Advertisement
ಒಂದು ವೇಳೆ ಸಲದ ಮೊತ್ತ ಈ ಪ್ರಮಾಣಕ್ಕೆ ಏರಿಕೆಯಾದರೆ ರಾಜ್ಯದ ಪ್ರತಿಯೊಬ್ಬ ಪ್ರಜೆಯ ತಲೆಯ ಮೇಲೆ ಸುಮಾರು 38 ಸಾವಿರ ರೂ.ಗಿಂತ ಹೆಚ್ಚು ಸಾಲದ ಹೊರೆ ಬೀಳಲಿದೆ. 2017-18ನೇ ಸಾಲಿನಲ್ಲಿ 1,86,561 ಕೋಟಿ ರೂ.ನ ಬಜೆಟ್ ಮಂಡಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಇದನ್ನು ಕಾರ್ಯರೂಪಕ್ಕೆ ತರಲು 1,44,892 ಕೋಟಿ ರೂ. ರಾಜಸ್ವ ಜಮೆಗಳ ಜತೆಗೆ 37,092 ಕೋಟಿ ರೂ. ಸಾಲ ಮಾಡುವ ಬಗ್ಗೆ ಪ್ರಸ್ತಾಪಿಸಿದ್ದರು. ಇದರಿಂದಾಗಿ ವರ್ಷಾಂತ್ಯಕ್ಕೆ ಸಾಲದ ಮೊತ್ತ 2,42,420 ಕೋಟಿ ರೂ. ತಲುಪಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಆದಾಯ ಸಂಗ್ರಹದಲ್ಲಿ ಕುಸಿತ ಮತ್ತು ವೆಚ್ಚ ಹೆಚ್ಚಳದಿಂದಾಗಿ ಸಾಲದ ಪ್ರಮಾಣ ಈ ವರ್ಷ 45 ಸಾವಿರ ಕೋಟಿ ರೂ. ದಾಟುವ ಆತಂಕ ಕಾಣಿಸಿಕೊಂಡಿದೆ.
Related Articles
Advertisement
ಸಾಲ ಮಾಡಲೇಬೇಕೇ?: ಪ್ರತಿ ವರ್ಷ ಬಜೆಟ್‌ನಲ್ಲಿ ನಿರೀಕ್ಷಿಸಿದ ಆದಾಯ ಸಂಗ್ರಹವಾಗುವುದೂ ಇಲ್ಲ, ಹೇಳಿದಷ್ಟು ವೆಚ್ಚವೂ ಮಾಡಲು ಸಾಧ್ಯವಾಗುತ್ತಿಲ್ಲ. ಬಜೆಟ್ ನಿರೀಕ್ಷೆಯಂತೆ 2017-18ನೇ ಸಾಲಿನಲ್ಲಿ ಎಲ್ಲಾ ಮೂಲಗಳಿಂದ 1,44,892 ರೂ. ಆದಾಯ ಸಂಗ್ರಹವಾಗಬೇಕಾದರೂ ಸದ್ಯದ ಪರಿಸ್ಥಿತಿಯಲ್ಲಿ ನಿಗದಿತ ಆದಾಯ ಸಂಗ್ರಹ ಕಷ್ಟಸಾಧ್ಯ ಎನ್ನಲಾಗಿದೆ. ಅದೇ ರೀತಿ ವೆಚ್ಚದ ಪ್ರಮಾಣವೂ 1,86,561 ಮುಟ್ಟುವ ಸಾಧ್ಯತೆ ಇಲ್ಲ.
ಆದರೆ, ಈ ಬಾರಿ ಸರ್ಕಾರಕ್ಕೆ ಹೆಚ್ಚುವರಿ ವೆಚ್ಚದ ಅನಿವಾರ್ಯತೆ ಸೃಷ್ಟಿಯಾಗಿರುವುದರಿಂದ ಸಾಲ ಮಾಡಲೇಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ ಎನ್ನುತ್ತವೆ ಆರ್ಥಿಕ ಇಲಾಖೆ ಮೂಲಗಳು. ಈಗಾಗಲೇ ಸರ್ಕಾರದ ಮೇಲೆ 2.05 ಲಕ್ಷ ಕೋಟಿ ಸಾಲವಿದೆ. ಪ್ರಸಕ್ತ ಆರ್ಥಿಕ ಸಾಲಿನಲ್ಲಿ 37,092 ಸಾವಿರ ಕೋಟಿ ಸಾಲ ಮಾಡುವ ಬಗ್ಗೆ ಪ್ರಸ್ತಾಪಿಸಲಾಗಿದ್ದು, ಆಗ ವರ್ಷಾಂತ್ಯಕ್ಕೆ ಸಾಲದ ಮೊತ್ತ 2,42,420 ಕೋಟಿ ರೂ. ತಲುಪಲಿದೆ ಎಂಬ ನಿರೀಕ್ಷೆ ಹೊಂದಲಾಗಿತ್ತು. ಆದರೆ, ಈಗ ಆಗಿರುವ ಮತ್ತು ಮುಂದೆ ಆಗಲಿರುವ ಹೆಚ್ಚುವರಿ ವೆಚ್ಚ ಹೊಂದಾಣಿಕೆ ಮಾಡಲು ಇತರೆ ಇಲಾಖೆಗಳಿಗೆ ನೀಡಿರುವ ಅನುದಾನ ಕಡಿತಗೊಳಿಸಬೇಕಾಗುತ್ತದೆ. ಶೀಘ್ರದಲ್ಲೇ ಚುನಾವಣೆ ಬರುತ್ತಿರುವುದರಿಂದ ಅನುದಾನ ಕಡಿತಗೊಳಿಸಿದರೆ ರಾಜಕೀಯವಾಗಿ ಸಮಸ್ಯೆ ಎದುರಿಸಬೇಕಾಗುತ್ತದೆ. ಹೀಗಾಗಿ ಹೆಚ್ಚುವರಿ ಸಾಲ ಪಡೆದೇ ಯೋಜನೆಗಳಿಗೆ ಹಣ ಒದಗಿಸಬೇಕು. ಇದರಿಂದ ಸಾಲದ ಮೊತ್ತ 2.5 ಲಕ್ಷ ರೂ. ಮೀರಬಹುದು ಎಂದು ಹೇಳಲಾಗಿದೆ.
ಇಷ್ಟಾದರೂ ಒಟ್ಟಾರೆ ಸಾಲದ ಮೊತ್ತ ರಾಜ್ಯದ ಆಂತರಿಕ ಉತ್ಪನ್ನದ ಶೇ. 20ರ ಆಸುಪಾಸು ಇರಲಿದ್ದು, ಇದು ವಿತ್ತೀಯ ಹೊಣೆಗಾರಿಕೆ ಅಧಿನಿಯಮದಲ್ಲಿರುವಂತೆ ಒಟ್ಟು ಆಂತರಿಕ ಉತ್ಪನ್ನದ ಶೇ. 25ರೊಳಗೆ ಇರುತ್ತದೆ. ಹೀಗಾಗಿ ಆರ್ಥಿಕ ಅಶಿಸ್ತಿನ ಪ್ರಶ್ನೆ ಉದ್ಭವವಾಗುವುದಿಲ್ಲ ಎನ್ನುತ್ತಾರೆ ಅಧಿಕಾರಿಗಳು.
ಸಾಲದ ಹೊರೆ2013ರಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ ಇದ್ದ ಸಾಲ- 1.12 ಲಕ್ಷ ಕೋಟಿ ರೂ.
2013-14ರ ಅಂತ್ಯಕ್ಕೆ ಸಾಲದ ಮೊತ್ತ- 1.36 ಕೋಟಿ ರೂ.
2014-15ರ ಅಂತ್ಯಕ್ಕೆ ಸಾಲದ ಮೊತ್ತ- 1.55 ಲಕ್ಷ ಕೋಟಿ ರೂ.
2015-16ರ ಅಂತ್ಯಕ್ಕೆ ಸಾಲದ ಮೊತ್ತ- 1.80 ಲಕ್ಷ ಕೋಟಿ ರೂ.
2016-17ರ ಅಂತ್ಯಕ್ಕೆ ಸಾಲದ ಮೊತ್ತ- 2.05 ಲಕ್ಷ ಕೋಟಿ ರೂ.
2017-18ರ ಅಂತ್ಯಕ್ಕೆ ನಿರೀಕ್ಷಿತ ಸಾಲ- 2.42 ಲಕ್ಷ ಕೋಟಿ ರೂ. – ಪ್ರದೀಪ್ ಕುಮಾರ್ ಎಂ.