ಹೊಸದಿಲ್ಲಿ: 2024 ರ ಲೋಕಸಭಾ ಚುನಾವಣೆಗೆ ಭರ್ಜರಿ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದ್ದು ಕಾಂಗ್ರೆಸ್ ನೇತೃತ್ವದಲ್ಲಿ ವಿಪಕ್ಷಗಳ ಎರಡನೇ ಸುತ್ತಿನ ಸಭೆ ನಡೆಯುತ್ತಿದ್ದು, ಬಿಜೆಪಿ ನೇತೃತ್ವದ ಎನ್ ಡಿಎ ಮಿತ್ರ ಪಕ್ಷಗಳೊಂದಿಗೆ ಜುಲೈ 18 ರಂದು ಮಹತ್ವದ ಸಭೆ ನಡೆಸುತ್ತಿದೆ.
ರಾಷ್ಟ್ರ ರಾಜಧಾನಿಯಲ್ಲಿ ಮಂಗಳವಾರ ನಡೆಯಲಿರುವ ಆಡಳಿತಾರೂಢ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ಸಭೆಯಲ್ಲಿ 38 ಪಕ್ಷಗಳ ನಾಯಕರು ಭಾಗವಹಿಸುವುದನ್ನು ಖಚಿತಪಡಿಸಿದ್ದಾರೆ ಎಂದು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ತಿಳಿಸಿದ್ದಾರೆ.
ಇದನ್ನೂ ಓದಿ: NDA ಕಡೆಗೆ ಜನರ ಒಲವು, ನಮ್ಮ ಮೈತ್ರಿ ಅಧಿಕಾರಕ್ಕಾಗಿ ಅಲ್ಲ: ನಡ್ಡಾ
ನರೇಂದ್ರ ಮೋದಿ ಸರ್ಕಾರದ ಯೋಜನೆಗಳು ಮತ್ತು ನೀತಿಗಳ ಸಕಾರಾತ್ಮಕ ಪರಿಣಾಮದಿಂದಾಗಿ ಎನ್‌ಡಿಎ ಮಿತ್ರ ಪಕ್ಷಗಳು ಲವಲವಿಕೆಯಿಂದ ಕೂಡಿವೆ ಎಂದು ನಡ್ಡಾ ಹೇಳಿದ್ದಾರೆ.
ಎನ್‌ಡಿಎ ಸಭೆಯು ಅಸ್ತಿತ್ವದಲ್ಲಿರುವ ಮತ್ತು ಹೊಸ ಬಿಜೆಪಿ ಮಿತ್ರಪಕ್ಷಗಳ ಉಪಸ್ಥಿತಿಯನ್ನು ಕಾಣಲಿದ್ದು, ಆಡಳಿತ ಪಕ್ಷವು ಇತ್ತೀಚಿನ ವಾರಗಳು ಮತ್ತು ತಿಂಗಳುಗಳಲ್ಲಿ ಹೊಸ ಮೈತ್ರಿಗಳನ್ನು ಮಾಡಿಕೊಳ್ಳುತ್ತಿದ್ದು, ಮೈತ್ರಿ ತೊರೆದವರನ್ನು ಮರಳಿ ಸೆಳೆಯಲು ಕೆಲಸ ಮಾಡಿದೆ.