ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ಕಲಾವಿದ ರವಿಕಿರಣ್(65) ಅವರಿಗೆ ದುಬೈ ಕಾರ್ಯಕ್ರಮಕ್ಕೆ ಕಳುಹಿಸುತ್ತೇನೆ, ಅನಾಥಾಶ್ರಮಕ್ಕೆ ಹಣದ ಸಹಾಯ ನೀಡಿ ಎಂದು ಪರಿಚಯವಾದ ಗುರೂಜಿಯೊಬ್ಬರು ವಿವಿಧ ಹಂತದಲ್ಲಿ 4.32 ಲಕ್ಷ ರೂ. ಪಡೆದು ವಂಚಿಸಿದ್ದಾರೆ.
ಈ ಸಂಬಂಧ ನಟ, ನಿರ್ಮಾಪಕ ರವಿಕಿರಣ್ ನೀಡಿದ ದೂರಿನ ಮೇರೆಗೆ ನವೀನ್ ಭಾಗ್ಯಶ್ರೀ ಗುರೂಜಿ ಮತ್ತು ಅವರ ಪತ್ನಿ ಚೈತ್ರಾ ಹಾಗೂ ಇತರರ ವಿರುದ್ಧ ಕುಮಾರಸ್ವಾಮಿ ಲೇಔಟ್ ಠಾಣೆ ಪೊಲೀಸರು ಎಫ್ಐಆರ್ ದಾಖಲಿಸಿ, ತನಿಖೆ ಮುಂದುವರಿಸಿದ್ದಾರೆ.
ನಟ ರವಿಕಿರಣ್‌ಗೆ ಎರಡು ವರ್ಷದ ಹಿಂದೆ ಸ್ನೇಹಿತರ ಮೂಲಕ ಪರಿಚಯವಾದ ನವೀನ್ ಭಾಗ್ಯಶ್ರೀ ಗುರೂಜಿ, ಅಕ್ಟೋಬರ್‌ನಲ್ಲಿ “ನಾನು ಅನಾಥಾಶ್ರಮ ನಡೆಸುತ್ತಿದ್ದೇನೆ. ಏನಾದರೂ ದಿನಸಿ ಕೊಡಿಸಿ’ ಎಂದು ರವಿಕಿರಣ್ ಅವರನ್ನು ಕೇಳಿದ್ದಾರೆ. ಆಗ ರವಿ ಕಿರಣ್ ಗೂಗಲ್ ಪೇ ಮೂಲಕ 2,500 ರೂ. ಕಳುಹಿಸಿದ್ದಾರೆ. ಬಳಿಕ ಗುರೂಜಿ, “ನವೆಂಬರ್‌ನಲ್ಲಿ ದುಬೈನಲ್ಲಿ ಒಂದು ಕಾರ್ಯಕ್ರಮವಿದೆ. ನೀವು ಅಲ್ಲಿಗೆ ಮುಖ್ಯ ಅತಿಥಿಯಾಗಿ ಹೋದರೆ ದುಡ್ಡು ಕೊಡುತ್ತಾರೆ’ ಎಂದು ನಂಬಿಸಿದ್ದಾರೆ. ಅದಕ್ಕೆ ರವಿ ಕಿರಣ್ ಒಪ್ಪಿದಾಗ ದುಬೈಗೆ ತೆರಳಲು ಟಿಕೆಟ್ ಮಾಡಿಸಿ ಕೊಡುವುದಾಗಿ ವಿವಿಧ ಹಂತಗಳಲ್ಲಿ ಗುರೂಜಿ 89 ಸಾವಿರ ರೂ. ಪಡೆದುಕೊಂಡಿದ್ದಾನೆ.
ಕಡಿಮೆ ಬೆಲೆಗೆ ನಿವೇಶನದ ಆಮಿಷ: ಅಷ್ಟೇ ಅಲ್ಲದೆ, ಟ್ರಸ್ಟಿನಿಂದ ಹೊಸಕೋಟೆಯಲ್ಲಿ ಕಡಿಮೆ ಮೊತ್ತಕ್ಕೆ ನಿವೇಶ ಕೊಡಿಸುತ್ತೇನೆ ಎಂದು ನಂಬಿಸಿ ಹಣ ಪಡೆದಿದ್ದಾರೆ. ಬಳಿಕ ದುಬೈ ವಿಮಾನ ಟಿಕೆಟ್ ರದ್ದು ಆಗಿದ್ದು, ಬೇರೆ ಟಿಕೆಟ್ ಕೊಡಿಸುತ್ತೇನೆ ಎಂದು ಮತ್ತೆ 22,900 ರೂ. ಪಡೆದುಕೊಂಡಿದ್ದಾನೆ. ಹೀಗೆ ವಿವಿಧ ಕಾರಣ ನೀಡಿ ರವಿ ಕಿರಣ್ ಅವರಿಂದ ಒಟ್ಟು 4.32 ಲಕ್ಷ ರೂ. ಪಡೆದಿದ್ದಾರೆ. ಆದರೆ, ಈ ಬಗ್ಗೆ ವಿಚಾರಿಸಲು ಕರೆ ಮಾಡಿದರೆ ಗುರೂಜಿ ಮೊಬೈಲ್ ಸಂಪರ್ಕಕ್ಕೆ ಸಿಗುತ್ತಿಲ್ಲ. ನಾನು ಹಣ ವರ್ಗಾಣೆ ಮಾಡಿದ ಖಾತೆ ಮಾಹಿತಿ ಪರಿಶೀಲಿಸಿದಾಗ ಅದು ಗುರೂಜಿ ಪತ್ನಿ ಚೈತ್ರಾ ಹೆಸರಿನಲ್ಲಿರುವುದು ಕಂಡು ಬಂದಿದೆ. ಹೀಗಾಗಿ ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.