Advertisement

3ನೇ ಏಕದಿನ ಪಂದ್ಯ: ಸರಣಿ ಗೆಲುವಿನ ಕನಸಿನಲ್ಲಿ ಭಾರತ

12:55 AM Mar 08, 2019 | |

ರಾಂಚಿ: ಐದು ಪಂದ್ಯಗಳ ಏಕದಿನ ಸರಣಿಯ ಮೊದಲ 2 ಪಂದ್ಯಗಳಲ್ಲಿ ಗೆದ್ದು ಪ್ರವಾಸಿ ಆಸ್ಟ್ರೇಲಿಯ ಮೇಲೆ ಸವಾರಿ ಮಾಡಿರುವ ಭಾರತೀಯರು 3ನೇ ಹಣಾಹಣಿಯಲ್ಲಿ ಮತ್ತೆ ಕಾಂಗರೂಗಳ ಹೆಡೆಮುರಿ ಕಟ್ಟಲು, ಸರಣಿ ಗೆಲುವಿನ ಅಲೆಯಲ್ಲಿ ತೇಲಲು ಸಜ್ಜಾಗಿ ನಿಂತಿದ್ದಾರೆ.

Advertisement

ಮತ್ತೂಂದು ಕಡೆ 2-0 ಅಂತರದಿಂದ 2 ಪಂದ್ಯಗಳ ಟಿ20 ಸರಣಿ ಗೆದ್ದಿರುವ ಆಸೀಸ್‌ ಇದೀಗ ಏಕದಿನ ಸರಣಿ ಕಳೆದುಕೊಳ್ಳುವ ಭಾರೀ ಭೀತಿಯಲ್ಲಿದೆ. ಮುಂದಿನ ಮೂರು ಪಂದ್ಯ ಸತತವಾಗಿ ಗೆಲ್ಲುತ್ತಾ ಸಾಗಿದರಷ್ಟೇ ಆಸೀಸ್‌ ಸರಣಿ ಗೆಲ್ಲಲಿದೆ. ಈ ಸವಾಲು ಆಸೀಸ್‌ಗೆ ಅಷ್ಟು ಸುಲಭದ್ದಲ್ಲ. ಎಲ್ಲವನ್ನು ಗಮನಿಸಿದಾಗ ಪ್ರವಾಸಿಗರು ಹೆಚ್ಚು ಒತ್ತಡದಲ್ಲಿದ್ದಾರೆ ಅನ್ನುವುದಷ್ಟು ಖಚಿತ. ಹೀಗಿದ್ದರೂ ಸೋಲಿನಿಂದ ಹೊರಬರಲು ಆಸೀಸ್‌ ಪ್ರಬಲ ಪ್ರತಿರೋಧ ತೋರುವ ಸಾಧ್ಯತೆ ಇದೆ.

ಬುಸುಗುಟ್ಟುತ್ತಿದೆ ಕೊಹ್ಲಿ ಪಡೆ: ತವರಿನಲ್ಲಿ ಟಿ20 ಸರಣಿ ಸೋಲಿನಿಂದಾಗಿ ಕೊಹ್ಲಿ ಪಡೆ ಕುದಿದು ಕೆಂಡವಾಗಿದೆ. ಏಕದಿನದಲ್ಲಾದರೂ ಆಸೀಸ್‌ಗೆ ತಕ್ಕ ಪಾಠ ಕಲಿಸಲು ಟೊಂಕಕಟ್ಟಿದೆ. ಆತಿಥೇಯರ ಸರಣಿ ಗೆಲುವಿಗೆ ಬೇಕಾಗಿರುವುದು ಕೇವಲ ಒಂದೇ ಒಂದು ಗೆಲುವು.

ಮೊದಲ ಏಕದಿನ ಪಂದ್ಯದಲ್ಲಿ ಅಜೇಯ ಅರ್ಧಶತಕ ಸಿಡಿಸಿದ್ದ ಮಾಜಿ ನಾಯಕ ಎಂ.ಎಸ್‌.ಧೋನಿ ಎರಡನೇ ಏಕದಿನ ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗಿ ನಿರಾಸೆ ಅನುಭವಿಸಿದ್ದರು. ಹೀಗಿದ್ದರೂ ಹುಟ್ಟೂರಲ್ಲಿ ಆಡುತ್ತಿರುವ ಧೋನಿಯೇ ಅಭಿಮಾನಿಗಳ ಪ್ರಮುಖ ಆಕರ್ಷಣೆ. ಧೋನಿ ಪ್ರತಿ ಸಲವೂ ರಾಂಚಿಯಲ್ಲಿ ಆಡಿದಾಗಲೆಲ್ಲ ಗಮನಾರ್ಹ ಪ್ರದರ್ಶನ ನೀಡಿದ್ದಾರೆ. 

ಈ ಸಲವೂ ಅಂತಹುದೇ ಪ್ರದರ್ಶನ ನೀಡುವ ಸಾಧ್ಯತೆ ತಳ್ಳಿಹಾಕುವಂತಿಲ್ಲ. ಕೊಹ್ಲಿ, ವಿಜಯ್‌ ಶಂಕರ್‌, ಕೇಧಾರ್‌ ಜಾಧವ್‌, ಎಂ.ಎಸ್‌.ಧೋನಿ ಸಮರ್ಪಕ ಬ್ಯಾಟಿಂಗ್‌ ಪ್ರದರ್ಶನ ನೀಡಿದ್ದಾರೆ. ಆದರೆ ಆರಂಭಿಕ ಬ್ಯಾಟ್ಸ್‌ಮನ್‌ ರೋಹಿತ್‌ ಶರ್ಮ ಹಾಗೂ ಶಿಖರ್‌ ಧವನ್‌ ಇನ್ನೂ ಚೇತರಿಸಿಕೊಂಡಿಲ್ಲ. ಕಳೆದ ಎರಡೂ ಪಂದ್ಯಗಳಲ್ಲೂ ಕ್ರಮವಾಗಿ ಇಬ್ಬರೂ ತಾರಾ ಬ್ಯಾಟ್ಸ್‌ಮನ್‌ಗಳು ಕಳಪೆ ಬ್ಯಾಟಿಂಗ್‌ ತೋರಿದ್ದಾರೆ. ಒಂದೊಳ್ಳೆ ಆರಂಭ ಈ ಇಬ್ಬರಿಂದ ಸಿಕ್ಕಿಲ್ಲ. ಇದರಿಂದಾಗಿ ಭಾರತ ಬೃಹತ್‌ ಸವಾಲನ್ನು ನೀಡಲು ಸಾಧ್ಯವಾಗುತ್ತಿಲ್ಲ. ಮೊದಲ ಪಂದ್ಯದಲ್ಲಿ ರೋಹಿತ್‌  37 ರನ್‌ ಭಾರಿಸಿದ್ದರು, ಎರಡನೇ ಪಂದ್ಯದಲ್ಲಿ ಶೂನ್ಯಕ್ಕೆ ವಿಕೆಟ್‌ ಒಪ್ಪಿಸಿದ್ದರು. ಇನ್ನು ಶಿಖರ್‌ ಧವನ್‌ ಮೊದಲ ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗಿದ್ದರೆ ಎರಡನೇ ಪಂದ್ಯದಲ್ಲಿ 21 ರನ್‌ ಅಷ್ಟೇ ಸಂಪಾದಿಸಿದ್ದರು.

Advertisement

ರಾಹುಲ್‌ ಕಣಕ್ಕೆ ಸಾಧ್ಯತೆ: ಆಡುವ ಹನ್ನೊಂದರಲ್ಲಿ  ಕೆ.ಎಲ್‌.ರಾಹುಲ್‌ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಕಳಪೆ ಫಾರ್ಮ್ನಲ್ಲಿರುವ ಆರಂಭಿಕ ಬ್ಯಾಟ್ಸ್‌ಮನ್‌ ಶಿಖರ್‌ ಧವನ್‌ ಬದಲಿಗೆ ಕೆ.ಎಲ್‌.ರಾಹುಲ್‌ ಸ್ಥಾನ ಪಡೆದರೆ ರೋಹಿತ್‌ ಜತೆ ತಂಡದ ಇನಿಂಗ್ಸ್‌ ಆರಂಭಿಸಲಿದ್ದಾರೆ. ಅಥವಾ ಕಳೆದೆರಡು ಪಂದ್ಯಗಳಲ್ಲಿ ವಿಫ‌ಲವಾಗಿರುವ ಅಂಬಾಟಿ ರಾಯುಡು ಬದಲಿಗೆ ಸ್ಥಾನ ಪಡೆದರೆ ಕೆ.ಎಲ್‌. ರಾಹುಲ್‌ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿಯುವ ನಿರೀಕ್ಷೆ ಇದೆ.

ಭುವಿ ತಂಡಕ್ಕೆ ವಾಪಸ್‌: ಭಾರತದ ಬೌಲಿಂಗ್‌ ವಿಭಾಗ ಹೆಚ್ಚು ಸದೃಢವಾಗಿದೆ. ವಿಶ್ರಾಂತಿಯಲ್ಲಿದ್ದ ವೇಗಿ ಭುವನೇಶ್ವರ್‌ ಕುಮಾರ್‌ ತಂಡಕ್ಕೆ ವಾಪಸ್‌ ಆಗಿರುವುದರಿಂದ ಬೌಲಿಂಗ್‌ ವಿಭಾಗ ಮತ್ತಷ್ಟು ಶಕ್ತಿಯುತವಾಗಿದೆ. ಮೊಹಮ್ಮದ್‌ ಶಮಿ, ಜಸ್‌ಪ್ರೀತ್‌ ಬುಮ್ರಾ ಈಗಾಗಲೇ ಆಸೀಸ್‌ಗೆ ನಡುಕ ಹುಟ್ಟಿಸಿದ್ದಾರೆ. ಕೇಧಾರ್‌ ಜಾಧವ್‌ ಹಾಗೂ ವಿಜಯ್‌ ಶಂಕರ್‌ ಭಾರತದ 5ನೇ ಬೌಲರ್‌ ಆಗಿ ಮಿಂಚುತ್ತಿದ್ದಾರೆ. ಸ್ಪಿನ್‌ ವಿಭಾಗದಲ್ಲಿ ಕುಲದೀಪ್‌ ಯಾದವ್‌ ಹಾಗೂ ರವೀಂದ್ರ ಜಡೇಜ ಭರವಸೆಯಾಗಿದ್ದಾರೆ.

ಒತ್ತಡದಲ್ಲಿ ಆಸೀಸ್‌: ಸತತ ಎರಡು ಸೋಲುಗಳು ಕಾಂಗರೂ ಪಡೆಯ ನಿದ್ದೆಗೆಡಿಸಿದೆ. ಆರಂಭಿಕ ಬ್ಯಾಟ್ಸ್‌ಮನ್‌ ಉಸ್ಮಾನ್‌ ಖವಾಜ, ಮಾರ್ಕಸ್‌ ಸ್ಟೋಯಿನಿಸ್‌ ಸ್ವಲ್ಪ ಫಾರ್ಮ್ನಲ್ಲಿರುವುದು ಬಿಟ್ಟರೆ ಉಳಿದಂತೆ ಆಸೀಸ್‌ ಬ್ಯಾಟ್ಸ್‌ಮನ್‌ಗಳು ಭಾರತೀಯರ ಬೌಲಿಂಗ್‌ಗೆ ತತ್ತರಿಸಿದ್ದಾರೆ. ಏರಾನ್‌ ಫಿಂಚ್‌, ಟಿ20ಯಲ್ಲಿ ಸಿಡಿದ ಗ್ಲೆನ್‌ ಮ್ಯಾಕ್ಸ್‌ವೆಲ್‌, ಶಾನ್‌ ಮಾರ್ಷ್‌ ಸೂಕ್ತ ಸಮಯದಲ್ಲಿ ಸ್ಟೋಟಿಸಿದರೆ ಆಸೀಸ್‌ ಸರಣಿ ಉಳಿಸಿಕೊಳ್ಳುವ ಪ್ರಯತ್ನ ನಡೆಸಬಹುದು. ಬೌಲಿಂಗ್‌ನಲ್ಲಿ ಪ್ಯಾಟ್‌ ಕಮಿನ್ಸ್‌, ಆ್ಯಡಂ ಜಂಪಾ ಹಾಗೂ ನಥನ್‌ ಕೋಲ್ಟರ್‌ ನೀಲ್‌ ತಮ್ಮ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸುತ್ತಿದ್ದಾರೆ.
 

Advertisement

Udayavani is now on Telegram. Click here to join our channel and stay updated with the latest news.

Next