Advertisement

ರಾಜ್ಯದಲ್ಲಿ 3M ಸರ್ಕಾರ: ಅಮಿತ್‌ ಶಾ

06:00 AM Feb 21, 2018 | |

ಮಂಗಳೂರು: ಕರ್ನಾಟಕದಲ್ಲಿ ಸಿದ್ದರಾಮಯ್ಯ ಸರಕಾರದ ಭ್ರಷ್ಟಾಚಾರ ಆರೋಪಗಳಿಗೆ ಸಂಬಂಧಿಸಿ ನನ್ನ ಬಳಿ 19ಕ್ಕೂ ಹೆಚ್ಚು ಪ್ರಕರಣಗಳ ವರದಿ ಇದೆ” ಎನ್ನುವ ಮೂಲಕ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ್ದಾರೆ.

Advertisement

ದ.ಕ. ಜಿಲ್ಲೆಯಲ್ಲಿ ಮಂಗಳವಾರ ಪಕ್ಷ ಸಂಘಟನೆ ಪ್ರವಾಸ ಪೂರ್ಣಗೊಳಿಸಿದ ಬಳಿಕ ಸುರತ್ಕಲ್‌ನಲ್ಲಿ ಸುದ್ದಿಗೋಷ್ಠಿ ನಡೆಸಿದರು. “ಕರ್ನಾಟಕ ಸರಕಾರದಲ್ಲಿ ಭ್ರಷ್ಟಚಾರ ನಡೆದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್‌ ಶಾ ಮಾಡುತ್ತಿರುವ ಆರೋಪಕ್ಕೆ ದಾಖಲೆಗಳಿದ್ದರೆ ನೀಡಲಿ’ ಎಂದು ಸಿದ್ದರಾಮಯ್ಯ ಹಾಕಿರುವ ಸವಾಲಿಗೆ ಉತ್ತರಿಸಿದರು.

ತೀವ್ರ ವಾಗ್ಧಾಳಿಯನ್ನೇ ನಡೆಸಿದ ಅಮಿತ್‌ ಶಾ, “”ನಾನು ದಾಖಲೆಗಳಿಲ್ಲದೆ ಯಾವುದೇ ಆರೋಪ ಮಾಡುವುದಿಲ್ಲ. ಸಿದ್ದರಾಮಯ್ಯ 40 ಲಕ್ಷ ರೂ. ವಾಚ್‌ ಪಡೆದಿರುವುದು, ಕಾಂಗ್ರೆಸ್‌ ಡೈರಿ ಪ್ರಕರಣ, ಸರಕಾರದ ಪ್ರಭಾವಿ ಸಚಿವರ ಮನೆ ಮೇಲೆ ಐಟಿ ಅಧಿಕಾರಿಗಳ ದಾಳಿ, ಬೆಂಗಳೂರಿನ ಸಾರಿಗೆ ವ್ಯವಸ್ಥೆಗೆ ನೀಡಿರುವ 24,000 ಕೋಟಿ ರೂ. ದುರ್ಬಳಕೆ ಮುಂತಾದ ಪ್ರಕರಣಗಳಲ್ಲದೆ ಸಿದ್ದರಾಮಯ್ಯ ಸರಕಾರದ ಭ್ರಷ್ಟಾಚಾರಕ್ಕೆ ಸಂಬಂಧಿಸಿ ಇನ್ನೂ 19 ಪ್ರಕರಣಗಳ ಕುರಿತ ವರದಿ ನನ್ನ ಬಳಿ ಇವೆ” ಎಂದರು.

ಮೂರು “ಎಂ’ಗಳ ಸರಕಾರ
“”ರಾಜ್ಯದ ಸಿದ್ದರಾಮಯ್ಯ ಸರಕಾರ ಮಾಫಿಯಾ, ಮರ್ಡರ್‌ ಮತ್ತು ಮಿನಿಸ್ಟರ್ ಕರಪ್ಶನ್‌ ಎಂಬ ಮೂರು “ಎಂ’ಗಳ ಸರಕಾರವಾಗಿದೆ. ರಾಜ್ಯದ ಜನತೆ ಗೂಂಡಾ ಸರಕಾರದ ಬದಲಿಗೆ ಗುಡ್‌ ಗವರ್‌ನೆಸ್‌ ಬಯಸುತ್ತಿದ್ದು, ಬಿಜೆಪಿಗೆ ಮತ ಹಾಕಲಿದ್ದಾರೆ. ರಾಜ್ಯದಲ್ಲಿ ಸಿದ್ದರಾಮಯ್ಯ ಸರಕಾರದ ಸಮಾಪ್ತಿ ಸಮೀಪಿಸುತ್ತಿದೆ. ಮತ ಎಣಿಕೆಯ ದಿನವೇ ರಾಜ್ಯದಲ್ಲಿ ಕಾಂಗ್ರೆಸ್‌ ಸರಕಾರದ ಕೊನೆಯಾಗಲಿದೆ. ಮುಂದಿನ ಸರಕಾರ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರವಾಗಲಿದೆ” ಎಂದು ಶಾ ತಿಳಿಸಿದರು.

“”ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಅಧೋಗತಿಗೆ ಇಳಿದಿದೆ. ರಾಜಕೀಯ ಪ್ರೇರಿತ ಕೊಲೆಗಳಾಗುತ್ತಿವೆ. ಕಳೆದ ನಾಲ್ಕು ವರ್ಷಗಳಲ್ಲಿ 22ಕ್ಕೂ ಅಧಿಕ ಆರ್‌ಎಸ್‌ಎಸ್‌, ಬಿಜೆಪಿ ಕಾರ್ಯಕರ್ತರ ಕೊಲೆಯಾಗಿದ್ದು, ಆತಂಕಕಾರಿ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ರಾಜ್ಯ ಸರಕಾರ ಪಿಎಫ್‌ಐ, ಎಸ್‌ಡಿಪಿಐ ಕಾರ್ಯಕರ್ತರ ಮೇಲಿದ್ದ ಮೊಕದ್ದಮೆಗಳನ್ನು ಹಿಂದಕ್ಕೆ ಪಡೆಯುವ ಮೂಲಕ ತುಷ್ಟೀಕರಣ ರಾಜಕಾರಣ ಮಾಡುತ್ತಿದೆ ಎಂದ ಅವರು, ಸರಕಾರದ ಈ ಕ್ರಮ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮ ಬೀರಲಿದ್ದು, ಪೊಲೀಸರ ನೈತಿಕ ಬಲವನ್ನು ಕುಸಿಯುವಂತೆ ಮಾಡುತ್ತಿದೆ” ಎಂದರು.

Advertisement

ಪಿಎಫ್‌ಐ, ಎಸ್‌ಡಿಪಿಐ ನಿಷೇಧಕ್ಕೆ ರಾಜ್ಯ ಸರಕಾರಕ್ಕೆ ಆಗ್ರಹಿಸುವ ಬದಲು ಕೇಂದ್ರ ಸರಕಾರವೇ ಈ ಕ್ರಮಕ್ಕೆ ಮುಂದಾಗಬಹುದಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಯಾವುದೇ ಸಂಘಟನೆಗಳ ನಿಷೇಧಕ್ಕೆ ರಾಜ್ಯ ಸರಕಾರದಿಂದ ಕೋರಿಕೆ ಬರಬೇಕಾಗುತ್ತದೆ. ಆಗ ಮಾತ್ರ ಕೇಂದ್ರ ಸರಕಾರ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತದೆ ಎಂದು ಉತ್ತರಿಸಿದರು. ದೀಪಕ್‌ ರಾವ್‌ ಮನೆಗೆ ಹೋಗುವ ನೀವು ಬಶೀರ್‌ ಮನೆಗೆ ಯಾಕೆ ಭೇಟಿ ನೀಡುತ್ತಿಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, “ನಾನು ಬಿಜೆಪಿ ಅಧ್ಯಕ್ಷ. ದೀಪಕ್‌ ಬಿಜೆಪಿ ಕಾರ್ಯಕರ್ತ. ಹಾಗಾಗಿ ಅವನ ಮನೆಗೆ ಭೇಟಿ ನೀಡುತ್ತಿದ್ದೇನೆ’ ಎಂದರು.

ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ, ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ, ಸಂಸದರಾದ ನಳಿನ್‌ ಕುಮಾರ್‌ ಕಟೀಲು, ಶೋಭಾ ಕರಂದ್ಲಾಜೆ, ರಾಜ್ಯ ಬಿಜೆಪಿ ಉಸ್ತುವಾರಿ ಮುರಲೀಧರ ರಾವ್‌, ಮಾಜಿ ಸಚಿವರಾದ ಕೃಷ್ಣ ಜೆ. ಪಾಲೆಮಾರ್‌, ಸಿ.ಟಿ. ರವಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜೀವ ಮಠಂದೂರು, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಉಪಸ್ಥಿತರಿದ್ದರು.

ಅಮಿತ್‌ ಶಾ ಎಡವಟ್ಟು
ಶಾಸಕ ಹ್ಯಾರಿಸ್‌ ಪುತ್ರನಿಂದ ಗಂಭೀರ ಹಲ್ಲೆಗೊಳಗಾಗಿರುವ ವಿದ್ವತ್‌ ಬಿಜೆಪಿ ಕಾರ್ಯಕರ್ತನೆಂದು ಅಮಿತ್‌ ಶಾ ಅವರು ಬಂಟ್ವಾಳದಲ್ಲಿ ಮಧ್ಯಾಹ್ನ ನಡೆದ ನವಶಕ್ತಿ ಸಮಾವೇಶದಲ್ಲಿ ಉಲ್ಲೇಖೀಸಿದ್ದರು. ಆದರೆ ಸುರತ್ಕಲ್‌ನಲ್ಲಿ ಸಂಜೆ ನಡೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಪತ್ರಕರ್ತರು ಪ್ರಶ್ನಿಸಿದಾಗ “ನಾನು ತಪ್ಪಾಗಿ ವಿದ್ವತ್‌ ಬಿಜೆಪಿ ಕಾರ್ಯಕರ್ತನೆಂದು ಹೇಳಿದ್ದೆ. ಆತ ಬಿಜೆಪಿ ಕಾರ್ಯಕರ್ತನಲ್ಲ. ಆದರೆ ನಾನು ಈ ರೀತಿ ಉಲ್ಲೇಖೀಸಿದ್ದರಿಂದ ಆ ಹಲ್ಲೆ ಪ್ರಕರಣ ರಾಜ್ಯದಲ್ಲಿ ಮತ್ತೂಮ್ಮೆ ದೊಡ್ಡ ಚರ್ಚೆಗೆ ಗ್ರಾಸವಾಯಿತು. ಹೀಗಾಗಿ ಮಾಧ್ಯಮಕ್ಕೆ ಧನ್ಯವಾದಗಳು’ ಎನ್ನುವ ಮೂಲಕ ಈ ಮೊದಲು ತಪ್ಪು ನೀಡಿದ್ದ ಹೇಳಿಕೆಯನ್ನು ಸಮರ್ಥಿಸಿಕೊಳ್ಳುವ ಪ್ರಯತ್ನ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next