Advertisement
ಶಿವಮೊಗ್ಗ, ವಿಜಯಪುರ, ಹುಬ್ಬಳ್ಳಿ, ಬೆಳಗಾವಿ ವಿಮಾನ ನಿಲ್ದಾಣಗಳಿಗೆ ಸ್ಥಳೀಯ ಮಹನೀಯರ ಹೆಸರು ಇಡುವ ಸಂಬಂಧ ಹಲವು ದಿನಗಳಿಂದ ಬೇಡಿಕೆ ಇತ್ತು. ಈ ಹಿನ್ನೆಲೆಯಲ್ಲಿ ಮೂಲಸೌಕರ್ಯ ಸಚಿವ ಎಂ.ಬಿ. ಪಾಟೀಲ್ ವಿಧಾನಸಭೆಯಲ್ಲಿ, ಸಚಿವ ಎಚ್.ಕೆ. ಪಾಟೀಲ್ ವಿಧಾನಪರಿಷತ್‌ನಲ್ಲಿ ವಿಮಾನ ನಿಲ್ದಾಣಗಳಿಗೆ ಹೊಸ ಹೆಸರಿಡುವ ಸಂಬಂಧ ನಿರ್ಣಯವನ್ನು ಮಂಡಿಸಿದರು. ಇದಕ್ಕೆ ಎಲ್ಲ ಪಕ್ಷದ ಶಾಸಕರೂ ಒಮ್ಮತ ವ್ಯಕ್ತಪಡಿಸಿದರು.ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಬೆಳಗಾವಿ ವಿಮಾನ ನಿಲ್ದಾಣಕ್ಕೆ ಕಿತ್ತೂರು ರಾಣಿ ಚೆನ್ನಮ್ಮ, ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ (ಕುವೆಂಪು) ಹಾಗೂ ವಿಜಯಪುರ ಜಿಲ್ಲೆಯ ವಿಮಾನ ನಿಲ್ದಾಣಕ್ಕೆ ಶ್ರೀಜಗಜ್ಯೋತಿ ಬಸವೇಶ್ವರ ವಿಮಾನ ನಿಲ್ದಾಣ ಹೆಸರು ನಾಮಕರಣ ಮಾಡಲು ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಲಾಯಿತು.
ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರಿಡುವ ಪ್ರಸ್ತಾಪಕ್ಕೆ ವಿಧಾನಸಭೆಯಲ್ಲಿ ಗದ್ದಲವೇರ್ಪಟ್ಟಿತು. ನಾಲ್ಕು ವಿಮಾನ ನಿಲ್ದಾಣಗಳಿಗೆ ಹೆಸರು ಇಡುವ ಪ್ರಸ್ತಾವ ಬಂದಾಗ ಮಾತನಾಡಿದ ಕಾಂಗ್ರೆಸ್‌ನ ಅಬ್ಬಯ್ಯ ಪ್ರಸಾದ್, ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರಿಡುವ ಪ್ರಸ್ತಾವ ಮಾಡಿದರು. ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ವಿಪಕ್ಷ ಸದಸ್ಯರು, ಆ ದರೋಡೆಕೋರನ ಹೆಸರೇಕೆ ಇಡಬೇಕು? ಸುಮ್ಮನೆ ಇಲ್ಲದ ವಿವಾದ ಎಬ್ಬಿಸಬೇಡಿ ಎನ್ನುತ್ತಿದ್ದಂತೆ ಆಡಳಿತ-ವಿಪಕ್ಷ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಟಿಪ್ಪು ಹೆಸರು ಇಟ್ಟೇ ಇಡುತ್ತೇವೆ. ಅದು ಹೇಗೆ ತಡೆಯುತ್ತೀರೋ ನೋಡುತ್ತೇವೆ ಎಂದು ಆಡಳಿತಾರೂಢ ಕಾಂಗ್ರೆಸ್ ಸದಸ್ಯರು ಸವಾಲು ಹಾಕಿದರೆ, ಅದ್ಹೇಗೆ ಇಡುತ್ತೀರೋ ನಾವೂ ನೋಡುತ್ತೇವೆ ಎಂದು ವಿಪಕ್ಷ ಸದಸ್ಯರೂ ಪ್ರತಿಸವಾಲು ಹಾಕಿದರು. ಕೋಟಿ ಚೆನ್ನಯ್ಯವೋ? ರಾಣಿ ಅಬ್ಬಕ್ಕದೇವಿಯೋ?
ನಾಲ್ಕು ವಿಮಾನ ನಿಲ್ದಾಣಗಳ ಹೆಸರಿನ ಜತೆಗೆ ಮಂಗಳೂರು ವಿಮಾನ ನಿಲ್ದಾಣಕ್ಕೂ ಕೋಟಿ ಚೆನ್ನಯ್ಯ ಹೆಸರು ನಾಮಕರಣ ಮಾಡುವ ಸಂಬಂಧ ನಿರ್ಣಯ ಕೈಗೊಳ್ಳಿ ಎಂದು ಬಿಜೆಪಿಯ ಸುನೀಲ್ ಕುಮಾರ್ ಆಗ್ರಹಿಸಿದರು. ಮಧ್ಯಪ್ರವೇಶಿಸಿದ ಸ್ಪೀಕರ್ ಖಾದರ್, ಆ ಬಗ್ಗೆ ಕರಾವಳಿ ಭಾಗದ ಶಾಸಕರು ಚರ್ಚಿಸಿ ನಿರ್ಣಯ ಕೈಗೊಳ್ಳೋಣ. ಕೋಟಿ ಚೆನ್ನಯ್ಯ ಹೆಸರಿಡಬೇಕೋ ಅಥವಾ ರಾಣಿ ಅಬ್ಬಕ್ಕ ದೇವಿಯ ಹೆಸರಿಡಬೇಕೋ ಎಂಬ ಚರ್ಚೆಗಳಿವೆ. ಅಲ್ಲದೆ, ಈ ನಾಲ್ಕು ಸರಕಾರಿ ನಿಲ್ದಾಣಗಳಾಗಿವೆ. ಅದನ್ನು ಖಾಸಗಿಯವರಿಗೆ ಕೊಟ್ಟು ಕುಳಿತಿದ್ದೀರಿ. ಆ ಬಗ್ಗೆ ಈಗ ಚರ್ಚೆ ಬೇಡ ಎಂದರು.
Related Articles
Advertisement