ಹುಬ್ಬಳ್ಳಿ: ಸಂಸತ್ ಅಧಿವೇಶನದಲ್ಲಿ ಈ ಬಾರಿ ಸುಮಾರು 38 ಹೊಸ ಬಿಲ್‌ಗಳು ಹಾಗೂ 10 ಸುಗ್ರೀವಾಜ್ಞೆಗಳು ಮಂಡನೆಯಾಗಲಿದ್ದು, ಅದರಲ್ಲಿ 10 ಸುಗ್ರೀವಾಜ್ಞೆ ಹಾಗೂ 30 ಮಸೂದೆಗಳನ್ನು ತುರ್ತಾಗಿ ಪಾಸ್ ಮಾಡಬೇಕಾಗಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರ, ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಮ್ಮು ಮತ್ತು ಕಾಶ್ಮೀರದಲ್ಲಿ ರಾಷ್ಟ್ರಪತಿ ಆಡಳಿತ ವಿಸ್ತರಣೆ, ತ್ರಿವಳಿ ತಲಾಖ್ ನಿಷೇಧ ಸೇರಿ ಪ್ರಮುಖ ಮಸೂದೆಗಳಿವೆ. ವಿಪಕ್ಷಗಳ ಸಹಕಾರದೊಂದಿಗೆ ಈ ಅಧಿವೇಶನದಲ್ಲಿ ಮಸೂದೆಗಳಿಗೆ ಅನುಮೋದನೆ ಪಡೆಯಲಾಗುವುದು ಎಂದರು.
ನಾಗರಿಕತ್ವ (ಸಿಟಿಜನ್‌ಶಿಪ್) ಮಸೂದೆ ಮಂಡನೆ ಸಲುವಾಗಿ ಎಲ್ಲರ ಸಹಮತ ಮೂಡಿಸುವ ಕಾರ್ಯ ಮಾಡಲಾಗುವುದು. ಈ ವಿಷಯವಾಗಿ ಆಯ್ಕೆ ಸಮಿತಿಯ ವರದಿ ಬಂದ ಮೇಲೆ ಯಾವ ರೀತಿ ಮುಂದುವರಿಯಬೇಕೆಂದು ಗೃಹ ಸಚಿವರು ಎಲ್ಲರೊಂದಿಗೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದರು.
ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗದ ಅನುಷ್ಠಾನವು 2000-04ರಲ್ಲಿ ಸುಲಭವಾಗಿತ್ತು. ಆ ಸಂದರ್ಭದಲ್ಲಿ ರಾಜ್ಯ ಸರಕಾರ ಮುತುವರ್ಜಿ ವಹಿಸಿ ತ್ವರಿತವಾಗಿ ಎಲ್ಲ ಕ್ಲಿಯರೆನ್ಸ್ ಪಡೆದು, ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರೆ ಪೂರ್ಣಗೊಳ್ಳುತ್ತಿತ್ತು. ಈಗ ಇರುವ ಸಮಸ್ಯೆಗಳು ಉದ್ಭವಿಸುತ್ತಿರಲಿಲ್ಲ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷಕ್ಕೆ ನೀತಿ-ನಿಯಮಗಳಿಲ್ಲ. ಆ ಪಕ್ಷ ಎಡಬಿಡಂಗಿತನದಿಂದಾಗಿ ಹಾಳಾಗುತ್ತಿದೆ. ರಾಜ್ಯ ಕಾಂಗ್ರೆಸ್ ಮುಕ್ತವಾಗುವ ದಿನಗಳು ದೂರ ಇಲ್ಲ. ನಿಖೀಲ್ ಕುಮಾರಸ್ವಾಮಿ ಚುನಾವಣೆಗೆ ಸಿದ್ಧರಾಗಿ ಎಂದರೆ, ಮುಖ್ಯಮಂತ್ರಿ ಅದಕ್ಕೆ ತೇಪೆ ಹಚ್ಚುವ ಕೆಲಸ ಮಾಡಿದ್ದಾರೆ. ಒಟ್ಟಾರೆ ಈ ಸರಕಾರ ಉಳಿಸಿಕೊಳ್ಳಬೇಕು. ಲೂಟಿ ಮಾಡಬೇಕೆಂಬುದೇ ಅವರ ನಿಲುವಾಗಿದೆ.
-ಪ್ರಹ್ಲಾದ ಜೋಶಿ, ಕೇಂದ್ರ ಸಂಸದೀಯ ವ್ಯವಹಾರ, ಗಣಿ ಮತ್ತು ಕಲ್ಲಿದ್ದಲು ಸಚಿವ