ರಾಯಚೂರು: ಸತತ ಹೋರಾಟ, ಅನೇಕ ಮುಖಂಡರ ಅವಿರತ ಶ್ರಮದಿಂದ ಹೈದರಾಬಾದ್ ಕರ್ನಾಟಕ ಭಾಗಕ್ಕೆ 371 (ಜೆ) ಕಲಂ ಜಾರಿಯಾಗಿದೆ. ಆದರೆ, ಆಳುವ ಸರ್ಕಾರಗಳು ಸಮರ್ಪಕ ಅನುಷ್ಠಾನಕ್ಕೆ ಮೀನ-ಮೇಷ ಎಣಿಸುತ್ತಿರುವುದು ಖಂಡನೀಯ ಎಂದು ಮಾಜಿ ಸಚಿವ ವೈಜನಾಥ ಪಾಟೀಲ್ ಬೇಸರ ವ್ಯಕ್ತಪಡಿಸಿದರು.
ಹೈದರಾಬಾದ್ ಕರ್ನಾಟಕ ಜನಾಂದೋಲನಾ ಕೇಂದ್ರ ದಿಂದ ನಗರದ ಪಂ. ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ರವಿವಾರ ಸಂಜೆ ನಡೆದ ಸಮಾರಂಭದಲ್ಲಿ ಸ್ವಾಮಿ ರಾಮಾನಂದ ತೀರ್ಥ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು. ಮೀಸಲಾತಿ ಬಗ್ಗೆ ಆಕ್ಷೇಪ ಹೆಚ್ಚುತ್ತಿದ್ದು, ಅಂಥ ವಿಚಾರಗಳಿಗೆ ಕಡಿವಾಣ ಬೀಳಬೇಕು. ಈಗಿರುವ ಲೋಪಗಳನ್ನು ಸರಿಪಡಿಸಿಕೊಂಡು ಹೋಗಬೇಕಿದೆ ಎಂದರು.
ಹಿರಿಯ ಸಾಹಿತಿ ಪ್ರೊ| ವಸಂತ ಕುಷ್ಟಗಿ ಮಾತನಾಡಿ, ದೇಶದಲ್ಲಿ ಏಕತೆಗಾಗಿ ಹೋರಾಡಿದ ಕೀರ್ತಿ ಸ್ವಾಮಿ ರಾಮಾನಂದ ತೀರ್ಥರಿಗೆ ಸಲ್ಲುತ್ತದೆ. ಸೇವೆಯಲ್ಲಿ ಅವರು ಮಹಾತ್ಮಗಾಂಧಿ ಇದ್ದಂತೆ. ಅಂಥವರ ಸ್ಮರಣೆ ಮಾಡುವುದು ಎಲ್ಲರ ಕರ್ತವ್ಯ. ಅವರ ಹೆಸರಿನ ಪ್ರಶಸ್ತಿಗೆ ಆತ್ಮವಿಶ್ವಾಸದ ಪ್ರತೀಕವಾದ ವೈಜನಾಥ ಪಾಟೀಲರು ಸೂಕ್ತ ಎಂದರು.
ಹೈ-ಕ ಹೋರಾಟ ಸಮಿತಿ ಉಪಾಧ್ಯಕ್ಷ ಡಾ| ರಜಾಕ ಉಸ್ತಾದ್ ವಿಶೇಷ ಉಪನ್ಯಾಸ ನೀಡಿ, ವಿಶೇಷ ಸ್ಥಾನಮಾನದಿಂದ ಈ ಭಾಗದ ಅನೇಕ ವಿದ್ಯಾರ್ಥಿಗಳಿಗೆ ಹಾಗೂ ನಿರುದ್ಯೋಗಿಗಳಿಗೆ ಅನುಕೂಲವಾಗಿದೆ. ಅಭಿವೃದ್ಧಿಗಾಗಿ ಸಾಕಷ್ಟು ಅನುದಾನ ಹರಿದುಬರುತ್ತಿದೆ. ಇದಕ್ಕೆ ವೈಜನಾಥ ಪಾಟೀಲ್ ಅವರೇ ಕಾರಣ ಎಂದು ಬಣ್ಣಿಸಿದರು. ಹಿರಿಯ ಪತ್ರಕರ್ತ ಎಂ.ಕೆ. ಭಾಸ್ಕರರಾವ್ ಮಾತನಾಡಿ, ಸ್ವಾಮಿ ರಾಮಾನಂದ ತೀರ್ಥರ ಅಧ್ಯಯನ ಕೇಂದ್ರ ಸ್ಥಾಪನೆಗೆ ಈ ಭಾಗದ ಎಲ್ಲ ಜನಪ್ರತಿನಿಧಿಗಳು ಶ್ರಮಿಸಬೇಕು ಎಂದರು.
ಸಾಮಾಜಿಕ ಪರಿವರ್ತನಾ ಆಂದೋಲನ ಮುಖಂಡರಾದ ಎಸ್.ಆರ್ ಹಿರೇಮಠ, ಹಿರಿಯ ಪತ್ರಕರ್ತ ಶ್ರೀನಿವಾಸ ಶಿರನೂಕರ್, ಜನಾಂದೋಲನ ಕೇಂದ್ರದ ಅಧ್ಯಕ್ಷ ಕೆ.ರಾಮಕೃಷ್ಣ ಮಾತನಾಡಿದರು. ನಗರ ಶಾಸಕ ಡಾ| ಶಿವರಾಜ ಪಾಟೀಲ್, ಜನಾಂದೋಲನ ಕೇಂದ್ರದ ಮುಖಂಡ ರಾಘವೇಂದ್ರ ಕುಷ್ಟಗಿ, ಡಾ| ವಿ.ಎ.ಮಾಲಿಪಾಟೀಲ್, ನಗರಸಭೆ ಅಧ್ಯಕ್ಷ ಜಯಣ್ಣ, ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ್, ಡಾ| ಆನಂದ ತೀರ್ಥ ಸೇರಿ ಇತರರಿದ್ದರು.
ಹೈಕ ಭಾಗಕ್ಕೆ ವಿಶೇಷ ಸ್ಥಾನಮಾನ ಸಿಕ್ಕಿರುವುದು ಒಂದೆರಡು ವರ್ಷದ ಕತೆಯಲ್ಲ. ಇದರ ಹಿಂದೆ ಸಾಕಷ್ಟು ಜನರ ಶ್ರಮ ಅಡಗಿದೆ. ಆದರೆ, ಸರ್ಕಾರಗಳು ಇಲ್ಲಸಲ್ಲದ ನೆಪ ಹೇಳಿ ಈ ಭಾಗಕ್ಕೆ ಸೌಲಭ್ಯ ದಕ್ಕದಂತೆ ಮಾಡುತ್ತಿವೆ. ಇದು ತೆಲಂಗಾಣ, ಆಂಧ್ರ ಮಾದರಿ ವೈಮನಸ್ಸಿಗೆ ಎಡೆ ಮಾಡುತ್ತಿದೆ. ಈ ಬಗ್ಗೆ ಸಮಾನ ಮನಸ್ಕರು ಮತ್ತೂಮ್ಮೆ ಚಿಂತನೆ ನಡೆಸಿ ಸೂಕ್ತ ನಿರ್ಧಾರಕ್ಕೆ ಬರಬೇಕಿದೆ.
ವೈಜನಾಥ ಪಾಟೀಲ್ ಮಾಜಿ ಸಚಿವರು