Advertisement
ರೈತರು ಹಾಪ್‌ಕಾಮ್ಸ್‌ಗೆ ತರಕಾರಿ, ಹಣ್ಣು ಸರಬರಾಜು ಮಾಡಿದ 24 ಗಂಟೆಗಳಲ್ಲಿ ಆರ್‌ಟಿಜಿಎಸ್ ಮೂಲಕ ಅವರ ಖಾತೆಗೆ ನೇರವಾಗಿ ಹಣ ಪಾವತಿಸಬೇಕು ಎಂಬ ನಿಯಮವಿದೆ. ಕೆಲವೊಮ್ಮೆ ಇದರಲ್ಲಿ ಮೂರ್‍ನಾಲ್ಕು ದಿನ ತಡವೂ ಆಗಿದೆ. ಆದರೆ, ಸುಮಾರು 1.20 ಕೋಟಿ ರೂ.ಗಳಿಗೂ ಅಧಿಕವಾಗಿ ಬಾಕಿ ಉಳಿಸಿಕೊಂಡಿದ್ದು, ಬರದ ಪರಿಸ್ಥಿತಿಯಲ್ಲಿ ರೈತರಿಗೆ ಬರೆ ಎಳೆದಂತಾಗಿದೆ.
Related Articles
Advertisement
ಸೆ.23ಕ್ಕೆ ಸಭೆ: ಹಾಪ್‌ಕಾಮ್ಸ್ ಸಂಸ್ಥೆ ತನ್ನ ವಹಿವಾಟಿನಿಂದ ಬಂದ ಹಣದಲ್ಲಿ ಶೇ.75ರಷ್ಟನ್ನು ರೈತರಿಗೆ ಹಾಗೂ 25ರಷ್ಟು ಆಡಳಿತ ನಿರ್ವಹಣೆಗೆ ಬಳಸಿಕೊಳ್ಳಬೇಕು ಎಂಬ ನಿಯಮವಿದೆ. ಹೀಗಿದ್ದರೂ ಸಂಸ್ಥೆಗೆ 4 ಕೋಟಿ ರೂ.ಗಳಿಗೂ ಅಧಿಕ ನಷ್ಟದಲ್ಲಿದೆ. ಸೆ.23ಕ್ಕೆ ಹಾಪ್‌ಕಾಮ್ಸ್ ಸರ್ವಸದಸ್ಯರ ಸಭೆ ನಡೆಯಲಿದ್ದು, ಸಂಸ್ಥೆಯ ಬಾಕಿ, ಲಾಭ, ನಷ್ಟ ಸೇರಿದಂತೆ ವಿವಿಧ ವಿಚಾರಗಳ ಬಗ್ಗೆ ಚರ್ಚೆಗಳು ನಡೆಯಲಿವೆ. ಮುಖ್ಯವಾಗಿ ರೈತರಿಗೆ ಕೊಡಬೇಕಾದ ಬಾಕಿ ಮೊತ್ತದ ಕುರಿತು ಪ್ರಮುಖ ಚರ್ಚೆ ನಡೆಯುವ ಸಾಧ್ಯತೆ ಇದ್ದು, ಸಂಸ್ಥೆ ವಹಿವಾಟಿನ ಲೆಕ್ಕಾಚಾರಗಳು ಬಿಸಿಬಿಸಿ ಚರ್ಚೆಗೆ ಕಾರಣವಾಗಲಿದೆ ಎನ್ನಲಾಗಿದೆ.
ಹೊಣೆ ಹೊರಲು ಯಾರೂ ತಯಾರಿಲ್ಲ?: ಸಂಸ್ಥೆಯ ವಹಿವಾಟು ಹಿಂದೆಂದೂ ಕಾಣದಷ್ಟು ಕುಸಿತಕಂಡಿದ್ದು, ಇಲಾಖೆ ಜವಾಬ್ದಾರಿ ತೆಗೆದುಕೊಳ್ಳಲು ಅಧಿಕಾರಿಗಳು ತಯಾರಿಲ್ಲ. ಒಂದೆರಡು ತಿಂಗಳ ಹಿಂದಷ್ಟೇ ಹಾಪ್‌ಕಾಮ್ಸ್ ವ್ಯವಸ್ಥಾಪಕ ನಿರ್ದೇಶಕ ಬೆಳ್ಳೂರು ಕೃಷ್ಣ ತೋಟಗಾರಿಕೆ ಇಲಾಖೆಯ ಹನಿನೀರಾವರಿ ವಿಭಾಗಕ್ಕೆ ವರ್ಗಾವಣೆಗೊಂಡು ಹೋಗಿದ್ದಾರೆ. ಅವರಿಂದ ತೆರವಾದ ಸ್ಥಾನಕ್ಕೆ ಶಿವಮೊಗ್ಗ ತೋಟಗಾರಿಕೆ ಇಲಾಖೆಯಿಂದ ಬಿ.ವಿಶ್ವನಾಥ್ ಎಂಬುವರು ವರ್ಗಾವಣೆಗೊಂಡು ಅಧಿಕಾರ ವಹಿಸಿಕೊಂಡಿದ್ದರು.
ಹಾಪ್‌ಕಾಮ್ಸ್‌ನ ವಹಿವಾಟಿನ ಲೆಕ್ಕಾಚಾರ ತಿಳಿದುಕೊಂಡ ಅವರು, ಸುಮಾರು ನಾಲ್ಕು ಕೋಟಿಗಳಿಗೂ ಅಧಿಕ ನಷ್ಟ ಕಂಡೊಡನೆ, ವೈಯಕ್ತಿಕ ಕಾರಣ ನೀಡಿ ಬೇರೆಡೆಗೆ ವರ್ಗಾವಣೆ ಮಾಡಿಸಿಕೊಂಡಿದ್ದಾರೆ ಎಂದು ತೋಟಗಾರಿಕೆ ಇಲಾಖೆ ಮೂಲಗಳು ತಿಳಿಸಿವೆ. ಇದೀಗ ಸೆ.23ರಂದು ಹಾಪ್‌ಕಾಮ್ಸ್ ಸರ್ವ ಸದಸ್ಯರ ಸಭೆ ನಡೆದ ಬಳಿಕ ವಿಶ್ವನಾಥ್ ಅವರಿಂದ ತೆರವಾದ ಸ್ಥಾನಕ್ಕೆ ಯಾವ ಅಧಿಕಾರಿ ಬರುತ್ತಾರೋ ಕಾದು ನೋಡಬೇಕಿದೆ.
ಬೇಕಾಬಿಟ್ಟಿ ವ್ಯವಹಾರ: ಸಂಸ್ಥೆಯಲ್ಲಿ ಶಿಸ್ತುಬದ್ಧ ಲೆಕ್ಕಾಚಾರ, ವಹಿವಾಟು ನಡೆದಿಲ್ಲ. ಬೇಕಾಬಿಟ್ಟಿ ವ್ಯವಹಾರವೇ ಇಂದಿನ ಪರಿಸ್ಥಿತಿಗೆ ಕಾರಣ. 2015-16ನೇ ಸಾಲಿನ ಆಡಿಟ್ ವರದಿ ಬಂದಿದ್ದು, ಅದಕ್ಕಾಗಿ ಸುಮಾರು 415 ದಿನಗಳನ್ನು ತೆಗೆದುಕೊಳ್ಳಲಾಗಿವೆ. ಇದೇ ಮೊದಲ ಬಾರಿಗೆ ಹಾಪ್‌ಕಾಮ್ಸ್ ವ್ಯವಹಾರಕ್ಕೆ “ಸಿ’ ವರ್ಗೀಕರಣ ಸಿಕ್ಕಿದೆ. ಇನ್ನೂ 2016-17ನೇ ಸಾಲಿನ ಲೆಕ್ಕಪರಿಶೋಧನೆ ನಡೆದಿಲ್ಲ. ಇದು ಆಡಳಿತ ವೈಫಲ್ಯವಲ್ಲದೆ ಮತ್ತೇನು ಎನ್ನುತ್ತಾರೆ ಹೆಸರೇಳಿಕೊಳ್ಳದ ಸಂಸ್ಥೆ ಅಧಿಕಾರಿಯೊಬ್ಬರು.
ಸಂಸ್ಥೆಯನ್ನು ನಡೆಸಲಾಗದ ಸ್ಥಿತಿ ನಿರ್ಮಾಣವಾಗಿಲ್ಲ. ಕೈಗಾರಿಕಾ ಸಹಕಾರ ಬ್ಯಾಂಕ್‌ನಲ್ಲಿ ಇರಿಸಿದ್ದ 3 ಕೋಟಿ ರೂ. ಎಫ್ಡಿ ದಿವಾಳಿಯಾಗಿದ್ದು, ವಹಿವಾಟು ನಡೆಸಲು ದುಡ್ಡಿಲ್ಲದಂತಾಗಿದೆ. ಜತೆಗೆ ಸಮಾಜಕಲ್ಯಾಣ ಇಲಾಖೆ ಹಾಸ್ಟೆಲ್, ಸರ್ಕಾರಿ ಆಸ್ಪತ್ರೆಗಳಿಗೆ ಸರಬರಾಜಾದ ತರಕಾರಿ ಹಣ ಬಿಲ್ ಆಗಲು ಮೂರ್‍ನಾಲ್ಕು ತಿಂಗಳು ಬೇಕಾಗುತ್ತದೆ. ರೈತರ ಯಾವುದೇ ಬಿಲ್ ಬಾಕಿ ಉಳಿಸಿಕೊಂಡಿಲ್ಲ.-ಚಂದ್ರೇಗೌಡ, ಅಧ್ಯಕ್ಷರು, ಹಾಪ್‌ಕಾಮ್ಸ್ * ಸಂಪತ್ ತರೀಕೆರೆ