ಬೆಂಗಳೂರು: ಕೆಲ ಸಚಿವರು ತಮ್ಮ ಅಧಿಕೃತ ಕಚೇರಿಗಳನ್ನು ಲೋಕಸಭಾ ಚುನಾವಣೆಗಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತಮ್ಮ ಅಧಿಕೃತ ಫೇಸ್‌ಬುಕ್ ಪೇಜ್‌ನಲ್ಲಿ ಸರ್ಕಾರ ಹಾಗೂ ಕಾಂಗ್ರೆಸ್ ಚಿಹ್ನೆ ಬಳಸಿ ಬೆಂಗಳೂರು ಗ್ರಾಮಾಂತರ ಅಭ್ಯರ್ಥಿ ಡಿ.ಕೆ. ಸುರೇಶ್ ಪ್ರಚಾರ ನಡೆಸುತ್ತಿದ್ದಾರೆ ಎಂದು ರಾಜ್ಯ ಬಿಜೆಪಿ ಆರೋಪಿಸಿದೆ. ಈ ಸಂಬಂಧ ಚುನಾವಣಾ ಆಯೋಗಕ್ಕೆ ನಾಲ್ಕು ದೂರು ನೀಡಿದೆ.
ಒಂದೆಡೆ ಕಾಂಗ್ರೆಸ್‌ನಿಂದ ನೀತಿ ಸಂಹಿತೆ ಉಲ್ಲಂಘನೆಗಳಾಗುತ್ತಿದ್ದರೆ, ಇನ್ನೊಂದೆಡೆ ಸರ್ಕಾರಿ ಕಚೇರಿಗಳ ದುರ್ಬಳಕೆ ಆಗುತ್ತಿದೆ ಎಂದು ಆಪಾದಿಸಿದೆ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಸಾಕಷ್ಟು ಅಕ್ರಮಗಳು ನಡೆಯುತ್ತಿದ್ದು, ಸೂಕ್ಷ್ಮ ಕ್ಷೇತ್ರವಾಗಿರುವುದರಿಂದ ಅರೆಸೇನಾ ಪಡೆ ನಿಯೋಜಿಸಲೂ ಆಯೋಗಕ್ಕೆ ಮನವಿ ಮಾಡುವುದಾಗಿ ಬಿಜೆಪಿ ತಿಳಿಸಿದೆ.
ಇದಲ್ಲದೆ, ಉತ್ತರ ಕನ್ನಡ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ ಪತಿಯೂ ಆಗಿರುವ ವಾರ್ತಾ ಇಲಾಖೆ ಆಯುಕ್ತ ಹೇಮಂತ್ ನಿಂಬಾಳ್ಕರ್, ಪತ್ನಿ ಪರ ಮತಯಾಚನೆಗೆ ಹುದ್ದೆಯನ್ನು ಬಳಸಿಕೊಳ್ಳುತ್ತಿದ್ದು ಅವರನ್ನು ಬೇರೆ ರಾಜ್ಯಕ್ಕೆ ವರ್ಗಾವಣೆ ಮಾಡಬೇಕು ಎಂದು ಮತ್ತೂಂದು ದೂರು ನೀಡಿದೆ.
ಜತೆಗೆ ಬಿಜೆಪಿ ಚುನಾವಣಾ ಬೋನಸ್ ಎಂಬ ಲಿಂಕ್‌ನ್ನು ವಾಟ್ಸ್‌ಆಪ್ ಮೂಲಕ ರವಾನಿಸಿ, ಅದರಲ್ಲಿ ಬಿಜೆಪಿ ಚಿಹ್ನೆ, ಪ್ರಧಾನಿ ಮೋದಿ ಅವರ ಭಾವಚಿತ್ರ ಬಳಸಿರುವುದೂ ಅಲ್ಲದೆ, ಹಣ ಇತ್ಯಾದಿ ಉಡುಗೊರೆ ಕೊಡುವುದಾಗಿ ಆಮಿಷವೊಡ್ಡಲಾಗುತ್ತಿದೆ. ಇದು ಬಿಜೆಪಿಯ ಅಧಿಕೃತ ವೆಬ್‌ಸೈಟ್ ಅಲ್ಲ. ಇದರ ವಿರುದ್ಧವೂ ಕ್ರಮ ಜರುಗಿಸಬೇಕುಎಂದು ಪ್ರತ್ಯೇಕ ದೂರು ಸಲ್ಲಿಸಿದೆ.
ಮೇಲ್ಮನೆ ಸದಸ್ಯ ಛಲವಾದಿ ನಾರಾಯಣಸ್ವಾಮಿ, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ರೆಡ್ಡಿ, ರಾಜ್ಯ ವಕ್ತಾರರಾದ ಎಚ್.ಎನ್. ಚಂದ್ರಶೇಖರ್, ಎಚ್. ವೆಂಕಟೇಶ್ ದೊಡ್ಡೇರಿ, ಕಾನೂನು ಪ್ರಕೋಷ್ಠದ ರಾಜ್ಯ ಸಂಚಾಲಕ ವಸಂತ್ ಕುಮಾರ್ ಇದ್ದರು.
1.ಡಿಸಿಎಂ ಫೇಸ್‌ಬುಕ್ ಖಾತೆಯಲ್ಲಿ ಡಿ.ಕೆ. ಸುರೇಶ್ ಪರ ಪ್ರಚಾರ
2.ಕೆಲ ಸಚಿವರಿಂದ ಲೋಕಸಭಾ ಚುನಾವಣಾ ಕೆಲಸಕ್ಕೆ ಅಧಿಕೃತ ಕಚೇರಿ ದುರ್ಬಳಕೆ
3.ಬಿಜೆಪಿ ಪೋಲ್ ಸರ್ವೇ ಹೆಸರಿನ ವೆಬ್‌ಸೈಟ್ ವಿರುದ್ಧ ಕ್ರಮಕ್ಕೆ ಆಗ್ರಹ
4.ಹೇಮಂತ್ ನಿಂಬಾಳ್ಕರ್ ಬೇರೆ ರಾಜ್ಯಕ್ಕೆ ವರ್ಗಾವಣೆ ಮಾಡಲು ಒತ್ತಾಯ