ಬೆಂಗಳೂರು: ರಾಜ್ಯ ಸರ್ಕಾರ ಮುಂದಿನ ತಿಂಗಳಿಂದ ಜಾರಿಗೆ ತರಲು ನಿರ್ಧರಿಸಿರುವ “ದಾಸೋಹ’ ಯೋಜನೆಯಿಂದ ಮಠ-ಮಾನ್ಯಗಳು ಸೇರಿದಂತೆ ರಾಜ್ಯದ 217 ಕಲ್ಯಾಣ ಸಂಸ್ಥೆಗಳ 38 ಸಾವಿರ ಜನರಿಗೆ ಪ್ರಯೋಜನ ಸಿಗಲಿದೆ.
ತುಮಕೂರಿನ ಸಿದ್ಧಗಾಂಗ ಮಠ, ಮಂಡ್ಯದ ಆದಿಚುಂಚನಗಿರಿ ಮಠ ಸೇರಿದಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ನಡೆಸಲಾಗುತ್ತಿರುವ ಪುನರ್ವಸತಿ ಕೇಂದ್ರಗಳು, ರೀಮ್ಯಾಂಡ್ ಹೋಂಗಳು, ಕ್ರೈಸ್ತರು, ಮುಸ್ಲಿಮರು, ಹಿಂದುಳಿದ ವರ್ಗದವರು ನಡೆಸುತ್ತಿರುವ ಕಲ್ಯಾಣ ಸಂಸ್ಥೆಗಳು, ವಿವಿಧ ಸ್ವಯಂಸೇವಾ ಸಂಸ್ಥೆಗಳು ನಡೆಸುತ್ತಿರುವ ವಸತಿ ನಿಲಯ, ಪುನರ್ವಸತಿ ಕೇಂದ್ರಗಳ ಬೇಡಿಕೆ ಪಟ್ಟಿ ಆಹಾರ ಇಲಾಖೆ ಬಳಿ ಸಿದ್ಧಗೊಂಡಿದೆ.
ಆಹಾರ ಇಲಾಖೆ ಬಳಿ ಇರುವ ಪಟ್ಟಿಯಂತೆ ಸಿದ್ಧಗಂಗಾಮಠದ 7 ಸಾವಿರ ಹಾಗೂ ಆದಿಚುಂಚನಗಿರಿ ಮಠದ 3,600 ಫಲಾನುಭವಿಗಳು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ 217 ಕಲ್ಯಾಣ ಸಂಸ್ಥೆಗಳ ಒಟ್ಟು 38,434 ಫಲಾನುಭವಿಗಳು “ದಾಸೋಹ’ ಯೋಜನೆಯ ಪ್ರಯೋಜನ ಪಡೆಯಲಿದ್ದಾರೆ. ಒಬ್ಬರಿಗೆ ತಿಂಗಳಿಗೆ 15 ಕೆ.ಜಿಯಂತೆ ಮುಂದಿನ 6 ತಿಂಗಳಿಗೆ ಬೇಕಾಗುವಷ್ಟು ಅಕ್ಕಿಯನ್ನು ಮುಂದಿನ ತಿಂಗಳಿಂದ ರಾಜ್ಯ ಆಹಾರ ನಿಗಮದ ದಾಸ್ತಾನು ಮಳಿಗೆಗಳಿಂದ ನೇರವಾಗಿ ಆಯಾ ಕಲ್ಯಾಣ ಸಂಸ್ಥೆಗಳಿಗೆ ಸರಬರಾಜು ಮಾಡಲಾಗುತ್ತದೆ.
ಆಹಾರ ಭದ್ರತಾ ಕಾಯ್ದೆಯಂತೆ ಪಡಿತರ ವಿತರಣಾ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಪ್ರತಿ ತಿಂಗಳು 2.17 ಲಕ್ಷ ಮೆಟ್ರಿಕ್ ಟನ್ ಆಹಾರಧಾನ್ಯ ಬರುತ್ತದೆ. ಅದರಲ್ಲಿ ಶೇ.5ರಷ್ಟು ಅಂದರೆ ಅಂದಾಜು ಆಹಾರಧಾನ್ಯವನ್ನು ಕಲ್ಯಾಣ ಸಂಸ್ಥೆಗಳಿಗೆ ಕೊಡಬೇಕು ಎಂಬ ನಿಯಮವಿದೆ. ಅದರಂತೆ 10,870 ಮೆಟ್ರಿಕ್ ಟನ್ ಅಕ್ಕಿಯನ್ನು ಕೆ.ಜಿ. 3ರೂ.ಗಳಂತೆ ಕಲ್ಯಾಣ ಸಂಸ್ಥೆಗಳಿಗೆ ನೀಡಲು ಅವಕಾಶವಿದೆ. 217 ಕಲ್ಯಾಣ ಸಂಸ್ಥೆಗಳ ಪಟ್ಟಿ ಇದ್ದರೂ, ಸಿದ್ಧಗಂಗಾಮಠ ಹಾಗೂ ಆದಿಚುಂಚನಗಿರಿ ಮಠ ಇಲ್ಲಿವರೆಗಿನ ಅತಿದೊಡ್ಡ ಫಲಾನಭುವಿ ಸಂಸ್ಥೆಗಳಾಗಿದ್ದವು. ಉಳಿದ ಕಲ್ಯಾಣ ಸಂಸ್ಥೆಗಳಿಂದ ಅಷ್ಟೊಂದು ಪ್ರಮಾಣದಲ್ಲಿ ಬೇಡಿಕೆ ಬರುತ್ತಿರಲಿಲ್ಲ. ಈಗ ದಾಸೋಹ ಯೋಜನೆಯಡಿ ಅಕ್ಕಿಯನ್ನು ಉಚಿತವಾಗಿ ನೀಡಲಾಗುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಎಲ್ಲ ಸಂಸ್ಥೆಗಳಿಗೂ ಹೆಚ್ಚಿನ ಪ್ರಯೋಜನ ಆಗಲಿದೆ ಎಂದು ಆಹಾರ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.