ಬೆಂಗಳೂರು: ಪಡಿತರ ಚೀಟಿಗೆ ಅರ್ಜಿ ಎಲ್ಲಿ ಸಲ್ಲಿಸಬೇಕು. ಆಧಾರ್ ನೋಂದಣಿ ಎಂಬಿತ್ಯಾದಿ ಮಾಹಿತಿ ಪಡೆಯಲು ರಾಜ್ಯಾದ್ಯಂತ ಈವರೆಗೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ನಿಯಂತ್ರಣ ಕೊಠಡಿಗೆ 4.91 ಲಕ್ಷ ಕರೆಗಳು ಬಂದಿವೆ.
ಆಹಾರ ಇಲಾಖೆ 2013ರಲ್ಲಿ ಸಹಾಯವಾಣಿ ಕೇಂದ್ರ ಆರಂಭಿಸಿದ್ದು, “1967′ ಉಚಿತ ದೂರವಾಣಿ ಸಂಖ್ಯೆಯನ್ನು ಪಡಿತರ ಚೀಟಿ ಹಿಂಬದಿ ಮುದ್ರಿಸಲಾಗಿದೆ. ರಾಜ್ಯಾದ್ಯಂತ ಕರೆಗಳು ಬರುತ್ತಿದ್ದು, ನಿಯಂತ್ರಣ ಕೊಠಡಿಯಲ್ಲಿರುವ 8 ಸಿಬ್ಬಂದಿ ಮಾಹಿತಿ ನೀಡುತ್ತಿದ್ದಾರೆ.
ಪ್ರತಿದಿನ 250 ಕರೆಗಳು: ಪಡಿತರ ಚೀಟಿಗೆ ಅರ್ಜಿ ಎಲ್ಲಿ ಸಲ್ಲಿಸಬೇಕು. ಹೆಸರು ಸೇರ್ಪಡೆಗೆ ಏನು ಮಾಡಬೇಕು. ನಮ್ಮ ವಾರ್ಡ್‌ನ ನ್ಯಾಯಬೆಲೆ ಅಂಗಡಿ ಎಲ್ಲಿದೆ. ಬಯೋಮೆಟ್ರಿಕ್ ಕಡ್ಡಾಯವೇ?, ಪಡಿತರ ಚೀಟಿಗೆ ಆಧಾರ್ ನೋಂದಣಿ ಹೀಗೆ ವಿವಿಧ ಮಾಹಿತಿ ಕೇಳಲು ಸಹಾಯವಾಣಿ ಸಂಖ್ಯೆಗೆ ಪ್ರತಿದಿನ ಸುಮಾರು 250ಕ್ಕೂ ಕರೆಗಳು ಬರುತ್ತವೆ. ದೂರುಗಳು ಬರುವುದು ಕಡಿಮೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಅಧಿಕಾರಿ ತಿಳಿಸಿದ್ದಾರೆ.
7 ವರ್ಷದಲ್ಲಿ 780 ದೂರುಗಳು ವಿಲೇವಾರಿ: ಧಾನ್ಯಗಳ ಗುಣಮಟ್ಟ, ನ್ಯಾಯಬೆಲೆ ಅಂಗಡಿಯವರ ನಡವಳಿಕೆ, ನಿಗದಿ ಪಡಿಸಿದ್ದಕ್ಕಿಂತ ಕಡಿಮೆ ಅನ್ನಭಾಗ್ಯ ಅಕ್ಕಿ ನೀಡುವ ಕುರಿತು 2013ರಿಂದ ಈವರಗೆ 797 ದೂರುಗಳು ಬಂದಿದ್ದು, ಅದರಲ್ಲಿ 780 ದೂರು ವಿಲೇವಾರಿಯಾಗಿವೆ. 2013-14ರಲ್ಲಿ 229, 2014-15ರಲ್ಲಿ 168, 2015-16ರಲ್ಲಿ 100, 2016-17ರಲ್ಲಿ 86, 2017-18ರಲ್ಲಿ 125, 2018-19ರಲ್ಲಿ 42, 2019-20ನೇ ಸಾಲಿನ ಫೆ.20ರ ವರೆಗೆ 30 ದೂರುಗಳು ವಿಲೇವಾರಿಯಾಗಿವೆ.
ಬಾಕಿ ಇವೆ ದೂರುಗಳು: ನಿಯಂತ್ರಣ ಕೊಠಡಿಗೆ ಬರುವ ದೂರುಗಳನ್ನು ಕೇಂದ್ರ ಕಚೇರಿಯ ಸಿಬ್ಬಂದಿ ಸಂಬಂಧ ಪಟ್ಟ ಜಿಲ್ಲೆಯ ಅಧಿಕಾರಿಗೆ ಆನ್‌ಲೈನ್ ಮೂಲಕ ದೂರಿನ ಪ್ರತಿಯನ್ನು ಕಳುಹಿಸಿ ಸಮಸ್ಯೆ ಪರಿಹರಿಸಲು ಸೂಚಿಸುತ್ತಾರೆ.
7 ದಿನಗಳಲ್ಲಿ ಸಮಸ್ಯೆ ಪರಿಹರಿಸಿ ಕೇಂದ್ರ: ಕಚೇರಿಗೆ ವರದಿ ನೀಡಬೇಕು. ಒಂದು ವೇಳೆ ಸಮಸ್ಯೆ ಹಾಗೇ ಮುಂದುವರಿದರೆ ಅಂತಹ ಅಧಿಕಾರಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಗೆ ಕರೆಯಲಾಗುತ್ತದೆ. 2014-15, 16-17ನೇ ಸಾಲಿನಲ್ಲಿ ತಲಾ 1 ದೂರು, 2017-18ರಲ್ಲಿ 3, 2018-19ರಲ್ಲಿ 2, 2019-20 ಸಾಲಿನಲ್ಲಿ 10 ದೂರುಗಳು ಸೇರಿ ಒಟ್ಟಾರೆ 17 ದೂರುಗಳು ವಿಲೇಯಾಗದೇ ಬಾಕಿ ಉಳಿದಿವೆ.
ವರ್ಷ ಸ್ವೀಕರಿಸಿದ ಕರೆಗಳು
2013-14 17,154
2014-15 92,197
2015-16 60,494
2016-17 1,05,918
2017-18 1,24,154
2018-19 47,714
2019-20(ಫೆ.20) 43,419
ಒಟ್ಟು 4,91,050