದ ರಜೆ ಹಾಗೂ ಗಾಂಧಿ ಜಯಂತಿ ಹಿನ್ನೆಲೆಯಲ್ಲಿ ಸತತ ನಾಲ್ಕು ದಿನ ರಜೆಯಿದೆ. ಹಾಗಾಗಿ, ಸರ್ಕಾರಿ ಕಚೇರಿಗಳು ಇನ್ನು ಮಂಗಳವಾರ ತೆರೆಯಲಿವೆ. ಆದರೆ, ಅಗತ್ಯ ಸೇವೆಗಳು ನಿರಂತರವಾಗಿ ಮುಂದುವರಿಯಲಿವೆ.
Advertisement
ಬಹುತೇಕ ರಾಷ್ಟ್ರೀಕೃತ ಬ್ಯಾಂಕ್, ಖಾಸಗಿ ಬ್ಯಾಂಕ್‌ಗಳಿಗೂ ಈ ಬಾರಿ ನಾಲ್ಕು ದಿನಗಳ ರಜೆ ಸಿಕ್ಕಂತಾಗಿದೆ. ಮಂಗಳವಾರದಿಂದ ಬ್ಯಾಂಕಿಂಗ್ ಸೇವೆಗಳು ಮತ್ತೆ ಆರಂಭವಾಗಲಿದ್ದು, ಅಲ್ಲಿಯವರೆಗೆ ಬ್ಯಾಂಕಿಂಗ್ ಸೇವೆಗಳು ಅಲಭ್ಯವಾಗಲಿವೆ.
ಜನರಲ್ಲಿ ಅನುಮಾನ ಮೂಡಲಾರಂಭಿಸಿದೆ. ಕಾರಣ, ಗುರುವಾರ ಬ್ಯಾಂಕ್‌ಗಳು ತಮ್ಮ ಎಟಿಎಂ ಕೇಂದ್ರಗಳಿಗೆ
ಹಣ ಭರ್ತಿ ಮಾಡಿದರೆ ನಂತರ ಹಣ ಭರ್ತಿ ಮಾಡುವುದು ಮಂಗಳವಾರ. ಹಾಗಾಗಿ, ಒಂದೆರಡು ದಿನಗಳಲ್ಲೇ
ಎಟಿಎಂಗಳಲ್ಲಿ ಹಣ ಖಾಲಿಯಾದರೆ ಎಂಬ ಆತಂಕದಿಂದ ಗುರುವಾರವೇ ಸಾಕಷ್ಟು ಮಂದಿ ಎಟಿಎಂ ಕೇಂದ್ರಗಳ ಮುಂದೆ ಸಾಲುಗಟ್ಟಿ ನಿಂತಿದ್ದ ದೃಶ್ಯ ಕಂಡು ಬಂತು.ಕೊರತೆ ಸಾಧ್ಯತೆ ಕಡಿಮೆ: ನಾಲ್ಕುದಿನಗಳ ಸರಣಿ ರಜೆ ಹಿನ್ನೆಲೆಯಲ್ಲಿ ಎಲ್ಲ ಬ್ಯಾಂಕ್‌ಗಳೂ ತಮ್ಮ ಎಟಿಎಂ ಕೇಂದ್ರಗಳಿಗೆ ಅಗತ್ಯ ಪ್ರಮಾಣದಲ್ಲಿ ಹಣ ಭರ್ತಿ ಮಾಡುವಂತೆ ಸೂಚನೆ ನೀಡಿವೆ. ಪ್ರತಿ ಎಟಿಎಂ ಕೇಂದ್ರಕ್ಕೆ ಗರಿಷ್ಠ 25 ಲಕ್ಷ ರೂ.ವರೆಗೆ ಹಣ ಭರ್ತಿ ಮಾಡಬಹುದು. ಸಾಮಾನ್ಯವಾಗಿ 12ರಿಂದ 13 ಲಕ್ಷ ರೂ.ಭರ್ತಿ ಮಾಡಲಾಗುತ್ತದೆ. ಸರಣಿ ರಜೆಯಿಂದಾಗಿ ಗರಿಷ್ಠ ಪ್ರಮಾಣದಲ್ಲಿ ಹಣ ಭರ್ತಿ ಮಾಡಲು ಎಲ್ಲ ಬ್ಯಾಂಕ್‌ಗಳು ಆದ್ಯತೆ ನೀಡಿದ್ದು, ಕೊರತೆಯಾಗುವ ಸಾಧ್ಯತೆ ಕಡಿಮೆ ಎಂದು ರಾಜ್ಯಮಟ್ಟದ ಬ್ಯಾಂಕರ್ ಸಮಿತಿಯ
ಅಧಿಕಾರಿಯೊಬ್ಬರು ತಿಳಿಸಿದ್ದಾರೆ.