Advertisement

ಕೋಟ : ಮನೆಗಳ್ಳತನ, ದೇಗುಲ ಕಳ್ಳತನದಲ್ಲಿ ಭಾಗಿಯಾಗಿದ್ದ ನಾಲ್ವರು ಆರೋಪಿಗಳ ಬಂಧನ

04:23 PM Jul 31, 2021 | Team Udayavani |

ಕೋಟ : ಬ್ರಹ್ಮಾವರ ಹಾಗೂ ಕೋಟ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಮನೆ, ದೇಗುಲ ಕಳ್ಳತನದಲ್ಲಿ ಭಾಗಿಯಾಗಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ಶೃಂಗೇರಿ ನಿವಾಸಿ ಗೋಪಾಲ (26) ಕೊಕ್ಕರ್ಣೆಯ ಅರುಣ (26), ಚೇರ್ಕಾಡಿಯ ರವಿ ಕುಮಾರ್‌ ಮತ್ತು ಸಾಸ್ತಾನ ಗುಂಡ್ಮಿ ನಿವಾಸಿ ರಜಾಕ್‌ (41) ಬಂಧಿತ ಆರೋಪಿಗಳು.

ಇವರು ಕೋಟ ಪೊಲೀಸ್‌ ಠಾಣಾ ವ್ಯಾಪ್ತಿಯ ನೆಂಚಾರು ಗ್ರಾಮದ ಕರಬರಬೆಟ್ಟಿನ ನಿವಾಸಿ ನೀಲಕಂಠ ಕರಬ ಅವರ ಹಳೆ ಮನೆಯ ಬಾಗಿಲು ಒಡೆದು ಮನೆಯಲ್ಲಿರುವ ಸುಮಾರು ರೂ 38,200ರೂ ಮೌಲ್ಯದ ಪೂಜಾ ಸಾಮಗ್ರಿ ಮತ್ತು ಬೆಳ್ಳಿಯ ಮೂರ್ತಿಯ ಕವಚ ಹಾಗೂ 1 ಗ್ರಾಂ ಚಿನ್ನದ ಪದಕ, ಗ್ರಹೋಪಯೋಗಿ ವಸ್ತುಗಳು ಕಳವುಗೈದಿದ್ದರು ಮತ್ತು ಬ್ರಹ್ಮಾವರ ಠಾಣಾ ವ್ಯಾಪ್ತಿಯ ಹೆಣ್ಮುಂಜೆ ಗ್ರಾಮದ ಪ್ರಬಾಡಿ ಮೂಲ ಜಟ್ಟಿಗೆ ಮತ್ತು ಬ್ರಹ್ಮ ದೆ„ವಸ್ಥಾನದ ಕಂಚಿನ ಘಂಟೆಗಳು ಮತ್ತು ಮುಂತಾದವುಗಳನ್ನು ಕಳವುಗೈದಿದ್ದರು. ಕೋಟ, ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ :ಗೋಲಗುಂಬಜ್ ಸ್ಮಾರಕದ ಸಜ್ಜಾ ಕುಸಿತ : ತಿಂಗಳ ಹಿಂದಿನ ಪ್ರಕರಣ ತಡವಾಗಿ ಬೆಳಕಿಗೆ

ಪೊಲೀಸರ ಯಶಸ್ವಿ ಕಾರ್ಯಚರಣೆ;
ಪ್ರಕರಣದ ಬಗ್ಗೆ ತನಿಖೆಗಿಳಿದ ಪೊಲೀಸರು ಜಿಲ್ಲಾ ಪೊಲೀಸ್‌ ಅಧೀಕ್ಷಕ ವಿಷ್ಣುವರ್ಧನ ಅವರ ನಿರ್ದೇಶನದಂತೆ ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್‌ ಅಧೀಕ್ಷಕ ಕುಮಾರಚಂದ್ರ ಹಾಗೂ ಉಡುಪಿ ಉಪವಿಭಾಗದ ಪೊಲೀಸ್‌ ಉಪಾಧೀಕ್ಷಕ ಸುಧಾಕರ ನಾಯ್ಕರವರ ಮಾರ್ಗದರ್ಶನದಲ್ಲಿ, ಬ್ರಹ್ಮಾವರ ವೃತ್ತ ನಿರೀಕ್ಷಕ ಅನಂತ ಪದ್ಮನಾಭ ಅವರ ನೇತೃತ್ವದಲ್ಲಿ ಕ್ಷಿಪ್ರ ಕಾರ್ಯಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿ ಕಳವು ಮಾಡಿದ ಸ್ವತ್ತುಗಳನ್ನು ಸ್ವಾಧೀನಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಕೋಟ ಪೊಲೀಸ್‌ ಠಾಣೆಯ ಪಿ.ಎಸ್‌.ಐ. ಸಂತೋಷ ಬಿ.ಪಿ., ಅಪರಾಧ ವಿಭಾಗದ ಪಿ.ಎಸ್‌.ಐ ಪುಷ್ಪಾ ಮತ್ತು ತರಬೇತಿ ಹಂತದಲ್ಲಿರುವ ಪಿ.ಎಸ್‌.ಐ ಭರತೇಶ್‌, ಸಿಬಂದಿಗಳಾದ ಸುರೇಶ್‌ ಶೆಟ್ಟಿ, ರಾಜು, ಸುರೇಶ್‌, ರಾಮ ದೇವಾಡಿಗ, ಜಯರಾಮ ಪಿ. ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು.

Advertisement

ಆರೋಪಿಗಳಾದ ಗೋಪಾಲ, ಅರುಣ, ರವಿ ನೇರವಾಗಿ ಕಳ್ಳತನದಲ್ಲಿ ಭಾಗಿಯಾಗಿದ್ದು ಕದ್ದ ಮಾಲುಗಳನ್ನು ಗುಜರಿಗೆ ಪಡೆದು ಮಾರಾಟ ಮಾಡುವಲ್ಲಿ ರಜಾಕ್‌ ನಿರತನಾಗಿದ್ದ ಎಂದು ತಿಳಿದು ಬಂದಿದೆ. ಇವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next