Advertisement

3ನೇ ಭಾರತ ರತ್ನ ಬಂದ್ರೆ ಅದು ಡಾ.ಕೆ.ಸುಧಾಕರ್‌ಗೆ: ಸಚಿವ ಮುನಿರತ್ನ

01:50 PM Jan 09, 2023 | Team Udayavani |

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಇಬ್ಬರು ಸಾಧಕರು ಭಾರತ ರತ್ನ ಪಡೆದಿದ್ದಾರೆ. ಒಂದು ವೇಳೆ ಮೂರನೇ ಭಾರತ ರತ್ನ ಕೊಡಬಹುದು ಅಂದರೆ, ಅದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ಗೆ ಎಂದು ರಾಜ್ಯ ತೋಟಗಾರಿಕೆ ಸಚಿವ ಮುನಿರತ್ನ ಹೇಳಿದರು.

Advertisement

ನಗರದ ಸರ್‌ ಎಂ.ವಿ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಚಿಕ್ಕಬಳ್ಳಾಪುರ ಉತ್ಸವದಲ್ಲಿ ಮಾತನಾಡಿ, ಚಿಕ್ಕಬಳ್ಳಾಪುರ ಜಿಲ್ಲೆ ಆಗಿ 15 ವರ್ಷ ಆಗಿದೆ. ಈ ಸಂದರ್ಭದಲ್ಲಿ ಅನೇಕ ರಾಜಕಾರಣಿಗಳು ಬಂದರು ಹೋದರು. ಆದರೆ, ಕ್ಷೇತ್ರ ಮತ್ತು ಜಿಲ್ಲೆಯ ಪ್ರಗತಿ ಬಗ್ಗೆ ಸದಾಚಿಂತನೆ ಮಾಡುವ ದೂರದೃಷ್ಟಿಯ ನಾಯಕ ತಾವು ಪಡೆದಿರುವುದು ಕ್ಷೇತ್ರದ ಮತದಾರರೇ ಪುಣ್ಯವಂತರು ಎಂದು ಬಣ್ಣಿಸಿದರು.

ಚುನಾವಣೆ ಸಂದರ್ಭದಲ್ಲಿ ಸುಳ್ಳು ಹೇಳಿ ಜನರನ್ನು ಮರಳು ಮಾಡುವ ರಾಜಕಾರಣಿಗಳಿದ್ದಾರೆ. ಆದರೆ, ಕೆಲಸದಲ್ಲಿ ನಂಬಿಕೆ ಇಟ್ಟುಕೊಂಡು ಜನರ ಸೇವೆ ಮಾಡುತ್ತಿರುವ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಅವರು ಅಪಾರವಾಗಿ ಕೊಡುಗೆ ನೀಡಿದ್ದಾರೆ. ಜಿಲ್ಲೆಯ ಜನರು ಶಾಶ್ವತವಾಗಿ ನೆನಪು ಇಟ್ಟುಕೊಳ್ಳುವಂತಹ ಕೆಲಸವನ್ನು ಮಾಡುವ ನಿಟ್ಟಿನಲ್ಲಿ ಪ್ರಾಮಾಣಿಕ ಕೆಲಸವನ್ನು ಮಾಡುತ್ತಿದ್ದಾರೆ. ಇಂತಹ ನಾಯಕರನ್ನು ತಮಗೆ ಆ ಭಗವಂತ ಕೊಡುಗೆಯಾಗಿ ನೀಡಿದ್ದಾನೆ ಎಂದು ಹೇಳಿದರು.

ಕೊರೊನಾ ನಿಯಂತ್ರಣದಲ್ಲಿ ಸಾಧನೆ: ದೇಶಾಭಿವೃದ್ಧಿ ಮಾಡುವ ಮೂಲಕ ಪ್ರಧಾನಿ ಮೋದಿ ಅವರು ವಿಶ್ವದ ಗಮನಸೆಳೆದಿದ್ದಾರೆ. ಅದೇ ರೀತಿಯಲ್ಲಿ ಕರ್ನಾಟಕದಲ್ಲಿ ಕೊರೊನಾ ಸೋಂಕು ನಿಯಂತ್ರಿಸಲು ಪ್ರಾಮಾಣಿಕ ಪ್ರಯತ್ನ ಮಾಡಿ, ಇಡೀ ದೇಶದ ನಾಗರಿಕರು ಕರ್ನಾಟಕವನ್ನು ನೋಡುವಂತೆ ಮಾಡಿದ ಕೀರ್ತಿ ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.

ನಮ್ಮನ್ನು ಸ್ಟೂಡೆಂಟ್‌ ಆಗಿ ಮಾಡಿಕೊಳ್ಳಿ: ರಾಜ್ಯ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗೆ ವಿಶಿಷ್ಟ ಕೊಡುಗೆ ನೀಡಲು ಕಾಳಜಿವಹಿಸಿರುವ ಡಾ.ಕೆ.ಸುಧಾಕರ್‌ ಅವರ ಒಂದು ಸ್ಕೂಲ್‌ ಮಾಡಿ, ನಮ್ಮಂತಹರನ್ನು ಸ್ಟೂಡೆಂಟ್‌ ಆಗಿ ಮಾಡಿಕೊಂಡರೇ ನಾವು ಸಹ ನಿಮ್ಮಂತೆ ನಮ್ಮ ಕ್ಷೇತ್ರದಲ್ಲಿ ಇಂತಹ ಕೆಲಸ ಮಾಡಲು ಅನುಕೂಲವಾಗುತ್ತದೆ ಎಂದು ಹೇಳಿ ಹಾಡಿಹೊಗಳಿದರು.

Advertisement

ಮತ್ತಷ್ಟು ಎತ್ತರಕ್ಕೆ ಬೆಳೆಸಿ: ಯಾವ ರಾಜ್ಯದ ಆರೋಗ್ಯ ಮಂತ್ರಿ ಜನರ ಆರೋಗ್ಯದ ಬಗ್ಗೆ ಕಾಳಜಿವಹಿಸಿದರೋ ಇಲ್ಲವೋ ಗೊತ್ತಿಲ್ಲ. ಆದರೆ, ಸುಧಾಕರ್‌ ಅವರು ರಾಜ್ಯದ ಜನರನ್ನು ತಮ್ಮ ಕುಟುಂಬದ ಸದಸ್ಯರಾಗಿ ನೋಡಿದ್ದಾರೆ. ಕೋವಿಡ್‌ ಸಂದರ್ಭದಲ್ಲಿ ಎಷ್ಟು ಕೃತಜ್ಞತೆ ಹೇಳಿದರೂ ಕಮ್ಮಿನೇ ಎಂದ ಅವರು, ಇಂತಹ ನಾಯಕರನ್ನು ಪಡೆದಿರುವುದು ನಮ್ಮ ಪುಣ್ಯ. ಅವರನ್ನು ಮತ್ತಷ್ಟು ಎತ್ತರಕ್ಕೆ ಬೆಳೆಸುವ ಶಕ್ತಿ ನಿಮಗೆ ಇದೆ. ಆ ಕೆಲಸವನ್ನು ತಾವು ಮಾಡಬೇಕೆಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಿಹಿಕಹಿ ಚಂದ್ರು, ಒಗ್ಗರಣೆ ಡಬ್ಬೆ ಖ್ಯಾತಿಯ ಮುರಳಿ, ಜಿಲ್ಲಾಧಿಕಾರಿ ಎನ್‌.ಎಂ.ನಾಗರಾಜ್‌, ಜಿಪಂ ಸಿಇಒ ಶಿವಶಂಕರ್‌, ಜಿಲ್ಲಾ ಎಸ್ಪಿ ಡಿ.ಎಲ್‌.ನಾಗೇಶ್‌, ಉಪ ವಿಭಾಗಾಧಿಕಾರಿ ಡಾ.ಸಂತೋಷಕುಮಾರ್‌ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next