ಮುಂಬಯಿ: ಬುಧವಾರದ 3ನೇ ವನಿತಾ ಟಿ20 ಪಂದ್ಯದಲ್ಲಿ ಭಾರತವನ್ನು 21 ರನ್ನುಗಳಿಂದ ಮಣಿಸಿದ ಆಸ್ಟ್ರೇಲಿಯ 5 ಪಂದ್ಯಗಳ ಸರಣಿಯಲ್ಲಿ 2-1 ಮುನ್ನಡೆ ಗಳಿಸಿದೆ.
ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ ಆಸ್ಟ್ರೇಲಿಯ 8 ವಿಕೆಟ್ ನಷ್ಟಕ್ಕೆ 172 ರನ್ ಬಾರಿಸಿದರೆ, ಭಾರತ 7 ವಿಕೆಟಿಗೆ 151 ರನ್ ಮಾಡಿತು.
ಆರಂಭಿಕ ಕುಸಿತಕ್ಕೊಳಗಾದ ಆಸ್ಟ್ರೇಲಿಯವನ್ನು ಮಧ್ಯಮ ಕ್ರಮಾಂಕದ ಆಟಗಾರ್ತಿಯರಾದ ಎಲ್ಲಿಸ್ ಪೆರ್ರಿ ಮತ್ತು ಗ್ರೇಸ್ ಹ್ಯಾರಿಸ್ ಸೇರಿ ಕೊಂಡು ಮೇಲೆತ್ತಿದರು. ಸ್ಫೋಟಕ ಆಟವಾಡಿದ ಪೆರ್ರಿ ಕೇವಲ 47 ಎಸೆತಗಳಿಂದ 75 ರನ್ ಸಿಡಿಸಿದರು (9 ಬೌಂಡರಿ, 3 ಸಿಕ್ಸರ್). ಗ್ರೇಸ್ ಹ್ಯಾರಿಸ್ ಆಟವೂ ಬಿರುಸಿನಿಂದ ಕೂಡಿತ್ತು. ಅವರ 41 ರನ್ 18 ಎಸೆತಗಳಿಂದ ಬಂತು. 4 ಫೋರ್, 3 ಸಿಕ್ಸರ್ ಬಾರಿಸಿ ಭಾರತದ ಬೌಲರ್‌ಗಳನ್ನು ದಂಡಿಸಿದರು.
ಆಸ್ಟ್ರೇಲಿಯ 5 ರನ್ನಿಗೆ 2 ವಿಕೆಟ್ ಕಳೆದುಕೊಂಡಿತ್ತು. ರೇಣುಕಾ ಸಿಂಗ್, ಅಂಜಲಿ ಸರ್ವಾಣಿ, ದೀಪ್ತಿ ಶರ್ಮ, ದೇವಿಕಾ ವೈದ್ಯ ತಲಾ 2 ವಿಕೆಟ್ ಉರುಳಿಸಿದರು.
ಚೇಸಿಂಗ್ ವೇಳೆ ಭಾರತ ಸ್ಮತಿ ಮಂಧನಾ (1) ಅವರನ್ನು ಬೇಗನೇ ಕಳೆದುಕೊಂಡಿತು. ಶಫಾಲಿ ವರ್ಮ (52), ನಾಯಕಿ ಹರ್ಮನ್‌ಪ್ರೀತ್ ಕೌರ್ (37) ಮತ್ತು ದೀಪ್ತಿ ಶರ್ಮ (ಅಜೇಯ 25) ಹೊರತುಪಡಿಸಿ ಉಳಿದವರ್ಯಾರೂ ಆಸೀಸ್ ದಾಳಿಯನ್ನು ಎದುರಿಸಿ ನಿಲ್ಲಲಿಲ್ಲ.