ಜೇವರ್ಗಿ: ಜೇವರ್ಗಿ ಸರ್ಕಾರಿ ಆಸ್ಪತ್ರೆ, ಯಡ್ರಾಮಿ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರ, ವಡಗೇರಾ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸು ತ್ತಿರುವ ಸಿಬ್ಬಂದಿ ವಸತಿಗೃಹಗಳ ನಿರ್ಮಾಣಕ್ಕೆ ಸರ್ಕಾರದಿಂದ 4.5ಕೋಟಿ ರೂ.ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ವಿಧಾನ ಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ, ಶಾಸಕ ಡಾ|ಅಜಯಸಿಂಗ್ ಹೇಳಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಮಂಗಳವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ 2021-22ನೇ ಸಾಲಿನ ಎಸ್ ಡಿಪಿ ಯೋಜನೆಯಡಿ 1.50ಕೋಟಿ ರೂ. ಅಂದಾಜು ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ವಸತಿಗೃಹಗಳ ನಿರ್ಮಾಣ ಕಾಮಗಾರಿಗೆ ಮಂಗಳವಾರ ಅಡಿಗಲ್ಲು ನೆರವೇರಿಸಿ ಅವರು ಮಾತನಾಡಿದರು.
ಪಟ್ಟಣದಲ್ಲಿರುವ ಸರಕಾರಿ ಆಸ್ಪತ್ರೆ ಮೇಲ್ದರ್ಜೆಗೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ. ಕ್ಷೇತ್ರದ ಜನರ ಅನುಕೂಲಕ್ಕಾಗಿ ಕಲಬುರಗಿ ರಸ್ತೆಯ ರದ್ದೇವಾಡಗಿ ಕೆವಿಕೆ ಹತ್ತಿರ 21 ಕೋಟಿ ರೂ. ವೆಚ್ಚದ ತಾಯಿ-ಮಕ್ಕಳ ಆಸ್ಪತ್ರೆ ನಿರ್ಮಾಣವಾಗುತ್ತಿದ್ದು, ಕಾಮಗಾರಿ ಪ್ರಗತಿಯಲ್ಲಿದೆ ಎಂದರು.
ಕಳೆದ 10 ವರ್ಷಗಳಿಂದ ಧರ್ಮಸಿಂಗ್ ಫೌಂಡೇಶನ್ ವತಿಯಿಂದ ನಿರಂತರ ಉಚಿತ ಆರೋಗ್ಯ ಶಿಬಿರ ಏರ್ಪಡಿಸುವ ಮೂಲಕ ಬಡ ಜನರ ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದರು.
ವಸತಿಗೃಹಗಳ ನಿರ್ಮಾಣ ಕಾಮಗಾರಿ ಆರು ತಿಂಗಳ ಒಳಗೆ ಪೂರ್ಣಗೊಳಿಸುವುದರ ಜತೆಗೆ ಗುಣಮಟ್ಟದ ಕಾಮಗಾರಿಗೆ ಒತ್ತು ನೀಡಬೇಕು ಎಂದು ಶಾಸಕರು ಗುತ್ತಿಗೆದಾರ ನಿಗೆ ತಾಕೀತು ಮಾಡಿದರು.
ಡಿಎಚ್‌ಒ ಡಾ|ಸಿದ್ದು ಪಾಟೀಲ, ಎಇಇ ರಾಜಕುಮಾರ ಬಾಳಿ, ಕಾಂಗ್ರೆಸ್ ಮುಖಂಡ ರಾದ ರಾಜಶೇಖರ ಸೀರಿ, ಷಣ್ಮುಖಪ್ಪಗೌಡ ಹಿರೇಗೌಡ, ಚಂದ್ರಶೇಖರ ಹರನಾಳ, ಅಬ್ದುಲ್ ರಹೇಮಾನ ಪಟೇಲ, ನೀಲಕಂಠ ಅವಂಟಿ, ದಾವೂದ್ ಬಡಾಘರ್, ಗುರುಗೌಡ ಗಂವ್ಹಾರ, ಶಿವಕುಮಾರ ಕಲ್ಲಾ, ಅಜ್ಜು ಲಕ್ಷತಿ, ಸಲಿಂ ಕಣ್ಣಿ, ಮಹಿಬೂಬ ಶಾನವಾಲೆ, ಆಸೀಫ್ ಮಡಕಿ, ಮಹಿಮೂದ ನೂರಿ, ಮರೆಪ್ಪ ಕೋಬಾಳಕರ್, ಮರೆಪ್ಪ ಸರಡಗಿ, ಇಮ್ರಾನ್ ಇನ್ನಿತರರಿದ್ದರು.