ಇಂಫಾಲ: ಮಣಿಪುರದಲ್ಲಿ ಇಬ್ಬರು ಮಹಿಳೆಯರನ್ನು ವಿವಸ್ತ್ರವಾಗಿ ಮೆರವಣಿಗೆ ಮಾಡಿದ ಭೀಕರ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ಒಟ್ಟು ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.
ಘಟನೆ ಕುರಿತು ರಾಷ್ಟ್ರವ್ಯಾಪಿ ವ್ಯಾಪಕ ಆಕ್ರೋಶದ ನಡುವೆ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ನಾಲ್ವರನ್ನು ಬಂಧಿಸಿರುವ ಕುರಿತು ಹೇಳಿದ್ದಾರೆ.
ಆರೋಪಿಗಳಲ್ಲಿ ಒಬ್ಬನನ್ನು ಬೆಳಗ್ಗೆ ಬಂಧಿಸಲಾಗಿತ್ತು. ವಿಡಿಯೋ ವೈರಲ್ ಬೆನ್ನಲ್ಲೇ 32 ವರ್ಷದ ಹುಯಿರೆಮ್ ಹೆರಾದಾಸ್ ಸಿಂಗ್ ಎಂಬಾತನನ್ನು ತೌಬಲ್ ಜಿಲ್ಲೆಯಿಂದ ಬಂಧಿಸಲಾಗಿದೆ. ವಿಡಿಯೋದಲ್ಲಿ, ಹಸಿರು ಟೀ ಶರ್ಟ್ ಧರಿಸಿದ್ದ ವ್ಯಕ್ತಿ, ಮಹಿಳೆಯೊಬ್ಬಳನ್ನು ಎಳೆದುಕೊಂಡು ಹೋಗುತ್ತಿರುವ ವ್ಯಕ್ತಿ ಎಂದು ಗುರುತಿಸಲಾಗಿದೆ.
ಈ ಬೆಳವಣಿಗೆಯನ್ನು ಪ್ರದೇಶದ ಮಹಿಳೆಯರು ವಿರೋಧಿಸಿ ಹುಯೆರಿಮ್ ಹೆರದಾಸ್ ಸಿಂಗ್ ನ ಮನೆಗೆ ಬೆಂಕಿ ಹಚ್ಚಲಾಗಿದೆ.
“ಕೃತ್ಯ ಅತ್ಯಂತ ಖಂಡನೀಯ. ಜಾತಿ ಮತ್ತು ಸಮುದಾಯದ ಬೇಧವಿಲ್ಲದೆ ಎಲ್ಲ ತಾಯಂದಿರು ಮತ್ತು ಮಹಿಳೆಯರು ಯಾರ ಮೇಲೂ ನಡೆಯುವ ಇಂತಹ ಕೃತ್ಯಗಳಿಗೆ ವಿರುದ್ಧವಾಗಿದ್ದಾರೆ,ಕುಕಿಗಳು, ಮೈತೆಯ್ ಗಳು ಅಥವಾ ಮುಸ್ಲಿಮರಾಗಲಿ, ಮಹಿಳೆಯರನ್ನು ಕೀಳಾಗಿ ಮಾಡುವ ಇಂತಹ ಕೃತ್ಯಗಳನ್ನು ತಾಯಂದಿರು ತೀವ್ರವಾಗಿ ಖಂಡಿಸುತ್ತಾರೆ. ಇಂತಹ ಕೃತ್ಯಗಳು ನಡೆಯದಂತೆ ಇಂದಿನ ಸರ್ಕಾರವು ಆದರ್ಶಪ್ರಾಯ ಶಿಕ್ಷೆಯನ್ನು ನೀಡಬೇಕು,” ಎಂದು ಮಹಿಳೆಯರು ಮನವಿ ಮಾಡಿದ್ದಾರೆ.
ಎಫ್‌ಐಆರ್ ಪ್ರಕಾರ, ಮೂವರು ಮಹಿಳೆಯರ ಮೇಲೆ ಮುಗಿಬಿದ್ದ ಮೊದಲು ಗುಂಪು 56 ವರ್ಷದ ವ್ಯಕ್ತಿಯನ್ನು ಕೊಂದಿತು. ಅವರಲ್ಲಿ ಇಬ್ಬರನ್ನು ವಿವಸ್ತ್ರಗೊಳಿಸಿ ಬೆತ್ತಲೆಯಾಗಿ ಮೆರವಣಿಗೆ ಮಾಡಲಾಗಿದ್ದು, 21 ವರ್ಷದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿದೆ . ತನ್ನ ಸಹೋದರಿಯನ್ನು ಉಳಿಸಲು ಪ್ರಯತ್ನಿಸಿದ್ದಕ್ಕಾಗಿ ಆಕೆಯ 19 ವರ್ಷದ ಸಹೋದರನನ್ನು ಕೊಲೆ ಮಾಡಲಾಗಿದೆ.ಸ್ಥಳೀಯರ ನೆರವಿನಿಂದ ಮೂವರು ಮಹಿಳೆಯರು ಪರಾರಿಯಾಗಿದ್ದಾರೆ.