Advertisement

ಆಲಮಟ್ಟಿ ಎಂಟ್ರನ್ಸ್‌ ಪ್ಲಾಜಾಕ್ಕೆ “3ಡಿ’ಮೆರುಗು

05:49 PM Aug 21, 2021 | Nagendra Trasi |

ಆಲಮಟ್ಟಿ: ಬರದ ನಾಡಿನ ಹಸಿರು ಕಾನನವಾಗಿ ಹಲವಾರು ವಿಶೇಷ ಉದ್ಯಾನಗಳಿಂದ ನಿತ್ಯ ಸಾವಿರಾರು ಪ್ರವಾಸಿಗರನ್ನು ಆಕರ್ಷಿಸುವ ಆಲಮಟ್ಟಿ ಪ್ರವಾಸಿ ತಾಣಕ್ಕೆ ಇನ್ನೊಂದು ಗರಿಯೆಂಬಂತೆ 3ಡಿ ಮ್ಯಾಪಿಂಗ್‌ ಸೇರ್ಪಡೆಗೊಂಡಿದೆ. ಪಟ್ಟಣದಲ್ಲಿ ರಾಕ್‌, ಗೋಪಾಲ ಕೃಷ್ಣ, ಚಿಲ್ಡ್ರನ್‌ ಪಾರ್ಕ್‌, ಸಿಲ್ವರ್‌ ಲೇಕ್‌, ಲವಕುಶ ಹಾಗೂ 77 ಎಕರೆ ಪ್ರದೇಶದಲ್ಲಿರುವ ಮೊಘಲ್‌, ಇಟಾಲಿಯನ್‌, ಫ್ರೆಂಚ್‌, ರೋಜ್‌ ಉದ್ಯಾನಗಳು ಮತ್ತು ನೂತನ ತಂತ್ರಜ್ಞಾನ ಹೊಂದಿರುವ ಸಂಗೀತ ನೃತ್ಯ ಕಾರಂಜಿ ಮತ್ತು ಲೇಷರ್‌ ಶೋಗಳ ಮತ್ತೂಂದು ಹೊಸ ಸೇರ್ಪಡೆಯಾಗಿ ದೇಶದಲ್ಲಿಯೇ ನಾಲ್ಕನೇ ಹಾಗೂ ರಾಜ್ಯದಲ್ಲಿ ಪ್ರಥಮವಾಗಿರುವ 3ಡಿ
ಮ್ಯಾಪಿಂಗ್‌ ಪ್ರದರ್ಶನ ಸೇರಿತು.

Advertisement

ಏನಿದು ತಂತ್ರಜ್ಞಾನ?: ಸಿನೇಮಾ ಥಿಯೇಟರಿನಲ್ಲಿ ಬಿಡುವಂತೆ ಇಲ್ಲಿಯೂ ಸ್ಕ್ರೀನ್‌ನಂತೆ ಬೃಹದ್ದಾಕಾರದ ಗೋಡೆ ಮೇಲೆ ಕಂಪ್ಯೂಟರ್‌ ನೆರವಿನಿಂದ ವಿಭಿನ್ನ ಬೆಳಕು ಸಂಯೋಜಿಸಿ ಛಾಯೆಗಳನ್ನು ಬಿಡಲಾಗುತ್ತಿದೆ.

ಎಲ್ಲಿದೆ?: 77ಎಕರೆ ಪ್ರದೇಶಕ್ಕೆ ಪ್ರವೇಶ ದ್ವಾರವಾಗಿರುವ ಎಂಟ್ರನ್ಸ್‌ ಪ್ಲಾಜಾವನ್ನು ಪ್ರವೇಶಿಸಿದರೆ ಸಾಕು ಎದುರಿಗೆ ಸಿಗುವುದೇ ಸುಂದರವಾದ ಜಲ ದೇವತೆಯ ಮೂರ್ತಿ. ಅದರ ಕೆಳ ಭಾಗದಲ್ಲಿ ಕಂಪ್ಯೂಟರಗಳೂ ಸೇರಿದಂತೆ 3ಡಿ ತಂತ್ರಜ್ಞಾನಕ್ಕೆ ಬಳಕೆಯಾಗುವ ಸಲಕರಣೆಗಳಿಗೆ ಹಾನಿಯಾಗದಂತೆ ವಿಶೇಷವಾಗಿ ರಚಿಸಿರುವ ಕಟ್ಟಡದಿಂದ ಜಲ ದೇವತೆಯ ಪಾದದಡಿಯಲ್ಲಿರುವ ಸಣ್ಣ ಸಣ್ಣ ಕಿಟಕಿಗಳ ಮೂಲಕ ಕಿರಣಗಳನ್ನು ಹರಿಸಲಾಗುತ್ತದೆ. ಸಂಗೀತ ನೃತ್ಯ ಕಾರಂಜಿ ಹಾಗೂ ಲೇಸರ್‌ ಶೋಗಳನ್ನು ವೀಕ್ಷಿಸಿ ಹೊರ ಬರುವ ವೇಳೆಯಲ್ಲಿ ಎಂಟ್ರನ್ಸ್‌ ಪ್ಲಾಜಾದ ಗೋಡೆಗಳ ಮೇಲೆ 3ಡಿ ತಂತ್ರಜ್ಞಾನ ದೃಶ್ಯಗಳ ಪ್ರದರ್ಶನವಾಗಲಿವೆ.

ಏನೇನಿವೆ?: ಈಗ ಪ್ರಾಯೋಗಿಕವಾಗಿ ಪ್ರದರ್ಶಿಸಲ್ಪಡುತ್ತಿರುವ 3ಡಿ ಮ್ಯಾಪಿಂಗ್‌ನಲ್ಲಿ ಆನೆ, ಸಿಂಹ, ಹುಲಿ, ಅರಣ್ಯಕ್ಕೆ ಬೆಂಕಿ ಬಿದ್ದಾಗ ವನ್ಯ ಜೀವಿಗಳ ಚಲನೆ, ಪರೋಕ್ಷವಾಗಿ ಪರಿಸರ ರಕ್ಷಣೆಯ ಮಹತ್ವ, ಸ್ವಾತಂತ್ರ್ಯ ಹೋರಾಟಗಾರರು, ರಾಷ್ಟ್ರಪಿತ ಮಹಾತ್ಮ ಗಾಂಧೀಜಿ , ನೇತಾಜಿ ಸುಭಾಷ್‌ಚಂದ್ರ ಭೋಸ್‌, ಸರ್ದಾರ ವಲ್ಲಭಭಾಯಿ ಪಟೇಲ್‌, ಲಾಲ ಬಹಾದ್ದೂರ್‌ ಶಾಸ್ತ್ರಿ, ಕಿತ್ತೂರು ರಾಣಿ ಚನ್ನಮ್ಮ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹೀಗೆ ಹಲವಾರು ಮಹನೀಯರ ಭಾವಚಿತ್ರಗಳು ಪ್ರದರ್ಶನಗೊಳ್ಳಲಿವೆ.

ಲೋಕಾರ್ಪಣೆ: ಆ.21ರಂದು ಸಿಎಂ ಬಸವರಾಜ ಬೊಮ್ಮಾಯಿ ಕೃಷ್ಣೆಯ ಜಲನಿಧಿಗೆ ಗಂಗಾ ಪೂಜೆ ಹಾಗೂ ಬಾಗಿನ ಅರ್ಪಿಸಲು ಆಗಮಿಸುತ್ತಿದ್ದು, ಅದೇ ದಿನದಂದು ಸಿಎಂ ಲೋಕಾರ್ಪಣೆ ಮಾಡಲಿದ್ದಾರೆಂದು ಕೆಬಿಜೆನ್ನೆಲ್‌ ಮೂಲಗಳು ತಿಳಿಸಿವೆ.

Advertisement

ಕೃ.ಮೇ.ಯೋಜನೆ ಭಾಗವಾಗಿರುವ ಕೃಷ್ಣಾ ಭಾಗ್ಯ ಜಲ ನಿಗಮದ ವತಿಯಿಂದ ನಿರ್ಮಿಸಲಾಗಿರುವ 3ಡಿ ಮ್ಯಾಪಿಂಗ್‌ ಪ್ರೊಜೆಕ್ಟರ್‌ ಯೋಜನೆಗೆ ಸುಮಾರು
2.48 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇದನ್ನು ಬೆಂಗಳೂರಿನ ವೇಧಾ ಇಲೇಕ್ಟ್ರಿಕಲ್‌ನವರು ನಿರ್ವಹಿಸುತ್ತಿದೆ. ಇದನ್ನು ಎರಡು ವರ್ಷಗಳ ಕಾಲ
ಅದೇ ಕಂಪನಿ ಅದೇ ಮೊತ್ತದಲ್ಲಿ ನಿರ್ವಹಿಸಲಿದೆ.

ಈಗಾಗಲೇ ಆಲಮಟ್ಟಿಯ ಬೃಹತ್‌ ಜಲಾಶಯ, ವಿವಿಧ ಉದ್ಯಾನಗಳನ್ನು ವೀಕ್ಷಿಸಲು ಒಂದು ದಿನ ಸಾಕಾಗುವುದಿಲ್ಲ. ನೂತನ ತಂತ್ರಜ್ಞಾನಗಳನ್ನು ಬಳಸಿ ಕೊಂಡು ಇಂಥ ಯೋಜನೆ ಹಾಕಿಕೊಳ್ಳುವುದರಿಂದ ಇನ್ನಷ್ಟು ಪ್ರವಾಸಿಗರನ್ನು ಸೆಳೆಯಬಹುದಾಗಿದೆ.
ಮಲ್ಲು ರಾಠೊಡ, ತಾಪಂ ಮಾಜಿ ಸದಸ್ಯ

ಬಿಜೆಎನ್ನೆಲ್‌ ವತಿಯಿಂದ ಪ್ರವಾಸಿಗರ ಗಮನ ಸೆಳೆಯಲು ಸಾಕಷ್ಟು ಪ್ರಮಾಣದಲ್ಲಿ ಯೋಜನೆ ಹಾಕಿಕೊಂಡು ಅನುಷ್ಠಾನ ಮಾಡುತ್ತಿರುವುದರಿಂದ
ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಾವಿರಾರು ಕುಟುಂಬಗಳಿಗೆ ಆಶ್ರಯದಾತವಾಗಿದೆ.
ದೇವೇಂದ್ರ ಹಿರೇಮನಿ, ವ್ಯಾಪಾರಿ

*ಶಂಕರ ಜಲ್ಲಿ

Advertisement

Udayavani is now on Telegram. Click here to join our channel and stay updated with the latest news.

Next