ಬಾಗಲಕೋಟೆ: ಜಿಲ್ಲೆಯಲ್ಲಿ ಹೆಸ್ಕಾಂಗೆ ಕೋಟಿ ಕೋಟಿ ಬಾಕಿ ಉಳಿಸಿಕೊಂಡ ತಾಲೂಕುಗಳಲ್ಲಿ ಜಿಲ್ಲೆಯ ಹುನಗುಂದ(ಇಳಕಲ್ಲ ಸಹಿತ)ತಾಲೂಕು ಕೊಂಚ ಕಡಿಮೆ ಬಾಕಿ ಉಳಿಸಿಕೊಂಡಿದೆ.
ಹೌದು. ಅವಿಭಜಿತ ಹುನಗುಂದ ತಾಲೂಕಿನಲ್ಲಿ ಒಟ್ಟು 34 ಗ್ರಾಮ ಪಂಚಾಯಿತಿಗಳಿವೆ. ತಾಲೂಕು ಪುನರ್ ವಿಂಗಡಣೆ ಹಾಗೂ ಗ್ರಾಪಂ ಪುನರ್ ವಿಂಗಡಣೆ ಬಳಿಕ ಹುನಗುಂದ ತಾಲೂಕು ವ್ಯಾಪ್ತಿಗೆ 19, ಇಳಕಲ್ಲ ತಾಲೂಕು ವ್ಯಾಪ್ತಿಗೆ 16 ಗ್ರಾಪಂ ಸೇರಿಸಲಾಗಿದೆ. ಕಂದಾಯ ಇಲಾಖೆಯ ಕಾರ್ಯ ಚಟುವಟಿಕೆಗಳಲ್ಲಿ ಜಿಲ್ಲೆಯ ತಾಲೂಕು ಪುನರ್ ವಿಂಗಡಣೆ ಅನುಷ್ಠಾನಗೊಂಡಿದ್ದು, ಕೆಲ ಇಲಾಖೆಗಳು, ಇಂದಿಗೂ ಹಳೆಯ ತಾಲೂಕುಗಳ ಹೆಸರನ್ನೇ ಉಲ್ಲೇಖೀಸುತ್ತವೆ.
ಹೆಸ್ಕಾಂಗೆ ಗ್ರಾಪಂಗಳಿಂದ ಬರಬೇಕಿರುವ ಬಾಕಿ ಲೆಕ್ಕದಲ್ಲಿ ಇಳಕಲ್ಲ-ಹುನಗುಂದ ಎರಡೂ ತಾಲೂಕು ಸೇರಿದ್ದು, ಒಟ್ಟು 10 ಗ್ರಾಪಂಗಳು, ತಲಾ 10ಲಕ್ಷಕ್ಕೂ ಅಧಿಕ ಮೊತ್ತದ ಬಾಕಿ ಉಳಿಸಿಕೊಂಡಿವೆ. ಅದರಲ್ಲಿ ಹಿರೇಮಳಗಾವಿ ಗ್ರಾಪಂ ವ್ಯಾಪ್ತಿಯಲ್ಲಿ ಒಟ್ಟು 27 ವಿದ್ಯುತ್ ಸ್ಥಾವರಗಳಿದ್ದು, ಅವುಗಳಿಂದ ಒಟ್ಟು 71.18 ಲಕ್ಷ ರೂ. ವಿದ್ಯುತ್ ಬಾಕಿ ಬರಬೇಕಿದೆ. ಇದು ಬಾಕಿ ಉಳಿಸಿಕೊಂಡ ತಾಲೂಕಿನಲ್ಲಿ ಮೊದಲ ಸ್ಥಾನದಲ್ಲಿದ್ದರೆ, ಐಹೊಳೆ ಗ್ರಾಪಂನಲ್ಲಿ 21ವಿದ್ಯುತ್ ಸ್ಥಾವರಗಳಿದ್ದು, ಅವುಗಳಿಂದ 23.01ಲಕ್ಷ ರೂ. ಬಾಕಿ ಬರಬೇಕಿದೆ. 10 ಲಕ್ಷಕ್ಕೂ ಅಧಿಕ ಬಾಕಿ ಉಳಿಸಿಕೊಂಡ ತಾಲೂಕುಗಳಲ್ಲಿ ಇದು ಕೊನೆ ಸ್ಥಾನದಲ್ಲಿದೆ.
ಈ ಎರಡೂ ತಾಲೂಕಿನಲ್ಲಿ ತಲಾ 10ಲಕ್ಷಕ್ಕೂ ಅಧಿಕ ಬಾಕಿ ಉಳಿಸಿಕೊಂಡ ಗ್ರಾಪಂಗಳಲ್ಲಿ 275 ವಿದ್ಯುತ್ ಸ್ಥಾವರಗಳಿದ್ದು, ಅವುಗಳಿಂದ ಒಟ್ಟು 4.25 ಕೋಟಿ ಬಾಕಿ ಬರಬೇಕಿದೆ.
ನೀರು ಪೂರೈಕೆಯಿಂದಲೇ ಬಾಕಿ ಹೆಚ್ಚು: ಜಿಲ್ಲೆಯಲ್ಲಿ ವಿದ್ಯುತ್ ಬಾಕಿ ಉಳಿಸಿಕೊಂಡಿರುವ ಗ್ರಾಪಂಗಳು, ವಿದ್ಯುತ್ ಬೀದಿದೀಪ, ಕುಡಿಯುವ ನೀರು ಪೂರೈಕೆ ಯೋಜನೆಗೆ ಸಂಬಂಧಿಸಿದ ಬಾಕಿ ಇದೆ. ಇನ್ನು ಗೃಹ ಬಳಕೆ, ವಾಣಿಜ್ಯ ಬಳಕೆ ಬಾಕಿ ಪ್ರತ್ಯೇಕವಾಗಿದೆ. ಇಳಕಲ್ಲ-ಹುನಗುಂದ ತಾಲೂಕು ವ್ಯಾಪ್ತಿಯ ಅಷ್ಟೂ ಗ್ರಾಪಂ ವ್ಯಾಪ್ತಿಯಲ್ಲಿ ಒಟ್ಟು ಕುಡಿಯುವ ನೀರು ಪೂರೈಕೆ ಯೋಜನೆಗಳಿಗೆ 619 ಸ್ಥಾವರಗಳಿದ್ದು, ಅವುಗಳಿಂದ ಒಟ್ಟು 366.46 ಲಕ್ಷ ರೂ. ಬಾಕಿ ಇದೆ. ಅಲ್ಲದೇ ಇಲ್ಲಿಯವರೆಗೆ ಒಟ್ಟು 42.97 ಲಕ್ಷ ಬಡ್ಡಿ ಪಾವತಿಸಬೇಕಿದೆ. ಒಟ್ಟು ಕುಡಿಯುವ ನೀರು ಪೂರೈಕೆ ಯೋಜನೆಗಳಿಂದ ಒಟ್ಟು 43.89 ಲಕ್ಷ ಬಡ್ಡಿ, 422.25 ಲಕ್ಷ ವಿದ್ಯುತ್ ಬಾಕಿ ಪಾವತಿ ಬಾಕಿ ಇದೆ.
ಇನ್ನು ಬೀದಿದೀಪಗಳಿಗಾಗಿ 254 ವಿದ್ಯುತ್ ಸ್ಥಾವರಗಳಿದ್ದು, ಇವುಗಳಿಂದ 61.12 ಲಕ್ಷ ಬಾಕಿ ಇದ್ದು, 9.83 ಲಕ್ಷ ರೂ.ಬಡ್ಡಿ ಇದೆ. ಒಟ್ಟಾರೆ ಸೆಪ್ಟೆಂಬರ್ ಅಂತ್ಯದವರೆಗೆ 10.58 ಲಕ್ಷ ಹಾಗೂ 76.40 ಲಕ್ಷ ರೂ. ವಿದ್ಯುತ್ ಬಾಕಿ ಇದೆ.
ಶ್ರೀಶೈಲ ಕೆ. ಬಿರಾದಾರ