Advertisement

ರಾಜ್ಯದಲ್ಲಿ 4.49 ಲಕ್ಷ ಕುಟುಂಬಗಳಿಗೆ ಶೌಚಾಲಯವಿಲ್ಲ!

09:20 PM Mar 17, 2020 | Lakshmi GovindaRaj |

ಮಂಡ್ಯ: ರಾಜ್ಯದ ಗ್ರಾಮೀಣ ಪ್ರದೇಶವನ್ನು ಬಯಲು ಬಹಿರ್ದೆಸೆ ಮುಕ್ತ ಎಂದು ಘೋಷಿಸಲಾಗಿದ್ದರೂ ಇನ್ನೂ 4.49 ಲಕ್ಷ ಕುಟುಂಬಗಳಿಗೆ ಶೌಚಾಲಯವಿಲ್ಲದಿರುವುದು ಸಮೀಕ್ಷೆಯಿಂದ ಬೆಳಕಿಗೆ ಬಂದಿದೆ.

Advertisement

ರಾಷ್ಟ್ರ ಮತ್ತು ರಾಜ್ಯಮಟ್ಟದಲ್ಲಿ ನಡೆಸಿದ ಸಮೀಕ್ಷೆಗಳ ಪ್ರಕಾರ ಗ್ರಾಮೀಣ ಪ್ರದೇಶದ ಕೆಲವು ಗ್ರಾಮಗಳಲ್ಲಿ ಶೌಚಾಲಯರಹಿತ ಕುಟುಂಬಗಳಿರುವುದು ಕಂಡುಬಂದಿದೆ. ಅದರಂತೆ ರಾಜ್ಯದಲ್ಲಿ ಈವರೆಗೆ 1.99 ಲಕ್ಷ ಕುಟುಂಬಗಳು ಮಾತ್ರ ಶೌಚಾಲಯ ನಿರ್ಮಿಸಿಕೊಂಡಿದ್ದು, ಇನ್ನೂ 4.49 ಲಕ್ಷ ಕುಟುಂಬಗಳು ಶೌಚಾಲಯ ಹೊಂದಿಲ್ಲವೆಂದು ವರದಿ ಮಾಡಿವೆ.

ಬೇಸ್‌ಲೈನ್‌ ಸಮೀಕ್ಷೆ: ಸ್ವತ್ಛ ಭಾರತ್‌ ಮಿಷನ್‌ (ಗ್ರಾಮೀಣ) ಯೋಜನೆಯನ್ವಯ 2012ರ ಬೇಸ್‌ಲೈನ್‌ ಸಮೀಕ್ಷೆಯಂತೆ ರಾಜ್ಯದ ಗ್ರಾಮೀಣ ಪ್ರದೇಶದಲ್ಲಿದ್ದ ಶೌಚಾಲಯ ರಹಿತ ಕುಟುಂಬಗಳಿಗೆ ಶೌಚಾಲಯ ನಿರ್ಮಾಣ ಮಾಡಲಾಯಿತು. ಅದೇ ಮಾಹಿತಿಯನ್ನು ಆಧರಿಸಿ ರಾಜ್ಯದ ಗ್ರಾಮೀಣ ಪ್ರದೇಶವನ್ನು ಬಯಲು ಬಹಿರ್ದೆಸೆ ಮುಕ್ತ ಎಂದು ಘೋಷಿಸಲಾಯಿತು.

ಆದರೆ, 2012ರ ಸಮೀಕ್ಷೆಯಲ್ಲಿ ಬಿಟ್ಟುಹೋದ, ವಿಭಜನೆಯಾದ ಹಾಗೂ ಹೊಸದಾಗಿ ನಿರ್ಮಾಣವಾದಂತಹ ಶೌಚಾಲಯ ರಹಿತ ಕುಟುಂಬಗಳಿಗೆ ಎಲ್‌ಒಬಿ (ಶೌಚಾಲಯ ನಿರ್ಮಾಣದಿಂದ ಹೊರಗುಳಿದ) ಹಾಗೂ ಎನ್‌ಒಎಲ್‌ಬಿ (ಶೌಚಾಲಯದಿಂದ ಯಾರೂ ಹೊರಗುಳಿಯದಂತೆ ತಡೆಯುವ) ಕಾರ್ಯಕ್ರಮದಡಿ ಶೌಚಾಲಯ ನಿರ್ಮಾಣಕ್ಕೆ ಮತ್ತೆ ಅವಕಾಶ ಕಲ್ಪಿಸಲಾಗಿದೆ. ಈ ಶೌಚಾಲಯ ನಿರ್ಮಾಣಕ್ಕೆ ನೋಂದಣಿ ಮಾಡಿಕೊಳ್ಳಲು ಮಾ.31ರವರೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಜಿಪಂ ಸಿಇಒ ಅವರಿಗೆ ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಆಯುಕ್ತರು ಪತ್ರ ಬರೆದಿದ್ದಾರೆ.

ಶೌಚಾಲಯ ರಹಿತರ ಪಟ್ಟಿ: ಪ್ರತಿ ಗ್ರಾಮದಲ್ಲಿ ಶೌಚಾಲಯದ ಸಮೀಕ್ಷೆ ನಡೆಸಿ ಶೌಚಾಲಯ ರಹಿತ ಕುಟುಂಬಗಳ ಪಟ್ಟಿಯನ್ನು ಪಡೆಯುವುದು. ಈ ಹಿಂದಿನ ಯೋಜನೆಗಳಲ್ಲಿ ಶೌಚಾಲಯ ನಿರ್ಮಾಣ ಮಾಡಿಕೊಂಡು ಪ್ರೋತ್ಸಾಹಧನ ಪಡೆಯದೆ ಪ್ರಸ್ತುತ ನಿರುಪಯುಕ್ತವಾಗಿರುವ ಶೌಚಾಲಯಗಳಿಗೆ ಮತ್ತೆ ಶೌಚಾಲಯ ಒದಗಿಸಲು ಹೆಸರುಗಳನ್ನು ಕೆ-02 ನಮೂನೆಯಲ್ಲಿ ಸೇರಿಸುವಂತೆ ತಿಳಿಸಲಾಗಿದೆ.

Advertisement

ಪಂಚತಂತ್ರ ತಂತ್ರಾಂಶದಲ್ಲಿ ಈ ಹಿಂದೆ ಶೌಚಾಲಯ ನಿರ್ಮಾಣಕ್ಕೆ ಹೆಸರುಗಳನ್ನು ದಾಖಲಿಸಿ ಕಾರ್ಯಾದೇಶ ವಿತರಿಸಿ ಶೌಚಾಲಯ ನಿರ್ಮಾಣ ಮಾಡದಿದ್ದಲ್ಲಿ ಅಂತಹವರ ಹೆಸರುಗಳನ್ನು ಸೇರಿಸಿಕೊಂಡು ಹೊಸ ಕಾರ್ಯಾದೇಶ ನೀಡುವಂತೆ ಸೂಚಿಸಿದೆ. ಪತ್ರಿಕಾ ಪ್ರಕಟಣೆ, ಪೋಸ್ಟರ್‌, ಭಿತ್ತಿಪತ್ರಗಳ ಮೂಲಕ ಸಾರ್ವಜನಿಕರಿಗೆ ಮಾಹಿತಿ ರವಾನಿಸಿ ಶೌಚಾಲಯ ನಿರ್ಮಾಣಕ್ಕೆ ಅರ್ಹರಿರುವ ಫ‌ಲಾನುಭವಿಗಳನ್ನು ಗುರುತಿಸುವುದು. ಪ್ರತಿ ಗ್ರಾಮ ಪಂಚಾಯಿತಿಗೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳನ್ನು ನೋಡಲ್‌ ಅಧಿಕಾರಿಯನ್ನಾಗಿ ನೇಮಿಸಿ ಕಾಲಕಾಲಕ್ಕೆ ಶೌಚಾಲಯ ನಿರ್ಮಾಣದ ಪ್ರಗತಿಯನ್ನು ಪರಿಶೀಲಿಸುವುದು.

ಹೆಸರು ನೋಂದಾಯಿಸಿಕೊಳ್ಳಿ: ಯಾರೊಬ್ಬರೂ ಶೌಚಾಲಯ ವ್ಯಾಪ್ತಿಯಿಂದ ಹೊರಗುಳಿಯದಂತೆ ಮಾಡಲು ನಿಗದಿಪಡಿಸಲಾದ ಜಿಲ್ಲಾ ಗುರಿ ಹೆಚ್ಚಿಸಲು ಕೂಡಲೇ ಕೇಂದ್ರ ಕಚೇರಿಗೆ ಮಾಹಿತಿ ನೀಡುವುದು. ಶೌಚಾಲಯ ರಹಿತ ಫ‌ಲಾನುಭವಿಗಳ ಹೆಸರುಗಳನ್ನು ದಾಖಲಿಸಲು ಮಾ.31 ಕೊನೆಯ ದಿನವಾಗಿದೆ. ಶೌಚಾಲಯ ನಿರ್ಮಾಣವನ್ನು ಅತ್ಯಂತ ತುರ್ತು ಹಾಗೂ ಪ್ರಥಮಾದ್ಯತೆ ಎಂದು ಪರಿಗಣಿಸಿ ಪ್ರಸ್ತುತ ಶೌಚಾಲಯ ನಿರ್ಮಾಣಕ್ಕೆ ನೀಡಲಾಗಿರುವ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಂಡು ರಾಜ್ಯವನ್ನು ಬಯಲು ಬಹಿರ್ದೆಸೆ ಮುಕ್ತ ಸುಸ್ಥಿರತೆ ಕಾಯ್ದುಕೊಳ್ಳುವಂತೆ ತಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next