Advertisement

ಭಾರತ “ಎ’ತಂಡಕ್ಕೆ 4-1 ಸರಣಿ

12:57 AM Jul 23, 2019 | Sriram |

ಕೂಲಿಜ್‌ (ಆ್ಯಂಡಿಗುವಾ): ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ವಿಭಾಗಗಳೆರಡರಲ್ಲೂ ಅಮೋಘ ಪ್ರದರ್ಶನ ನೀಡಿದ ಭಾರತ “ಎ’ ತಂಡ ಆತಿಥೇಯ ವೆಸ್ಟ್‌ ಇಂಡೀಸ್‌ “ಎ’ ವಿರುದ್ಧದ 5ನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ 8 ವಿಕೆಟ್‌ ಜಯಭೇರಿ ಮೊಳಗಿಸಿದೆ. ಸರಣಿಯನ್ನು 4-1 ಅಂತರದಿಂದ ತನ್ನದಾಗಿಸಿಕೊಂಡಿದೆ.

Advertisement

ಮೊದಲು ಬ್ಯಾಟಿಂಗ್‌ ನಡೆಸಿದ ವಿಂಡೀಸ್‌ “ಎ’ 47.4 ಓವರ್‌ಗಳಲ್ಲಿ 236 ರನ್ನಿಗೆ ಆಲೌಟಾದರೆ, ಭಾರತ “ಎ’ 33 ಓವರ್‌ಗಳಲ್ಲಿ ಎರಡೇ ವಿಕೆಟಿಗೆ 237 ರನ್‌ ಬಾರಿಸಿತು. ಮೊದಲ ಮೂರೂ ಪಂದ್ಯಗಳನ್ನು ಗೆದ್ದು ಸರಣಿ ವಶಪಡಿಸಿಕೊಂಡ ಮನೀಷ್‌ ಪಾಂಡೆ ಪಡೆ 4ನೇ ಮುಖಾ ಮುಖೀಯಲ್ಲಿ ಸಣ್ಣ ಅಂತರದಿಂದ ಎಡವಿತ್ತು.

ಟೀಮ್‌ ಇಂಡಿಯಾಕ್ಕೆ ಆಯ್ಕೆಯಾದ ಸಂಭ್ರಮದಲ್ಲಿದ್ದ ದೀಪಕ್‌ ಚಹರ್‌ (39ಕ್ಕೆ 2), ರಾಹುಲ್‌ ಚಹರ್‌ (53ಕ್ಕೆ 2) ಮತ್ತು ನವದೀಪ್‌ ಸೈನಿ (31ಕ್ಕೆ 2) ಅವರ ಘಾತಕ ಬೌಲಿಂಗ್‌ ಆತಿಥೇಯರಿಗೆ ಕಗ್ಗಂಟಾಗಿ ಪರಿಣಮಿಸಿತು.

ಚೇಸಿಂಗ್‌ ವೇಳೆ ಭಾರತದ ಅಗ್ರ ಕ್ರಮಾಂಕದ ಎಲ್ಲ ಆಟಗಾರರೂ ಭರ್ಜರಿ ಆಟವಾಡಿದರು. ಆರಂಭಿಕರಾದ ಋತುರಾಜ್‌ ಗಾಯಕ್ವಾಡ್‌ (99), ಶುಭಮನ್‌ ಗಿಲ್‌ (69) ಆಕ್ರಮಣಕಾರಿ ಬ್ಯಾಟಿಂಗ್‌ ಮೂಲಕ ಗಮನ ಸೆಳೆದರು. ಮೊದಲ ವಿಕೆಟಿಗೆ 11.4 ಓವರ್‌ಗಳಿಂದ 110 ರನ್‌ ಒಟ್ಟುಗೂಡಿತು. ಋತುರಾಜ್‌ ಗಾಯಕ್ವಾಡ್‌-ಶ್ರೇಯಸ್‌ ಅಯ್ಯರ್‌ ದ್ವಿತೀಯ ವಿಕೆಟಿಗೆ 112 ರನ್‌ ಪೇರಿಸಿದರು. ಅಯ್ಯರ್‌ ಕೊಡುಗೆ ಅಜೇಯ 61 ರನ್‌.

ಋತುರಾಜ್‌ ಗಾಯಕ್ವಾಡ್‌ ಅವರ ಆಟ ಅಮೋಘವಾಗಿತ್ತು. ಆದರೆ ಅವರಿಗೆ ಒಂದೇ ರನ್ನಿನಿಂದ ಶತಕ ತಪ್ಪಿತು. 89 ಎಸೆತ ಎದುರಿಸಿದ ಅವರು 11 ಬೌಂಡರಿ, 3 ಸಿಕ್ಸರ್‌ ಸಿಡಿಸಿ ಅಬ್ಬರಿಸಿದರು. ಗಿಲ್‌ ಅವರ 69 ರನ್‌ 40 ಎಸೆತಗಳಿಂದ ಬಂತು. ಸಿಡಿಸಿದ್ದು 8 ಬೌಂಡರಿ, 3 ಸಿಕ್ಸರ್‌. ಅಯ್ಯರ್‌ 73 ಎಸೆತಗಳಿಂದ ತಮ್ಮ ಇನ್ನಿಂಗ್ಸ್‌ ಕಟ್ಟಿದರು. ಇದರಲ್ಲಿ 3 ಬೌಂಡರಿ, 2 ಸಿಕ್ಸರ್‌ ಸೇರಿತ್ತು. ಪಾಂಡೆ ಗಳಿಕೆ ಔಟಾಗದೆ
7 ರನ್‌.

Advertisement

ವಿಂಡೀಸ್‌ ದಿಢೀರ್‌ ಕುಸಿತ
ವೆಸ್ಟ್‌ ಇಂಡೀಸಿಗೆ ಸುನೀಲ್‌ ಆ್ಯಂಬ್ರಿಸ್‌ (61) ಉತ್ತಮ ಆರಂಭ ಒದಗಿಸಿದ್ದರು. ಕಾರ್ನ್ ಓಟಿÉ (21) ಜತೆಗೂಡಿ ಮೊದಲ ವಿಕೆಟಿಗೆ 77 ರನ್‌ ಒಟ್ಟುಗೂಡಿಸಿದ್ದರು. ಆದರೆ ಸ್ಕೋರ್‌ 124ಕ್ಕೆ ಏರುವಷ್ಟರಲ್ಲಿ 7 ವಿಕೆಟ್‌ ಹಾರಿ ಹೋಯಿತು. ಕೆಳ ಕ್ರಮಾಂಕದಲ್ಲಿ ಶೆಫೇìನ್‌ ರುದರ್‌ಫೋರ್ಡ್‌ (65) ಮತ್ತು ಖಾರಿ ಪಿಯರೆ (ಔಟಾಗದೆ 35) ಹೋರಾಟ ನಡೆಸಿದ್ದರಿಂದ ತಂಡದ ಮೊತ್ತ ಇನ್ನೂರರ ಗಡಿ ದಾಟಿತು.

ಸಂಕ್ಷಿಪ್ತ ಸ್ಕೋರ್‌
ವೆಸ್ಟ್‌ ಇಂಡೀಸ್‌ “ಎ’-47.4 ಓವರ್‌ಗಳಲ್ಲಿ 236 (ಆ್ಯಂಬ್ರಿಸ್‌ 61, ರುದರ್‌ಫೋರ್ಡ್‌ 65, ಪಿಯರೆ ಔಟಾಗದೆ 35, ಸೈನಿ 31ಕ್ಕೆ 2, ದೀಪಕ್‌ ಚಹರ್‌ 39ಕ್ಕೆ 2, ರಾಹುಲ್‌ ಚಹರ್‌ 53ಕ್ಕೆ 2). ಭಾರತ “ಎ’-33 ಓವರ್‌ಗಳಲ್ಲಿ 2 ವಿಕೆಟಿಗೆ 237 (ಗಾಯಕ್ವಾಡ್‌ 99, ಗಿಲ್‌ 69, ಅಯ್ಯರ್‌ ಔಟಾಗದೆ 61, ಪೌಲ್‌ 37ಕ್ಕೆ 1).
ಪಂದ್ಯಶ್ರೇಷ್ಠ: ಋತುರಾಜ್‌ ಗಾಯಕ್ವಾಡ್‌

Advertisement

Udayavani is now on Telegram. Click here to join our channel and stay updated with the latest news.

Next