Advertisement

ತಿಂಗಳಲ್ಲಿ ಬಿಡಿಎಗೆ 4 ಕೋಟಿ ಆನ್‌ಲೈನ್‌ ತೆರಿಗೆ ಸಂಗ್ರಹ

01:00 AM Jun 16, 2019 | Lakshmi GovindaRaj |

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ)ಕ್ಕೆ ಆನ್‌ಲೈನ್‌ನಲ್ಲಿ ಆಸ್ತಿ ತೆರಿಗೆ ಪಾವತಿ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಒಂದು ತಿಂಗಳಲ್ಲಿ ಸುಮಾರು 4 ಕೋಟಿ ರೂ. ಆಸ್ತಿ ತೆರಿಗೆ ಸಂದಾಯವಾಗಿದೆ.

Advertisement

ಆಸ್ತಿ ತೆರಿಗೆ ಪರಿಷ್ಕರಣೆ ಸೇರಿದಂತೆ ಹಲವು ಕಾರಣಗಳಿಂದಾಗಿ ಬಿಡಿಎನ ತಾಂತ್ರಿಕ ವಿಭಾಗದ ಅಧಿಕಾರಿಗಳು ಈ ಹಿಂದೆ (ಕಳೆದ ಮಾರ್ಚ್‌) ಆನ್‌ಲೈನ್‌ ಮೂಲಕ ಸಾರ್ವಜನಿಕರು ಆಸ್ತಿ ತೆರಿಗೆ ಪಾವತಿ ಮಾಡುವ ವ್ಯವಸ್ಥೆಯನ್ನು ಸ್ತಗಿತಗೊಳಿಸಲಾಗಿತ್ತು.

ಈ ಹಿನ್ನೆಲೆಯಲ್ಲಿ ಆನ್‌ಲೈನ್‌ ಮೂಲಕ ಆಸ್ತಿ ತೆರಿಗೆ ಪಾವತಿ ಮಾಡುವವರು ಸಾಕಷ್ಟು ತೊಂದರೆ ಅನುಭವಿಸುವಂತಾಗಿತ್ತು. ಕೆಲವು ಸಣ್ಣಪುಟ್ಟ ಬದಲಾವಣೆಯೊಂದಿಗೆ ಕಳೆದ ತಿಂಗಳಿಂದ ಪ್ರಾಧಿಕಾರದ ಆನ್‌ಲೈನ್‌ನ ಆಸ್ತಿ ತೆರಿಗೆ ವಿಭಾಗ ಮತ್ತೆ ಕಾರ್ಯಾರಂಭ ಮಾಡಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ತೆರಿಗೆ ಸಂದಾಯ ಮಾಡುತ್ತಿದ್ದಾರೆ.

ಬಳಕೆದಾರರ ಸ್ನೇಹಿ: ಆನ್‌ಲೈನ್‌ ವ್ಯವಸ್ಥೆ ಬಳಕೆದಾರ ಸ್ನೇಹಿಯಾಗಿದೆ. ಮಾರ್ಚ್‌ ನಂತರ ಕೆಲವು ಬದಲಾವಣೆಯೊಂದಿಗೆ ಬಿಡಿಎ ವೈಬ್‌ಸೈಟ್‌ (ಮೇ 14) ಕಾರ್ಯ ಪ್ರವೃತ್ತವಾಯಿತು.

ಇದು ಕಾರ್ಯ ಆರಂಭಿಸಿದ ಒಂದು ಗಂಟೆಯಲ್ಲಿ ಸುಮಾರು 1.30 ಲಕ್ಷ ರೂ.ಆಸ್ತಿ ತೆರಿಗೆ ಪಾವತಿಯಾಗಿತ್ತು ಎಂದು ಬಿಡಿಎನ ಐಟಿ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ಒಂದು ತಿಂಗಳಲ್ಲಿ ನಾಲ್ಕು ಕೋಟಿ ರೂ. ಬಿಡಿಎಗೆ ತೆರಿಗೆ ರೂಪದಲ್ಲಿ ಸಂಗ್ರಹವಾಗಿದೆ ಎಂದು ಅವರು ತಿಳಿಸಿದ್ದಾರೆ.

Advertisement

ಮೊಬೈಲ್‌ ಮೂಲಕ ಸಂದೇಶ ರವಾನೆ: ತೆರಿಗೆ ಪಾವತಿ ಮಾಡಿದ ಕೆಲವೇ ಕ್ಷಣಗಳಲ್ಲಿ ಆಸ್ತಿ ಪಾವತಿದಾರರ ಮೊಬೈಲ್‌ಗೆ ಪಾವತಿ ಕುರಿತ ಸಂದೇಶ ಜತಗೆ ಇ-ಮೇಲ್‌ ಸಂದೇಶ ಕೂಡ ರವಾನೆಯಾಗುತ್ತದೆ.

ಆನ್‌ಲೈನ್‌ ಪಾವತಿ ಪ್ರಾರಂಭವಾದಾಗ ಮೊಬೈಲ್‌ನಲ್ಲಿ ಆಸ್ತಿ ತೆರಿಗೆ ಪಾವತಿಯಾದ ಸಂದೇಶ ರವಾನೆಯಾಗುತ್ತಿಲ್ಲ ಎಂಬ ಕೆಲವು ದೂರುಗಳು ಬಂದಿದ್ದವು. ಈಗ ಆ ರೀತಿಯ ಸಮಸ್ಯೆಗಳು ಇಲ್ಲ ಎಂದು ಐಟಿ ವಿಭಾಗದ ಹಿರಿಯ ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದ್ದಾರೆ.

ಆನ್‌ಲೈನ್‌ನಲ್ಲೇ ಪಾವತಿ ಮಾಹಿತಿ: ಸಾರ್ವಜನಿಕರು ತಾವು ಆಸ್ತಿ ತೆರಿಗೆ ಪಾವತಿ ಮಾಡಿರುವ ಬಗ್ಗೆ ಬಿಡಿಎನ ವೆಬ್‌ಸೈಟ್‌ನಲ್ಲಿ ಮಾಹಿತಿಯನ್ನು ಪಡೆಯಬಹುದಾಗಿದೆ. ಜೊತೆಗೆ ಆಸ್ತಿ ಕೊಳ್ಳುವವರು ಕೂಡ ತಾವು ಕೊಳ್ಳುತ್ತಿರುವ ಆಸ್ತಿ ಎಷ್ಟು ಮಾಲೀಕರಿಂದ ವರ್ಗಾವಣೆಯಾಗಿದೆ ಅಥವಾ ಇಲ್ಲವೇ ಎಂಬುವುದನ್ನು ಇಲ್ಲಿ ಪರಿಶೀಲಿಸಬಹುದಾಗಿದೆ.

ಕಳೆದ ಬಾರಿ ಆಸ್ತಿ ತೆರಿಗೆ ಪಾವತಿ ಮಾಡುವಾಗ ಸಾರ್ವಜನಿಕರು ಹಲವು ರೀತಿಯ ಮಾಹಿತಿಗಳನ್ನು ಅಪ್‌ಡೇಟ್‌ ಮಾಡಬೇಕಾಗಿತ್ತು. ಹೀಗಾಗಿ ಕಿರಿಕಿರಿ ಅನುಭವಿಸಬೇಕಾಗಿತ್ತು. ಆದರೆ ಅದನ್ನು ಈಗ ಮತ್ತಷ್ಟು ಸರಳೀಕರಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಶೇ. 10 ಆನ್‌ಲೈನ್‌ ಪಾವತಿ: ಜಾಲತಾಣದಲ್ಲಿ ಪಾವತಿ ಆರಂಭವಾದ ಬಳಿಕ ಇಲ್ಲಿವರೆಗೂ ಸುಮಾರು 9,311 ಮಂದಿ ಬಿಡಿಎ ಆನ್‌ಲೈನ್‌ ಬಳಕೆ ಮಾಡಿಕೊಂಡು ಆಸ್ತಿ ತೆರಿಗೆ ಪಾವತಿ ಮಾಡಿದ್ದಾರೆ.

ಈ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಬಿಡಿಎನ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಈಗಾಗಲೇ ಶೇ.10 ಮಂದಿ ಆನ್‌ಲೈನ್‌ನಲ್ಲಿ ತೆರಿಗೆ ಪಾವತಿ ಮಾಡಿದ್ದಾರೆ. ಆನ್‌ಲೈನ್‌ನಲ್ಲಿ ತೆರಿಗೆ ಪಾವತಿ ಮಾಡುವ ಪ್ರಕ್ರಿಯೆ ಸುಲಭವಾಗಿರುವುದರಿಂದ ಸಾರ್ವಜನಿಕರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ ಎಂದು ತಿಳಿಸಿದ್ದಾರೆ.

ಬಿಡಿಎನ ಆನ್‌ಲೈನ್‌ ವ್ಯವಸ್ಥೆ ಬಳಕೆ ಮಾಡಿಕೊಂಡು ಹಲವರು ಆಸ್ತಿ ತೆರಿಗೆ ಪಾವತಿ ಮಾಡುತ್ತಿದ್ದಾರೆ. ಈ ವ್ಯವಸ್ಥೆ ಕೂಡ ಬಳಕೆದಾರರ ಸ್ನೇಹಿಯಾಗಿದೆ.
-ರಾಕೇಶ್‌ ಸಿಂಗ್‌, ಬಿಡಿಎ ಆಯುಕ್ತ

* ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next