ಬೆಂಗಳೂರು: ಇದೇ ತಿಂಗಳ 14ರಂದು ನಡೆದ ರಾಷ್ಟ್ರೀಯ ಲೋಕ್ ಅದಾಲತ್‌ನಲ್ಲಿ ಒಟ್ಟು 38.80 ಲಕ್ಷ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ ಎಂದು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯ ನಿರ್ವಾಹಕ ಅಧ್ಯಕ್ಷ ಹಾಗೂ ಹೈಕೋರ್ಟ್ ನ್ಯಾಯಮೂರ್ತಿ ವಿ.ಕಾಮೇಶ್ವರ್ ರಾವ್ ತಿಳಿಸಿದ್ದಾರೆ.
ಹೈಕೋರ್ಟ್‌ನಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಡಿ. 14ರಂದು ನಡೆದ ರಾಷ್ಟ್ರೀಯ ಲೋಕ್ ಅದಾಲತ್‌ನಲ್ಲಿ ಒಟ್ಟು 38,80,881 ಪ್ರಕರಣ ಇತ್ಯರ್ಥಪಡಿಸಲಾಗಿದ್ದು, ಒಟ್ಟು ಪರಿಹಾರ ಮೊತ್ತ 2,248 ಕೋಟಿ ರೂ. ಆಗಿದೆ. ಎಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ವೈವಾಹಿಕ ಪ್ರಕರಣಗಳನ್ನು ಹೆಚ್ಚು ಇತ್ಯರ್ಥಪಡಿಸುವಂತೆ ಉತ್ತೇಜಿಸಲಾಗಿತ್ತು. ಹೀಗಾಗಿ ಒಟ್ಟು 1,581 ವೈವಾಹಿಕ ಪ್ರಕರಣಗಳನ್ನು ಇತ್ಯರ್ಥಪಡಿಸಿ, 307 ದಂಪತಿ ರಾಜಿ ಸಂಧಾನದಿಂದ ಪುನಃ ಒಂದಾಗಿ ಜೀವನ ನಡೆಸಲು ತೀರ್ಮಾನಿಸಿ ಪ್ರಕರಣ ಇತ್ಯರ್ಥಪಡಿಸಲಾಗಿದೆ ಎಂದರು.
11,262 ಚೆಕ್ ಬೌನ್ಸ್ ಪ್ರಕರಣ ಇತ್ಯರ್ಥ: ವಿಭಾಗ ದಾವೆಯಲ್ಲಿ 3,311 ಪ್ರಕರಣ, ಮೋಟಾರು ವಾಹನ ಅಪರಾಧ ಪರಿಹಾರ ಸಂಬಂಧ 5,168 ಪ್ರಕರಣ ಹಾಗೂ 260 ಕೋಟಿಗಳಷ್ಟು ಪರಿಹಾರ ಮೊತ್ತತಕ್ಕೆ ಇತ್ಯರ್ಥಪಡಿಸಲಾಗಿದೆ. 11,262 ಚೆಕ್ ಬೌನ್ಸ್ ಪ್ರಕರಣಗಳನ್ನು ಇತ್ಯರ್ಥವಾಗಿದೆ. ಎಲ್‌ಎಸಿ ಎಕ್ಸಿಕ್ಯೂಷನ್‌ಗೆ ಸಂಬಂಧ 597 ಪ್ರಕರಣ, 73 ಕೋಟಿ ರೂ. ಪರಿಹಾರ ಮೊತ್ತಕ್ಕೆ ಇತ್ಯರ್ಥವಾಗಿದೆ. ಎಂವಿಸಿ ಎಕ್ಸಿಕ್ಯೂಷನ್‌ಗೆ ಸಂಬಂಧ 1,004 ಪ್ರಕರಣಗಳನ್ನು 82 ಕೋಟಿ ರೂ. ಪರಿಹಾರ ಮೊತ್ತಕ್ಕೆ ಇತ್ಯರ್ಥವಾಗಿದೆ . 3,432 ಇತರೆ ಅಮಲ್ಜಾರಿ ಪ್ರಕರಣ ಇತ್ಯರ್ಥವಾಗಿದೆ. 132 ಕೋಟಿ ರೂ. ಇತ್ಯರ್ಥದ ಮೊತ್ತವಾಗಿದೆ. ಒಟ್ಟು 82 ರೇರಾ ಕೇಸುಗಳು ಇತ್ಯರ್ಥಪಡಿಸಲಾಗಿದೆ. 5.28 ಕೋಟಿ ರೂ. ಇತ್ಯರ್ಥವಾಗಿದೆ. 611 ಗ್ರಾಹಕರ ವ್ಯಾಜ್ಯಗಳು ಬಗೆಹರಿದು 3.53 ಕೋಟಿ ರೂ. ಮೊತ್ತಕ್ಕೆ ಇತ್ಯರ್ಥವಾಗಿದೆ ಎಂದರು.
ಈ ಬಾರಿಯ ರಾಷ್ಟ್ರೀಯ ಲೋಕ್ ಅದಾಲತ್ ನಲ್ಲಿ 5 ವರ್ಷ ಮತ್ತು ಅದಕ್ಕೂ ಹಳೆಯ ವರ್ಷಗಳ 2,259 ಪ್ರಕರಣಗಳು, 10 ವರ್ಷ ಮತ್ತು ಅದಕ್ಕೂ ಹಳೆಯ ವರ್ಷಗಳ 261 ಪ್ರಕರಣಗಳು ಹಾಗೂ 15 ವರ್ಷ ಮತ್ತು ಅದಕ್ಕೂ ಹಳೆಯ ವರ್ಷಗಳ 68 ಪ್ರಕರಣಗಳು ಸೇರಿ ಒಟ್ಟು 2,588 ಹಳೆಯ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. 1,921 ಪ್ರಕರಣಗಳಲ್ಲಿ ಹಿರಿಯ ನಾಗರಿಕರು ತಮ್ಮ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಂಡಿದ್ದಾರೆ.
ಮಾ.8ಕೆ ಮುಂದಿನ ಅದಾಲತ್ :
ಪ್ರಾಧಿಕಾರದ ನಿರ್ದೇಶನದ ಮೇರೆಗೆ 2025ನೇ ಸಾಲಿನ ಮೊದಲನೇ ರಾಷ್ಟ್ರೀಯ ಲೋಕ್ ಅದಾಲತನ್ನು 2025ರ ಮಾ. 8ರಂದು ನಿಗದಿಪಡಿಸಲಾಗಿದೆ. ಕಕ್ಷಿದಾರರು ವ್ಯಾಜ್ಯ ಪೂರ್ವ ಪ್ರಕರಣಗಳ ರಾಷ್ಟ್ರೀಯ ಲೋಕ್ ಅದಾಲತ್‌ನಲ್ಲಿ ಇತ್ಯರ್ಥಪಡಿಸಿ ಕೊಳ್ಳಬಹುದು ಎಂದು ನ್ಯಾಯಮೂರ್ತಿ ವಿ.ಕಾಮೇಶ್ವರ್ ರಾವ್ ತಿಳಿಸಿದ್ದಾರೆ.